ಹೊಸದಿಲ್ಲಿ: ಜಗತ್ತಿನಲ್ಲಿ ಸೋಂಕಿನಿಂದಾಗಿ ಒಂದೂವರೆ ವರ್ಷದಲ್ಲಿ ಅಸುನೀಗಿದವರ ಸಂಖ್ಯೆ 40 ಲಕ್ಷ ದಾಟಿದೆ. ಅದು 1982ರಿಂದ ಇದುವರೆಗೆ ಜಗತ್ತಿನಲ್ಲಿ ಸಂಭವಿಸಿದ ಯುದ್ಧಗಳು ಮತ್ತು ಸಂಘರ್ಷಗಳಲ್ಲಿ ಜೀವ ಕಳೆದುಕೊಂಡವರ ಸಂಖ್ಯೆಗೆ ಸಮನಾಗಿದೆ.
ಈ ಬಗ್ಗೆ ಜಾನ್‌ಹಾಪ್‌ಕಿನ್ಸ್ ವಿವಿ ಮತ್ತು ಓಸ್ಲೋದ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಅಧ್ಯಯನ ದಲ್ಲಿ ಕಂಡುಕೊಳ್ಳಲಾಗಿದೆ. ರಸ್ತೆ ಅಪಘಾತಗಳಲ್ಲಿ ಜಗತ್ತಿನಲ್ಲಿ ಜೀವ ಕಳೆದುಕೊಳ್ಳುವ ಸಂಖ್ಯೆಗಿಂತ ಸೋಂಕಿನಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಂದರೆ ಜಾರ್ಜಿಯಾ ಅಥವಾ ಲಾಸ್‌ಏಂಜಲೀಸ್‌ನ ಜನಸಂಖ್ಯೆಗೆ ಸಮನಾಗಿದೆ. ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಸಂಶೋಧನೆ ಮಾಡಿ ಜನರಿಗೆ ನೀಡಲು ಶುರುವಾದ ಬಳಿಕ ಜಗತ್ತಿನಲ್ಲಿ ಜನರ ಪ್ರತಿದಿನದ ಸಾವಿನ ಪ್ರಮಾಣ 18 ಸಾವಿರದಿಂದ 7,900ಕ್ಕೆ ಇಳಿಕೆಯಾಗಿದೆ.
ಸಕ್ರಿಯ ಸೋಂಕು ಏರಿಕೆ: ಬುಧವಾರದಿಂದ ಗುರುವಾರದ ಅವಧಿಯಲ್ಲಿ ದೇಶದಲ್ಲಿ 45,892 ಹೊಸ ಸೋಂಕು ಪ್ರಕರಣ ಮತ್ತು 817 ಸಾವು ದೃಢಪಟ್ಟಿದೆ. ಜತೆಗೆ ಸಕ್ರಿಯ ಸೋಂಕು ಸಂಖ್ಯೆ 55 ದಿನಗಳಿಂದ ಇಳಿಮುಖ ವಾಗಿದ್ದದ್ದು ಕೊಂಚ ಏರಿಕೆ- ಅಂದರೆ 4,05,028ಕ್ಕೆ ಜಿಗಿದಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.97.18 ಆಗಿದೆ.
ಸೋಂಕು ಇಲ್ಲ: ಇತ್ತೀಚೆಗೆ ಉತ್ತರ ಪ್ರದೇಶ ಮತ್ತು ಬಿಹಾರದ ವ್ಯಾಪ್ತಿಯ ಗಂಗಾನದಿಯಲ್ಲಿ ಕಂಡು ಬಂದ ಮೃತದೇಹಗಳಲ್ಲಿ ಕೊರೊನಾ ಸೋಂಕು ಇಲ್ಲ ಎಂದು ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್, ಉ.ಪ್ರ ಮತ್ತು ಕೇಂದ್ರ ಸರಕಾರದ ಪರಿಸರ ಸಚಿವಾಲಯಗಳ
ಲ್ಯಾಬ್‌ನ ಅಧ್ಯಯನ ತಿಳಿ ಸಿದೆ. ಇದೇ ವೇಳೆ, ಭಾರತದಲ್ಲಿ ಫ್ರಾನ್ಸ್‌ನ ಫಾರ್ಮಾ ಕಂಪೆನಿ ಸನೋಫಿಯ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಅನುಮೋದನೆ ನೀಡಲಾಗಿದೆ.