ಬೆಂಗಳೂರು: ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಆರಂಭಿಸಿರುವ ರಾಜ್ಯ ಸರಕಾರವು ಆಮ್ಲಜನಕ ಸಾಮರ್ಥ್ಯ ಹೆಚ್ಚಳಕ್ಕಾಗಿ ಖಾಸಗಿಯವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.
ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ 3ನೇ ಅಲೆಯ ಬಗ್ಗೆ ಗಂಭೀರವಾಗಿ ಚರ್ಚಿಸಲಾಗಿದೆ. 2ನೇ ಅಲೆ ವೇಳೆ ಆಮ್ಲಜನಕ ಕೊರತೆ ಕಾಡಿದ್ದು, ಇದನ್ನು ಸರಿದೂಗಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಾಗಿದೆ.
ಆಮ್ಲಜನಕ ಕೊರತೆ ಮರುಕಳಿಸದಿರಲಿ ಎಂದು ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆಮ್ಲಜನಕ ಉತ್ಪಾದನ ಸಾಮರ್ಥ್ಯ ಹೆಚ್ಚಳಕ್ಕೆ ಖಾಸಗಿಯವರು ಬಂಡವಾಳ ಹೂಡಲು ಮುಂದೆ ಬಂದರೆ ರಿಯಾಯಿತಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಉದ್ದಿಮೆದಾರರು ಕನಿಷ್ಠ 10 ಕೋ.ರೂ. ಬಂಡವಾಳ ಹೂಡಬೇಕೆಂಬ ಷರತ್ತು ವಿಧಿಸಲು ತೀರ್ಮಾನಿಸಲಾಗಿದ್ದು, ಸರಕಾರಕ್ಕೆ ಆಮ್ಲಜನಕ ಪೂರೈಸುವವರಿಗೆ ಶೇ. 25ರಷ್ಟು ಸಹಾಯಧನ ಒದಗಿಸಲಾಗುವುದು. 3 ವರ್ಷ ವಿದ್ಯುತ್ ಶುಲ್ಕ ವಿನಾಯಿತಿ ಮತ್ತು ನೋಂದಣಿಗೆ ಶೇ.100ರಷ್ಟು ವಿನಾಯಿತಿ ನೀಡಲಾಗುವುದು ಎಂದು ಸಂಪುಟ ಸಭೆಯ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಮಕ್ಕಳ ಐಸಿಯು ಆಸ್ಪತ್ರೆ ಹೆಚ್ಚಳ:
ಪ್ರತೀ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಮಕ್ಕಳ ಐಸಿಯುಗಳಿಗೆ ಆದ್ಯತೆ ನೀಡಲಾಗಿದೆ. ಸದ್ಯ ಜಿಲ್ಲಾಸ್ಪತ್ರೆಗಳಲ್ಲಿ 25 ಐಸಿಯು ಹಾಸಿಗೆ ಇದ್ದು, ಹೆಚ್ಚುವರಿ 25 ಹಾಸಿಗೆ ಅಳವಡಿಸಲಾಗುತ್ತಿದೆ. ಪ್ರಸ್ತುತ ಜಿಲ್ಲಾಸ್ಪತ್ರೆಗಳಲ್ಲಿ 6 ಕೆಎಲ್ ಸಾಮರ್ಥ್ಯದ ದ್ರವರೂಪದ ವೈದ್ಯಕೀಯ ಆಮ್ಲಜನಕ ಘಟಕ ಇದ್ದು, ಅದನ್ನು 20 ಕೆಎಲ್‌ಗೆ ಹೆಚ್ಚಿಸಲಾಗುತ್ತಿದೆ. ಪ್ರತೀ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ 6 ಕೆಎಲ್ ಸಾಮರ್ಥ್ಯದ ಆಮ್ಲಜನಕ ಘಟಕ ಅಳವಡಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಗಳಲ್ಲಿ 1 ಸಾವಿರ ಲೀ ಸಾಮರ್ಥ್ಯ, ತಾಲೂಕು ಆಸ್ಪತ್ರೆಗಳಲ್ಲಿ 500 ಲೀ. ಸಾಮರ್ಥ್ಯದ ಆಮ್ಲಜನಕ ಉತ್ಪಾದನ ಘಟಕ ಸ್ಥಾಪಿಸಲಾಗುತ್ತಿದೆ. ಜಂಬೋ ಸಿಲಿಂಡರ್‌ಗಳ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ| ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.