ಹೊಸದಿಲ್ಲಿ: ಶನಿವಾರದಿಂದ ರವಿವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 841 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 227 ದಿನಗಳಲ್ಲಿ ಅಂದರೆ ಕಳೆದ 7 ತಿಂಗಳಲ್ಲಿ ಒಂದೇ ದಿನ ದೃಢಪಟ್ಟ ಅತ್ಯಧಿಕ ಪ್ರಕರಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,309ಕ್ಕೇರಿಕೆಯಾಗಿದೆ. ಜತೆಗೆ, ಒಂದೇ ದಿನ ಕರ್ನಾಟಕ, ಕೇರಳ ಮತ್ತು ಬಿಹಾರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆಗಳ ಅವಧಿಯಲ್ಲಿ 743 ಮಂದಿಗೆ ಸೋಂಕು ದೃಢಪಟ್ಟು, 7 ಮಂದಿ ಸಾವಿಗೀಡಾಗಿದ್ದರು. ಇದೇ ವೇಳೆ, ದೇಶಾದ್ಯಂತ ಈವರೆಗೆ ಕೊರೊನಾ ಉಪತಳಿ ಜೆಎನ್.1ನ 178 ಪ್ರಕರಣಗಳು ದೃಢಪಟ್ಟಿವೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 19 ಜೆಎನ್.1 ಕೇಸು
ರವಿವಾರ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನ ಉಪತಳಿ ಜೆಎನ್.1ನ 19 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಅತ್ಯಧಿಕ ಕೇಸುಗಳು ಪುಣೆಯಲ್ಲಿ ದೃಢಪಟ್ಟಿವೆ. ಶನಿವಾರದವರೆಗೆ ಮಹಾರಾಷ್ಟ್ರದಲ್ಲಿ 10 ಜೆಎನ್.1 ಕೇಸುಗಳು ದೃಢಪಟ್ಟಿದ್ದವು. ಈಗ 19 ಹೊಸ ಪ್ರಕರಣಗಳು ದೃಢಪಟ್ಟಿರುವ ಕಾರಣ ಒಟ್ಟಾರೆ ಸಂಖ್ಯೆ 29ಕ್ಕೇರಿದಂತಾಗಿದೆ.