Advertisement

ಕೋವಿಡ್: 5 ಕಡೆ 468 ಬೆಡ್‌ ವ್ಯವಸ್ಥೆ

11:57 AM May 24, 2020 | mahesh |

ಉಡುಪಿ: ಉಡುಪಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಇದುವರೆಗೆ 8,010 ಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಈಗಿರುವ ಕ್ವಾರಂಟೈನ್‌ ಸಾಮರ್ಥ್ಯ ಮುಗಿಯುತ್ತಿದ್ದು, ಈಗಿರುವವರು ಬಿಡುಗಡೆಯಾದ ಬಳಿಕವೇ ಇತರರನ್ನು ಜಿಲ್ಲೆಗೆ ಬರಮಾಡಿಕೊಳ್ಳಬಹುದು. ಇನ್ನಷ್ಟು ಕೊರೊನಾ ಪಾಸಿಟಿವ್‌ ಪ್ರಕರಣ ಕಂಡುಬಂದರೂ ಒಟ್ಟು ಐದು ಕಡೆ 468 ಬೆಡ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ಜಿಲ್ಲೆಯಲ್ಲಿ ಕೋವಿಡ್‌ -19 ಪಾಸಿಟಿವ್‌ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.  ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದ್ದು, ಇದಕ್ಕಾಗಿ ಈಗಾಗಲೇ ಇರುವ ಉಡುಪಿ ಡಾ| ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯ ಜತೆಯಲ್ಲಿ ತಾಲೂಕು ಆಸ್ಪತ್ರೆ ಕುಂದಾ ಪುರದಲ್ಲಿ 125 ಹಾಸಿಗೆಗಳ ಪ್ರತ್ಯೇಕ ಕೋವಿಡ್‌ ಬ್ಲಾಕ್‌ ಆರಂಭಿಸಲಾಗಿದೆ. ತಾಲೂಕು ಆಸ್ಪತ್ರೆ ಕಾರ್ಕಳದಲ್ಲಿ 75 ಹಾಸಿಗೆಗಳ ಸೌಲಭ್ಯ, ಎಸ್‌ಡಿಎಂ ಉದ್ಯಾವರದಲ್ಲಿ 90 ಹಾಸಿಗೆ, ಭುವನೇಂದ್ರ ಹಾಸ್ಟೆಲ್‌ ಕಾರ್ಕಳದಲ್ಲಿ 58 ಹಾಸಿಗೆಗಳ ಚಿಕಿತ್ಸಾ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ಅಗತ್ಯವಿರುವ ತಜ್ಞ ವೈದ್ಯರು, ವೈದ್ಯಕೀಯ ಸಿಬಂದಿ ಮತ್ತು ಇತರ ಸಿಬಂದಿಯನ್ನು ಹೊರಗುತ್ತಿಗೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪಿಪಿಇ ಕಿಟ್‌, ಮಾಸ್ಕ್ ಸಹಿತ ಎಲ್ಲ ವೈದ್ಯಕೀಯ ಪರಿಕರಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಕ್ವಾರಂಟೈನ್‌ ಕೇಂದ್ರಗಳು ಭರ್ತಿ
ಉಡುಪಿ ಜಿಲ್ಲೆಗೆ ಇದುವರೆಗೆ ಮಹಾರಾಷ್ಟ್ರದಿಂದ 7,226, ತಮಿಳುನಾಡಿನಿಂದ 74, ತೆಲಂಗಾಣದಿಂದ 425, ಆಂಧ್ರಪ್ರದೇಶದಿಂದ 43, ಗೋವಾದಿಂದ 53, ಗುಜರಾತ್‌ನಿಂದ 42, ಮಧ್ಯಪ್ರದೇಶ, ಹರಿಯಾಣ, ಚಂಡೀಗಢ, ಒಡಿಶಾದಿಂದ ತಲಾ 1, ದಿಲ್ಲಿಯಿಂದ 26, ಪಶ್ಚಿಮ ಬಂಗಾಲ 6, ರಾಜಸ್ಥಾನ 6, ಪಂಜಾಬ್‌ 12, ಕೇರಳ 93 ಸೇರಿದಂತೆ ಒಟ್ಟು 8,010 ಮಂದಿ ಆಗಮಿಸಿದ್ದಾರೆ. ಇವರೆಲ್ಲರನ್ನೂ ಕ್ವಾರಂಟೈನ್‌ ಮಾಡಿದ್ದು ಜಿಲ್ಲೆಯ ಬಹುತೇಕ ಕ್ವಾರಂಟೈನ್‌ ಕೇಂದ್ರಗಳು ಭರ್ತಿಯಾಗಿವೆ ಎಂದು ತಿಳಿಸಿದರು.

ಕ್ವಾರಂಟೈನ್‌ ಕೇಂದ್ರಗಳಲ್ಲಿರುವವರು ಬಿಡುಗಡೆ ಗೊಂಡ ಬಳಿಕ ಸ್ಯಾನಿಟೈಸ್‌ ಮಾಡಿ ಮತ್ತೆ ಬೇರೆ ಯವರನ್ನು ಸೇರಿಸಬೇಕು. ಸದ್ಯ ಮೇ 31ರ ವರೆಗೆ ಮಹಾರಾಷ್ಟ್ರ ಸಹಿತ ನಾಲ್ಕು ರಾಜ್ಯಗಳವರಿಗೆ ಪ್ರವೇಶಾವಕಾಶವನ್ನು ಸರಕಾರ ನೀಡಿಲ್ಲ ಎಂದರು.

ಕ್ವಾರಂಟೈನ್‌ ಕೇಂದ್ರದಲ್ಲಿರುವವರ ಪರೀಕ್ಷಾ ವರದಿ ಬರುವವರೆಗೂ ಕೇಂದ್ರದಿಂದ ಬಿಡುಗಡೆ ಗೊಳಿಸುವುದಿಲ್ಲ. ಕೇಂದ್ರದಿಂದ ದಿನಕ್ಕೆ 150-200 ಮಾದರಿಗಳನ್ನಷ್ಟೇ ಪರೀಕ್ಷಿಸಬಹುದಾಗಿದೆ. ಉಡುಪಿ ಜಿಲ್ಲಾಸ್ಪತ್ರೆಗೆ ಮಂಜೂರಾದ ಕೇಂದ್ರದ ನಿರ್ಮಾಣ ನಡೆಯುತ್ತಿದೆ. ಮೂರು ವಾರಗಳಲ್ಲಿ ಆರಂಭವಾಗಬಹುದು. ಸದ್ಯ ಸುಮಾರು 1,800 ಮಾದರಿಗಳ ವರದಿ ಬಾಕಿ ಇದೆ ಎಂದರು.

Advertisement

ಸಾರ್ವಜನಿಕರ ಭೇಟಿ ಇಲ್ಲ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾರ್ವಜನಿಕರ್ಯಾರೂ ಕ್ವಾರಂಟೈನ್‌ ಕೇಂದ್ರಗಳಿಗೆ ಭೇಟಿ ಕೊಡಬಾರದು. ಇದು ನಿಯಮಗಳ ಉಲ್ಲಂಘನೆಯಾಗುತ್ತದೆ. ಅಲ್ಲಿದ್ದವರೂ ವಾಟ್ಸಪ್‌, ಫೇಸ್‌ಬುಕ್‌ಗಳಲ್ಲಿ ಪ್ರಕಟಿಸಬಾರದು. ಕ್ವಾರಂಟೈನ್‌ ಕೇಂದ್ರಗಳ ಹೆಸರನ್ನು ಬಹಿರಂಗಪಡಿಸಬಾರದು. ಕ್ವಾರಂಟೈನ್‌ ಕೇಂದ್ರಗಳನ್ನು ಸೀಲ್‌ಡೌನ್‌ ಮಾಡುವುದಿಲ್ಲ ಎಂದರು.

ತ್ಯಾಜ್ಯ ನಿರ್ವಹಣೆಗೆ ಸೂಚನೆ
ಕೊರೊನಾ ವೇಸ್ಟ್‌ಗಳನ್ನೂ ವೈದ್ಯಕೀಯ ವೇಸ್ಟ್‌ ಗಳಂತೆ ನಿರ್ವಹಿಸಲು ಸೂಚಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯವರ ಜತೆ ಸಭೆ ನಡೆಸಿ ಇದರ ಬಗ್ಗೆ ಮಾರ್ಗದರ್ಶನ, ತರಬೇತಿ ನೀಡಿದ್ದೇವೆ. ನಗರ ಸ್ಥಳೀಯ ಸಂಸ್ಥೆಗಳ ಪರಿಸರ ಎಂಜಿನಿಯರ್‌ಗಳಿಗೂ ಸ್ಥಳಕ್ಕೆ ಭೇಟಿ ನೀಡಲು ತಿಳಿಸಿದ್ದೇವೆ ಎಂದರು.

ದೇವಸ್ಥಾನಗಳಿಂದ ಊಟ
ಕ್ವಾರಂಟೈನ್‌ ಕೇಂದ್ರಗಳಿಗೆ ಬಹುತೇಕ ದೇವಸ್ಥಾನಗಳಿಂದ ಊಟದ ಸರಬರಾಜು ಆಗುತ್ತಿದೆ. ಕೆಲವು ಕಡೆ ಪಡಿತರವನ್ನು ನೀಡಿ ಅವರೇ ಆಹಾರ ತಯಾರಿಸಿಕೊಳ್ಳುತ್ತಿದ್ದಾರೆ. ಒಂದು ಕಡೆ ಮಾತ್ರ ಪಾಸಿಟಿವ್‌ ಬಂದವರನ್ನು ಕೊರೊನಾ ಆಸ್ಪತ್ರೆಗೆ ಕಳುಹಿಸಿ ಇಲ್ಲಿ ಸ್ಯಾನಿಟೈಸ್‌ ಮಾಡಲು ವಿಳಂಬವಾಯಿತಷ್ಟೆ ಎಂದರು.

ಸೀನ್‌ ಕ್ರಿಯೇಟ್‌ ಬೇಡ
ಮಹಾರಾಷ್ಟ್ರದಲ್ಲಿ ಯಾವುದೋ ಬಸ್‌ನವರು ತಂದು ಗಡಿಯಲ್ಲಿ ಬಿಟ್ಟು ಜನರು ಅನಗತ್ಯ ಸೀನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಇದು ಸಲ್ಲದು. ಈಗ ಯಾರಿಗೂ ರಾಜ್ಯವನ್ನು ಪ್ರವೇಶಿಸಲು ಅವಕಾಶ ಕೊಡುತ್ತಿಲ್ಲ ಎಂದರು.

ಹಣದ ಕೊರತೆ ಇಲ್ಲ
ಜಿಲ್ಲಾಸ್ಪತ್ರೆ ಪ್ರಯೋಗಾಲಯಕ್ಕೆ 2.1 ಕೋ.ರೂ. ಮಂಜೂರಾಗಿದೆ. 1 ಕೋ.ರೂ. ಉಪಕರಣ ಖರ್ಚಿಗೆ ಬಂದಿದೆ. 1.15 ಕೋ.ರೂ. ಜಿಲ್ಲಾಡಳಿತದಲ್ಲಿದೆ. ಇನ್ನು ತುರ್ತಿಗೆ ನಾಲ್ಕೈದು ಕೋ.ರೂ. ಇದೆ. ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ, ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ ಭಟ್‌ ಉಪಸ್ಥಿತರಿದ್ದರು.

ಸೆಕ್ಷನ್‌ 188 ಪ್ರಕಾರ ಕೇಸು
ಕ್ವಾರಂಟೈನ್‌ಗಳಲ್ಲಿ ಇರುವವರು ಕೇಂದ್ರ ದಿಂದ ಹೊರಬರುತ್ತಿರುವ ಬಗ್ಗೆ ಮಾಹಿತಿಯಿದ್ದು ಅಂತಹವರ ವಿರುದ್ಧ ಸೆಕ್ಷನ್‌ 188 ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಪಾಸ್‌ ಇಲ್ಲದೆ ಜಿಲ್ಲೆಯನ್ನು ಪ್ರವೇಶಿಸುವವರ ವಿರುದ್ಧ ಎಫ್ಐಆರ್‌ ದಾಖಲಿಸಿ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ, ಕ್ವಾರಂಟೈನ್‌ ಕೇಂದ್ರಗಳಲ್ಲಿ ರುವವರಿಗೆ ಮನೆಯಿಂದ ಊಟ ನೀಡಲು ಅವಕಾಶವಿಲ್ಲ. ತೀರಾ ಅನಿವಾರ್ಯವಿದ್ದಲ್ಲಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಡಿನ್ಪೋಸಬಲ್‌ ಕಂಟೇನರ್‌ಗಳಲ್ಲಿ ಮಾತ್ರ ಮನೆಯಿಂದ ಊಟ ನೀಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next