Advertisement

ಕೋವಿಡ್‌ ಕೃಪೆಗೆ ಡಿಗ್ರಿ ಕಾಲೇಜ್‌ ಹೌಸ್‌ಫುಲ್‌! ನೂತನ ಶಿಕ್ಷಣ ನೀತಿಯ ಆಯ್ಕೆ ಗೊಂದಲ

05:51 PM Sep 15, 2021 | Team Udayavani |

ರಾಯಚೂರು: ಕೊರೊನಾ ಕೃಪೆಯಿಂದ ಪಿಯುಸಿ ಪರೀಕ್ಷೆಗೆ ಹಾಜರಾದ ಪ್ರತಿ ವಿದ್ಯಾರ್ಥಿಯೂ ಉತ್ತೀರ್ಣಗೊಂಡಿದ್ದು, ಅದರ ನೇರ ಪರಿಣಾಮ ಪದವಿ ವ್ಯಾಸಂಗದ ಮೇಲಾಗಿದೆ. ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪ್ರವೇಶಕ್ಕೆ ಬರೋಬ್ಬರಿ 900ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲೂ ಕಲಾ ವಿಭಾಗಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

Advertisement

ಸಹಜವಾಗಿ ಈ ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಈ ಕಾಲೇಜನ್ನೇ ನೆಚ್ಚಿಕೊಳ್ಳುತ್ತಾರೆ. ಈ ಬಾರಿ ಕೊರೊನಾ ಕೃಪೆಯಿಂದ ಪಾಸಾದ ಪಿಯುಸಿ ಬ್ಯಾಚ್‌ ಕೂಡ ದಾಂಗುಡಿ ಇಟ್ಟಿದ್ದು, ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇರುವಾಗಲೇ 900ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 3551 ಇತ್ತು. ಕಲಾ ವಿಭಾಗದಲ್ಲಿ 663 ವಿದ್ಯಾರ್ಥಿಗಳು ದಾಖಲಾದರೆ, ಬಿಕಾಂನಲ್ಲಿ 388, ಬಿಎಸ್ಸಿಯಲ್ಲಿ 171 ಹಾಗೂ ಬಿಸಿಎದಲ್ಲಿ 40 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.

ಅರ್ಜಿ ಸಲ್ಲಿಕೆಗೆ ಇನ್ನೂ ಸೆ.30 ಕೊನೆ ದಿನವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾದರೂ ಅಚ್ಚರಿ ಪಡುವಂತಿಲ್ಲ. ಸರ್ಕಾರ ಯಾವ ವಿದ್ಯಾರ್ಥಿಯನ್ನೂ ಮರಳಿ ಕಳುಹಿಸುವಂತಿಲ್ಲ ಎಂಬ ಆದೇಶ ಮಾಡಿದ್ದರಿಂದ ವಿದ್ಯಾರ್ಥಿಗಳ ಸಾಲು ಬೆಳೆಯುತ್ತಲೇ ಸಾಗುತ್ತಿದೆ. ಕಾಲೇಜಿನಲ್ಲಿ ಅರ್ಜಿ ಪಡೆಯಲು, ಬ್ಯಾಂಕ್‌ ನಲ್ಲಿ ಚಲನ್‌ ತುಂಬಲು ನೂಕುನುಗ್ಗಲು ಏರ್ಪಡುತ್ತಿದೆ.

ಇದೇ ಕಾರಣಕ್ಕೆ ಅರ್ಜಿ ನೀಡಲು ಮತ್ತು ಮರಳಿ ಸ್ವೀಕರಿಸಲು ಬೇರೆ ಸಮಯ ನಿಗದಿ ಮಾಡುವ ಮೂಲಕ ನೂಕುನುಗ್ಗಲು ತಡೆಗಟ್ಟಲು ಕ್ರಮ ವಹಿಸಲಾಗುತ್ತಿದೆ. ಮಕ್ಕಳಿಗೆ ಆಸನಗಳ ಕೊರತೆ: ಕಾಲೇಜಿನಲ್ಲಿ ಆಸನಗಳ ಕೊರತೆಯದ್ದೇ ಸಮಸ್ಯೆ. ಮೊದಲು ಬಂದವರಿಗೆ ಆಸನ ಖಚಿತ. ಆಮೇಲೆ ಬಂದವರು ಕಾರಿಡಾರ್‌ನಲ್ಲಿ ನಿಂತು, ಇಲ್ಲವೆ ಕೆಳಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ. ಕಾಲೇಜಿನಲ್ಲಿ ಇರುವುದೇ 17 ಕೋಣೆಗಳು. ವಿದ್ಯಾರ್ಥಿಗಳು ಮಾತ್ರ ಮೂರೂವರೆ ಸಾವಿರಕ್ಕಿಂತ ಅಧಿ ಕವಾಗಿದ್ದಾರೆ. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಿರುವುದು ಕಾಲೇಜಿನ ಆಡಳಿತ ಮಂಡಳಿ ನಿದ್ದೆಗೆಡಿಸಿದೆ.

ಸಮಯ ಬದಲಿಸಲು ಚಿಂತನೆ
ಈ ಬಾರಿ ವಿದ್ಯಾರ್ಥಿಗಳಿಗೆ ಕೋಣೆಗಳ ಸಮಸ್ಯೆ ಎದುರಾಗುವುದು ಸ್ಪಷ್ಟವಾಗಿರುವ ಕಾರಣ ಕಾಲೇಜಿನ ಸಮಯ ಬದಲಾವಣೆಗೆ ಚಿಂತನೆ ನಡೆಸಲಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ಬಿಎ ತರಗತಿ ನಡೆಸಿ, ಮಧ್ಯಾಹ್ನದಿಂದ ಬಿಕಾಂ, ಬಿಎಸ್‌ಸಿ ಮತ್ತು ಬಿಸಿಎ ತರಗತಿ ನಡೆಸಲು ಚಿಂತನೆ ಮಾಡಲಾಗುತ್ತಿದೆ. ಬಿಕಾಂ ಮತ್ತು ಬಿಎಸ್ಸಿ ವಿಭಾಗಕ್ಕೆ ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ. ಸಾಕಷ್ಟು ವಿದ್ಯಾರ್ಥಿಗಳು ಇಂಜಿನಿಯರಿಂಗ್‌, ಇಲ್ಲವೇ ಮೆಡಿಕಲ್‌ ಸೇರುವ ಉದ್ದೇಶದಿಂದ ನೀಟ್‌ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಬೇರೆ ಕಡೆ ಪ್ರವೇಶ ಸಿಗದಿದ್ದಲ್ಲಿ ಇಲ್ಲಿಗೆ ಬರುವ ಸಾಧ್ಯತೆಗಳಿವೆ.

Advertisement

ತಾಲೂಕುಗಳಿಂದ ಬರುತ್ತಾರೆ..!
ವಿಪರ್ಯಾಸ ಎಂದರೆ ಬರೀ ರಾಯಚೂರು ನಗರ ಗ್ರಾಮೀಣ ಭಾಗದಿಂದ ಮಾತ್ರವಲ್ಲದೇ ಬೇರೆ ತಾಲೂಕುಗಳ ವಿದ್ಯಾರ್ಥಿಗಳು ಇಲ್ಲಿಗೆ ಕಲಿಕೆಗೆ ಬರುತ್ತಾರೆ. ದೇವದುರ್ಗ, ಮಾನ್ವಿ, ಸಿರವಾರ, ಕವಿತಾಳ, ಗಬ್ಬೂರು ಸೇರಿದಂತೆ ವಿವಿಧೆ ಡೆಯಿಂದ ಬರುತ್ತಾರೆ. ಆಯಾ ತಾಲೂಕುಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳಿದ್ದರೂ ಹೋಗಲು ಸಿದ್ಧರಿಲ್ಲ. ಕಾರಣ ಕೇಳಿದರೆ ಅಲ್ಲಿ ಸರಿಯಾಗಿ ಬೋಧನೆ ಮಾಡುವುದಿಲ್ಲ. ಕಾಲೇಜು ಸರಿಯಾಗಿ ನಡೆಯುವುದಿಲ್ಲ. ನಮಗೆ ಇಲ್ಲಿಯೇ ಅವಕಾಶ ಕೊಡಿ ಎಂದು ಗೊಗರೆಯುತ್ತಾರೆ ಎಂದು ವಿವರಿಸುತ್ತಾರೆ ಸಿಬ್ಬಂದಿ. ಯಾವ ವಿದ್ಯಾರ್ಥಿಯನ್ನು ಮರಳಿ ಕಳುಹಿಸಬಾರದು ಎಂಬ ಆದೇಶಕ್ಕೆ ಮಣಿದು ಬಂದವರಿಗೆಲ್ಲ ಪ್ರವೇಶ ನೀಡಲಾಗುತ್ತಿದೆ.

ಎನ್‌ಇಪಿ ಆಯ್ಕೆ ಗೊಂದಲ
ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿ ಮಾಡಿದ್ದು, ಕಲಾ ವಿಭಾಗದ ವಿದ್ಯಾರ್ಥಿಗಳು ಬೇರೆ ಯಾವುದೇ ವಿಷಯವನ್ನಾದರೂ ಐಚ್ಛಿಕವಾಗಿ ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಇಲ್ಲಿ ಮಾತ್ರ ವಿದ್ಯಾರ್ಥಿಗಳು ಬೇರೆ ವಿಷಯಗಳ ಆಯ್ಕೆಗೆ ಮುಂದಾಗುತ್ತಿಲ್ಲ. ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್‌ ಹೀಗೆ ಬೇರೆ ವಿಷಯಗಳಿಗೆ ಆಯ್ಕೆಗೆ ಹಿಂಜರಿಯುತ್ತಿದ್ದಾರೆ. ಬೇರೆ ವಿಷಯ ತೆಗೆದುಕೊಳ್ಳಿ ಎಂದರೂ ಬೇಡ ನಮಗೆ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳೇ ಇರಲಿ ಎನ್ನುತ್ತಿದ್ದಾರೆ. ಅದರ ಜತೆಗೆ ಈ ಬಾರಿ ಕೌಶಲ್ಯಾಭಿವೃದ್ಧಿ ವಿಷಯ ಕೂಡ ಸೇರಿಸಿ, ಪ್ರಾಯೋಗಿಕ ತರಗತಿ ಕಡ್ಡಾಯಗೊಳಿಸಲಾಗಿದೆ.

ಈ ಬಾರಿ ಪದವಿ ಪ್ರವೇಶಕ್ಕೆ ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಲ್ಲಿಗಾಗಲೇ 900ಕ್ಕೂ ಅ ಧಿಕ ಅರ್ಜಿ ನೀಡಲಾಗಿದೆ. ಇನ್ನೂ ಕಾಲಾವಕಾಶವಿದ್ದು, ಸಾಕಷ್ಟು ವಿದ್ಯಾರ್ಥಿಗಳು ಬರಬಹುದು. ಬೇರೆ ತಾಲೂಕಿನ ವಿದ್ಯಾರ್ಥಿಗಳಿಗೆ ಅಲ್ಲಿಯೇ ಪ್ರವೇಶ ಪಡೆಯುವಂತೆ ತಿಳಿಸಿದರೂ ಕೇಳುತ್ತಿಲ್ಲ. ಮೇಲಾಗಿ ಪ್ರಭಾವಿಗಳ ಒತ್ತಡ ಕೂಡ ಬರುತ್ತಿವೆ. 27 ಕಾಯಂ ಉಪನ್ಯಾಸಕರಿದ್ದು, 45 ಅತಿಥಿ ಬೋಧಕರಿದ್ದಾರೆ. 17 ಕೋಣೆಗಳಲ್ಲಿದ್ದು, ಪಕ್ಕದಲ್ಲಿರುವ ಮಹಿಳಾ ಕಾಲೇಜು ಬಳಸಿಕೊಳ್ಳಲಾಗುವುದು. 300 ಬೆಂಚ್‌ ನೀಡಲು ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅವರು ಒಪ್ಪಿದ್ದಾರೆ.
ಆರ್‌. ಮಲ್ಲನಗೌಡ,
ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜು

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next