Advertisement

ಹಾಕಿ: ಕೋವಿಡ್ ಕಾಡಿದರೆ ಫೈನಲ್‌ ತಂಡಗಳೆರಡಕ್ಕೂ ಚಿನ್ನ

02:36 AM Jul 17, 2021 | Team Udayavani |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಸೆಣಸಲಿರುವ ಎರಡೂ ಹಾಕಿ ತಂಡ ಗಳಲ್ಲಿ ಕೊರೊನಾ ಕೇಸ್‌ ಕಂಡುಬಂದರೆ ಆಗ ಇಬ್ಬರಿಗೂ ಚಿನ್ನದ ಪದಕ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್ಐಎಚ್‌) ಶುಕ್ರವಾರ ಪ್ರಕಟಿಸಿದೆ.

Advertisement

ಇದಕ್ಕೂ ಒಂದು ವಾರ ಮೊದಲು ಒಲಿಂಪಿಕ್ಸ್‌ ಹಾಕಿಗೆ ನೂತನ ನಿಯಮವನ್ನು ಜಾರಿಗೊಳಿಸಲಾಗಿತ್ತು. ತಂಡವೊಂದು ಕೊರೊನಾ ಕೇಸ್‌ನಿಂದಾಗಿ ಫೈನಲ್‌ನಿಂದ ಹಿಂದೆ ಸರಿಯುವಂತಾದರೆ ಆಗ ಈ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತವರಿಗೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲು ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾದಿಂದಾಗಿ ಎರಡೂ ತಂಡಗಳಿಗೆ ಫೈನಲ್‌ನಲ್ಲಿ ಆಡಲಾಗದಿದ್ದರೆ ಆಗೇನು ಎಂಬುದನ್ನು ಈ ನಿಯಮಾವಳಿಯಲ್ಲಿ ಉಲ್ಲೇಖೀಸಿರಲಿಲ್ಲ. ಇದಕ್ಕೀಗ ಪರಿಹಾರ ಸಿಕ್ಕಿದೆ. ಎಫ್ಐಎಚ್‌ ಮಖ್ಯ ಕಾರ್ಯ ನಿರ್ವಹಣಾಧಿಕಾರಿ ಥಿಯರಿ ವೀಲ್‌ ಇದನ್ನು ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ :ಕೋವಿಡ್ ಪಾಸಿಟಿವ್ : ಆಸೀಸ್‌ ಟೆನಿಸಿಗ ಒಲಿಂಪಿಕ್ಸ್‌ನಿಂದ ಹೊರಕ್ಕೆ

ಗ್ರೂಪ್‌ ನಿಯಮಾವಳಿ
ಗ್ರೂಪ್‌ ಹಂತದ ಹಾಕಿ ಪಂದ್ಯಗಳಿಗೂ ನಿಯಮ ವನ್ನು ರೂಪಿಸಲಾಗಿದೆ. ಅಕಸ್ಮಾತ್‌ ಕೊರೊನಾ ಕೇಸ್‌ನಿಂದಾಗಿ ತಂಡವೊಂದಕ್ಕೆ ಲೀಗ್‌ ಪಂದ್ಯ ಆಡಲು ಸಾಧ್ಯವಾಗದೇ ಇದ್ದರೆ ಆಗ ಎದುರಾಳಿಗೆ 5-0 ಗೆಲುವು ಎಂದು ತೀರ್ಮಾನಿಸಲಾಗುವುದು. ಎರಡೂ ತಂಡಗಳಲ್ಲಿ ಕೋವಿಡ್‌ ಕೇಸ್‌ ಇದ್ದು, ಇಬ್ಬರಿಗೂ ಆಡಲಾಗದಿದ್ದರೆ ಇದು “ಗೋಲ್‌ ಲೆಸ್‌ ಡ್ರಾ’ ಎನಿಸಿಕೊಳ್ಳುತ್ತದೆ. ಯಾವುದೇ ಅಡ್ಡಿ ಆತಂಕ ಇಲ್ಲದೇ ಹೋದರೆ ಈ ತಂಡಗಳು ಮುಂದಿನ ಲೀಗ್‌ ಪಂದ್ಯಗಳನ್ನು ಆಡುವ ಅರ್ಹತೆ ಪಡೆಯಲಿವೆ.

ಕೋವಿಡ್‌ ಕೇಸ್‌ನಿಂದಾಗಿ ಕೂಟದಿಂದಲೇ ಹಿಂದೆ ಸರಿಯಬೇಕಾದ ಸ್ಥಿತಿ ಎದುರಾಗದು ಎಂಬುದಾಗಿ ವೀಲ್‌ ಸ್ಪಷ್ಟಪಡಿಸಿದರು. ತಂಡವೊಂದರಲ್ಲಿ ಆರೇಳು ಪಾಸಿಟಿವ್‌ ಕೇಸ್‌ ಇದ್ದರೂ ಬದಲಿ ಆಟಗಾರರೊಂದಿಗೆ ಕಣಕ್ಕಿಳಿಯಬಹುದಾಗಿದೆ. ಇಡೀ ತಂಡವೇ ಕೋವಿಡ್‌ ಸೋಂಕಿಗೆ ತುತ್ತಾದರೆ ಆಗ ತಂಡ ಹಿಂದೆ ಸರಿಯುವುದು ಅನಿವಾರ್ಯವಾಗುತ್ತದೆ ಎಂದು ವೀಲ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next