ಚಿಕ್ಕಮಗಳೂರು: ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಬಾಧಿ ಸಲಿದೆ ಎಂದು ತಜ್ಞರು ವರದಿ ನೀಡಿದ್ದು ಜಿಲ್ಲಾಡಳಿತ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ| ಅಂಶುಮಂತ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 2ನೇ ಅಲೆ ತಡೆಯುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಮತ್ತು ಆರೋಗ್ಯ ಮತ್ತು ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂಬುದು ತಿಳಿಯುತ್ತದೆ ಎಂದರು.
ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿ ಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜಿಲ್ಲಾಡಳಿತ 3ನೇ ಅಲೆ ತಡೆಗೆ ಈಗಿನಿಂದಲೇ ತಯಾರಿ ನಡೆಸಿಕೊಳ್ಳಬೇಕು. ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಬೇಕು. ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು ಎಂದು ಆಗ್ರಹಿಸಿದರು.
ಲಸಿಕೆ ನೀಡುವ ಕಾರ್ಯ ಕುಂಠಿತವಾಗಿದ್ದು, ಲಸಿಕೆ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು ಎಂದ ಅವರು, ಎಲ್ಲರಿಗೂ ಲಸಿಕೆ ನೀಡುವಂತೆ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನಂತರ ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ನೀಡುವುದಾಗಿ ತಿಳಿಸಿದೆ. ಉಚ್ಚ ನ್ಯಾಯಾಲಯದ ಜನರ ಮೇಲಿನ ಕಾಳಜಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕೋವಿಡ್ 3ನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೋವಿಡ್ ವಾರಿಯರ್ಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಆರೋಗ್ಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಮಕ್ಕಳ ಪೋಷಕರಲ್ಲಿ ವ್ಯಾಕ್ಸಿನ್ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ದೂಷಿಸುವುದು, ತಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಮಾಡುವುದನ್ನು ಬಿಟ್ಟು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಮುಂದಾಗಬೇಕು. ಸಂಸದರು, ಶಾಸಕರು, ಮುಖ್ಯಮಂತ್ರಿಗಳ ರಾಜ ಕೀಯ ಕಾರ್ಯದರ್ಶಿ, ವಿಧಾನ ಪರಿಷತ್ ಉಪಸಭಾಪತಿಗಳು ತಮ್ಮ ಪ್ರಭಾವವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಮುಂದಾಗಬೇಕು ಎಂದರು.