Advertisement

ಕೋವಿಡ್‌ 4ನೇ ಅಲೆ ಮುನ್ನೆಚ್ಚರಿಕೆ: ಪೀಡಿಯಾಟ್ರಿಕ್‌ ಸರ್ವೇ ಪೂರ್ಣ

02:13 AM Jun 14, 2022 | Team Udayavani |

ಉಡುಪಿ/ಮಂಗಳೂರು: ರಾಜ್ಯದಲ್ಲಿ ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವ ಗುಂಪು ಅಂದರೆ 4ರಿಂದ 6 ವರ್ಷದೊಳಗಿನ ಮಕ್ಕಳ ಬಗ್ಗೆ ಗಮನ ವಹಿಸುವಂತೆ ರಾಜ್ಯ ಕೋವಿಡ್‌ ತಾಂತ್ರಿಕ ಸಲಹ ಸಮಿತಿ ಸಲಹೆ ನೀಡಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಸರ್ವೇ ಕಾರ್ಯ ಪೂರ್ಣಗೊಂಡಿದೆ.

Advertisement

ಈಗಾಗಲೇ ಕಾನ್ಪುರ ಐಐಟಿ ಜೂನ್‌, ಜುಲೈ ತಿಂಗಳಲ್ಲಿ ನಾಲ್ಕನೇ ಅಲೆಯ ಸಾಧ್ಯತೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.

ಮೂರನೇ ಅಲೆಯು ಲಸಿಕೆ ಪಡೆಯದವರನ್ನು ಹೆಚ್ಚಾಗಿ ಬಾಧಿಸಿದ್ದು, ಲಸಿಕೆ ಪಡೆದವರಲ್ಲಿ ಕೊರೊನಾ ಸೋಂಕು ರಹಿತ ಹಾಗೂ ಸೌಮ್ಯ ಲಕ್ಷಣಗಳು ಕಂಡುಬಂದಿತ್ತು. ಇದರ ಹೊರತಾಗಿ ಯಾವುದೇ ತೀವ್ರ ತರಹದ ಅನಾರೋಗ್ಯ ಸಮಸ್ಯೆ ಲಸಿಕೆ ಪಡೆದವರಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ 0-12 ವರ್ಷದೊಳಗಿನ ಮಕ್ಕಳಿಗೆ ಈ ಬಾರಿ ಲಸಿಕೆ ಆಗದಿರುವುದರಿಂದ ಸೋಂಕು ಕಾಡಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.

ರಾಜ್ಯಾದ್ಯಂತ ಸರ್ವೇ
ರಾಜ್ಯದಲ್ಲಿನ 5,000 ಮಕ್ಕಳನ್ನು ರ್‍ಯಾಂಡಮ್‌ ಆಗಿ ಪೀಡಿಯಾಟ್ರಿಕ್‌ ಸರ್ವೇ ನಡೆಸುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಆರೋಗ್ಯ ಇಲಾಖೆಗೆ ಸಲಹೆ ನೀಡಿದ್ದಾರೆ. ಅದರಂತೆ ಉಡುಪಿ ಜಿಲ್ಲೆಗೆ 78 ಹಾಗೂ ದ.ಕ. ಜಿಲ್ಲೆಗೆ 144 ಗುರಿ ನಿಗದಿ ಮಾಡಲಾಗಿತ್ತು. ಈ ಸರ್ವೇ ಮೂಲಕ ಮಕ್ಕಳ ಆರೋಗ್ಯ ಸ್ಥಿತಿಗತಿ ಅಧ್ಯಯನವಾಗಲಿದೆ.

ಮಕ್ಕಳು ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾ ರೆಯೇ ಅಥವಾ ಇಲ್ಲವೋ ಎನ್ನುವುದರ ಜತೆಗೆ ಸೋಂಕಿಗೆ ಒಳ ಗಾಗಿ ಗುಣಮುಖರಾದವರಲ್ಲಿ ರೋಗದ ವಿರುದ್ಧ ಹೋರಾಟ ನಡೆ ಸುವ ಪ್ರತಿಕಾಯಗಳು ನಿರ್ಮಾಣ ವಾಗಿವೆಯೇ ಎನ್ನುವ ಮಾಹಿತಿ ಸಂಗ್ರಹಿಸಲಾಗಿದೆ. ಸರ್ವೇ ಆಧಾರದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಅಥವಾ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಅವರನ್ನು ಕೋವಿಡ್‌ನಿಂದ ರಕ್ಷಣೆಗೆ ಒಳಪಡಿಸಬೇಕು ಎನ್ನುವ ಬಗ್ಗೆ ಇಲಾಖೆ ನಿರ್ಧರಿಸಲಿದೆ.

Advertisement

ಕೋವಿಡ್‌ 4 ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯ ಸೂಚನೆಯಂತೆ ಜಿಲ್ಲೆಗೆ ನೀಡಲಾಗಿದ್ದ ಪೀಡಿಯಾಟ್ರಿಕ್‌ ಸರ್ವೇಯನ್ನು ಪೂರ್ಣಗೊಳಿಸಲಾಗಿದ್ದು ಇದರ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲಾಗಿದೆ.
– ಡಾ| ನಾಗರತ್ನಾ / ಡಾ| ಜಗದೀಶ್‌,
ಉಡುಪಿ ಮತ್ತು ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು

39.46 ಲಕ್ಷ ಮಂದಿಗೆ ಕೋವಿಡ್‌
ರಾಜ್ಯದಲ್ಲಿ ಕೋವಿಡ್‌ ಮೂರು ಅಲೆಗಳಲ್ಲಿ ಒಟ್ಟು 39.46 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 0-9 ವರ್ಷದೊಳಗಿನ 1.25 ಲಕ್ಷ ಹಾಗೂ 10-18 ವರ್ಷದೊಳಗಿನ 3.97 ಲಕ್ಷ , 20-29ವರ್ಷದೊಳಗಿನ 8.68 ಲಕ್ಷ, 30-39 ವರ್ಷದೊಗಿನ 8.91 ಲಕ್ಷ, 40-49 ವರ್ಷದೊಳಗಿನ 6.52ಲಕ್ಷ, 50-59 ವರ್ಷದೊಳಗಿನ 4.70 ಲಕ್ಷ, 60-69 ವರ್ಷದೊಳಗಿನ 3.33ಲಕ್ಷ, 70-79 ವರ್ಷದೊಳಗಿನ 1.54ಲಕ್ಷ, 80-89 ವರ್ಷದೊಳಗಿನ 45,805, 90-99 ವರ್ಷದೊಳಗಿನ 6,118 ಹಾಗೂ 100 ವರ್ಷ ಮೇಲ್ಪಟ್ಟ 303 ಮಂದಿ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next