Advertisement

ಅಕ್ಟೋಬರ್‌ನಲ್ಲಿ ಉತ್ತುಂಗ 

11:31 PM Aug 02, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಬರುತ್ತಿರುವುದು ನಿಜ… ಅಕ್ಟೋಬರ್‌ ತಿಂಗಳಲ್ಲಿ ಅದು ಉತ್ತುಂಗಕ್ಕೇರಲಿದೆ. ಆದರೆ, ಈ ಹೊಸ ಅಲೆಯು 2ನೇ ಅಲೆಯಷ್ಟು ಭೀಕರವಾಗಿರುವುದಿಲ್ಲ.

Advertisement

ಕೊರೊನಾ ಸೋಂಕು ಅಬ್ಬರಿಸುವುದರ ಬಗ್ಗೆ ಪ್ರಸಕ್ತ ವರ್ಷದ ಆರಂಭದಲ್ಲೇ ಭವಿಷ್ಯ ನುಡಿದಿದ್ದ ಹೈದರಾಬಾದ್‌ ಮತ್ತು ಕಾನ್ಪುರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ(ಐಐಟಿ) ಸಂಶೋಧಕರು ಈಗ ಇಂಥದ್ದೊಂದು ಮಾಹಿತಿ ನೀಡಿದ್ದಾರೆ. ಗಣಿತ ಸಿದ್ಧ ಮಾದರಿಯ ಅನ್ವಯ ಇವರು ಈ ಭವಿಷ್ಯ ಹೇಳಿ ದ್ದಾರೆ. ಈ ತಿಂಗಳಲ್ಲೇ ಭಾರತವು ಮತ್ತೆ ಸೋಂಕಿನ ತೀವ್ರತೆಯನ್ನು ನೋಡಲಿದೆ. ಅಕ್ಟೋಬರ್‌ ವೇಳೆಗೆ ಉತ್ತುಂಗಕ್ಕೇರಲಿದ್ದು,  ಆಗ ದಿನಕ್ಕೆ ಒಂದು ಲಕ್ಷದಿಂದ ಒಂದೂವರೆ ಲಕ್ಷ ಪ್ರಕರಣ  ಪತ್ತೆಯಾಗಲಿವೆ. ಮಹಾರಾಷ್ಟ್ರ ಮತ್ತು ಕೇರಳದಂಥ ರಾಜ್ಯಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಲಿದೆ ಎಂದೂ ಸಂಶೋಧಕರಾದ ಮಥುಕುಮಲ್ಲಿ ವಿದ್ಯಾಸಾಗರ್‌ ಮತ್ತು ಮಣೀಂದ್ರ  ಅಗರ್ವಾಲ್‌ ಹೇಳಿದ್ದಾರೆ.

24 ಗಂಟೆಗಳಲ್ಲಿ 40,134 ಪ್ರಕರಣ: ರವಿವಾರದಿಂದ ಸೋಮವಾರಕ್ಕೆ 24 ಗಂಟೆಗಳಲ್ಲಿ ದೇಶಾದ್ಯಂತ 40,134 ಮಂದಿಗೆ ಸೋಂಕು ದೃಢಪಟ್ಟಿದ್ದು, 422 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ ಸತತ 6ನೇ ದಿನವೂ ಹೆಚ್ಚಳವಾಗಿ, 4,13,718ಕ್ಕೇರಿದೆ. ಕೇರಳದಲ್ಲಿ, ಸೋಮವಾರ ಸೋಂಕು ಪ್ರಕರಣ ಸ್ವಲ್ಪಮಟ್ಟಿಗೆ ಕುಸಿದಿದೆ. 13,984 ಮಂದಿಗೆ ಸೋಂಕು ದೃಢಪಟ್ಟಿದ್ದು, 118 ಮಂದಿ ಸಾವಿಗೀಡಾಗಿದ್ದಾರೆ. ಟೆಸ್ಟ್‌ ಪಾಸಿಟಿವಿಟಿ ದರ ಶೇ.11ಕ್ಕಿಂತ ಕೆಳಗಿಳಿದಿದೆ.

ಶಾಲೆ ಪುನಾರಂಭ: ಛತ್ತೀಸ್‌ಗಢ, ಪಂಜಾಬ್‌ನಲ್ಲಿ ಶಾಲೆಗಳು ಪುನಾರಂಭಗೊಂಡಿವೆ. ಉ.ಪ್ರದೇಶದಲ್ಲಿ ಆ.16ರಿಂದ ಶಾಲೆಗಳು ಆರಂಭವಾಗಲಿವೆ.

ಕೊವ್ಯಾಕ್ಸಿನ್‌ ರಾಮಬಾಣ:

Advertisement

ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌  ಲಸಿಕೆಯು ಕೊರೊನಾದ ಡೆಲ್ಟಾ ಪ್ಲಸ್‌ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿ ಎಂದು ಐಸಿಎಂಆರ್‌ ಅಧ್ಯಯನದಿಂದ ತಿಳಿದುಬಂದಿದೆ. ದೇಶದಲ್ಲಿ ಈಗಾಗಲೇ 70 ಡೆಲ್ಟಾ+ ಪ್ರಕರಣ ಪತ್ತೆಯಾಗಿವೆ. ಇದೇ ವೇಳೆ, ಭಾರತ್‌ ಬಯೋಟೆಕ್‌ ತನ್ನ ಕೊವ್ಯಾಕ್ಸಿನ್‌ ಲಸಿಕೆ ಮಾರಾಟದಿಂದ ಬರುವ ಮೊತ್ತದಲ್ಲಿ ಶೇ.5 ರಾಯಧನವನ್ನು ಐಸಿಎಂಆರ್‌ಗೆ ಪಾವತಿಸುತ್ತದೆ.

ಭಾರತಕ್ಕೆ ಬರಲಿದೆ  ಜೆ ಆ್ಯಂಡ್‌ ಜೆ ಲಸಿಕೆ?:

ನಮ್ಮ ಸಿಂಗಲ್‌ ಡೋಸ್‌ ಲಸಿಕೆಯನ್ನು ಭಾರತಕ್ಕೆ ತರಲು ನಾವು ಉತ್ಸುಕರಾಗಿದ್ದೇವೆ. ಈ ಕುರಿತು ಭಾರತ ಸರಕಾರದ ಜತೆ ಮಾತುಕತೆಯೂ ನಡೆಯುತ್ತಿದೆ ಎಂದು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ ಸೋಮವಾರ ತಿಳಿಸಿದೆ. ಭಾರತದಲ್ಲಿ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ವಾಪಸ್‌ ಪಡೆಯಿತು ಎಂಬ ಸುದ್ದಿಯ ಬೆನ್ನಲ್ಲೇ ಕಂಪೆನಿ ಇಂಥದ್ದೊಂದು ಸ್ಪಷ್ಟನೆ ನೀಡಿದೆ.

10 ಸಾವಿರ ಹಂದಿಗಳಿಗೆ ಹೈಸೆಕ್ಯೂರಿಟಿ ಕಟ್ಟಡ! :

ಅದು 13 ಮಹಡಿಯ ಅತ್ಯಧಿಕ ಭದ್ರತೆಯುಳ್ಳ ಕಟ್ಟಡ. ಅದರೊಳಗೆ ಯಾರಿಗೂ ಪ್ರವೇಶವಿಲ್ಲ, ಎಲ್ಲೆಲ್ಲೂ ಸಿಸಿ ಕೆಮರಾಗಳು… ಇದು ದಕ್ಷಿಣ ಚೀನದಲ್ಲಿ ಸುಮಾರು 10,000 ಹಂದಿಗಳಿಗಾಗಿ ಮಾಡಲಾದ ವ್ಯವಸ್ಥೆ! ಅಂದ ಹಾಗೆ ಹಂದಿಗಳಿಗೇಕೆ ಈ ವಿವಿಐಪಿ ಟ್ರೀಟ್‌ಮೆಂಟ್‌ ಎಂದು ಯೋಚಿಸುತ್ತಿದ್ದೀರಾ? ಚೀನದಲ್ಲಿ ಮಾಂಸದ ಪ್ರಮುಖ ಮೂಲವಾದ ಹಂದಿಗಳನ್ನು ಸೋಂಕಿನಿಂದ ರಕ್ಷಿಸಲು ಈ ರೀತಿ ಮಾಡಲಾಗಿದೆ. 2018ರಲ್ಲಿ ಆಫ್ರಿಕನ್‌ ಹಂದಿ ಜ್ವರವು ಚೀನದ ಫಾರ್ಮ್ಗಳಲ್ಲಿದ್ದ ಅರ್ಧದಷ್ಟು ಹಂದಿಗಳನ್ನು ನಿರ್ನಾಮ ಮಾಡಿವೆ. 20 ಕೋಟಿಗೂ ಅಧಿಕ ಹಂದಿಗಳು ಈ ಜ್ವರಕ್ಕೆ ಬಲಿಯಾಗಿವೆ. ಈಗ ಮತ್ತೆ ಹಂದಿ ಜ್ವರ ವಕ್ಕರಿಸಿಕೊಂಡು, 11 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟನ್ನಾದರೂ ರಕ್ಷಿಸೋಣ ಎಂಬ ನಿಟ್ಟಿನಲ್ಲಿ 10 ಸಾವಿರ ಹಂದಿಗಳನ್ನು “ಹಾಗ್‌  ಹೊಟೇಲ್‌’ನಲ್ಲಿ ಬಿಗಿಭದ್ರತೆಯಲ್ಲಿ ಕಾಪಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next