Advertisement

ಕೋವಿಡ್ 2ನೇ ಅಲೆ, ಜನರ ಕೈಯಲ್ಲೇ ಆರೋಗ್ಯ: ಚಳಿಗಾಲದಲ್ಲಿ ವೈರಸ್‌ಗಳು ಶೇ.50ರಷ್ಟು ವೃದ್ಧಿ

08:41 AM Oct 28, 2020 | Mithun PG |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಸಂತಸದ ನಡುವೆಯೇ ವೈರಸ್‌ಗಳಿಗೆ ಪ್ರಿಯವಾದ ಚಳಿಗಾಲ ಆರಂಭವಾಗುತ್ತಿದೆ. ಈ ಅವಧಿಯಲ್ಲಿ ಜನರು ಒಂದಿಷ್ಟು ಎಚ್ಚರ ತಪ್ಪಿದರೆ ಸೋಂಕಿನ ಎರಡನೇ ಅಲೆಗೆ ದಾರಿಯಾಗುವ ಸಾಧ್ಯತೆಗಳಿದ್ದು, ಕೋವಿಡ್ ಎರಡನೇ ಅಲೆ, ಜನರ ಕೈಯಲ್ಲೇ’ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Advertisement

ಸೆಪ್ಟೆಂಬರ್ ಅಂತ್ಯಕ್ಕೆ ದೇಶದೆಲ್ಲೆಡೆ ಕೋವಿಡ್ ಸೋಂಕಿನ ತೀವ್ರತೆ ತಗ್ಗಿದ್ದರೂ, ನಮ್ಮಲ್ಲಿ ಯಾವಾಗ ಇಳಿಮುಖವಾಗುತ್ತಿದೆ ಎಂದು ರಾಜ್ಯದ ಜನರು ಎದುರು ನೋಡುತ್ತಿದ್ದರು. ವಾರದಿಂದಿದ ಈಚೆಗೆ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಅರ್ಧಕ್ಕರ್ಧ ಕುಸಿದಿದ್ದು, ಅದರಲ್ಲೂ ಕಳೆದೆರಡು ದಿನಗಳಿಂದ ಮೂರು-ನಾಲ್ಕು ಸಾವಿರಕ್ಕೆ ಇಳಿಕೆಯಾಗಿದೆ. ಹಬ್ಬದ ನಡುವೆ ಸೋಂಕಿನ ತೀವ್ರತೆ ಇಳಿಕೆಯಾಗಿರುವುದು ಸಂತಸ ಮೂಡಿಸಿತ್ತು. ಆದರೆ, ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವ ವೈರಸ್‌ಗಳಿಗೆ ಪ್ರಿಯವಾದ ಚಳಿಗಾಲ ಆರಂಭವಾಗಿದೆ. ಈ ಅವಧಿಯಲ್ಲಿ ಇನ್ ಫ್ಲೂಯೆಂಜಾ (ವಿಷಮ ಶೀತಜ್ವರ) ವೈರಸ್‌ಗಳು ವೃದ್ಧಿ ಶೇ.50ರಷ್ಟು ಹೆಚ್ಚಿರುತ್ತದೆ. ಕೋವಿಡ್ ವೈರಸ್ ಕೂಡ ಫ್ಲೂ ಮಾದರಿಯ ಗುಣಲಕ್ಷಣ ಹೊಂದಿದ್ದು, ಇದು ಕೂಡ ಹೆಚ್ಚು ವೃಧ್ಧಿಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಜನರು ಸೋಂಕು ಕಡಿಮೆಯಾಯಿತು ಎಂದು ಮುಂಜಾಗ್ರತಾ ಕ್ರಮಗಳಿಗೆ ನಿರ್ಲಕ್ಷ್ಯ ತೋರಿದರೆ ಪ್ರಕರಣಗಳು ಮತ್ತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಾಾರೆ.

ಎರಡನೇ ಅಲೆ ಜನರ ಕೈಯಲ್ಲೇ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳುವಂತೆ, ‘ಯಾವುದೇ ಪ್ರದೇಶಲ್ಲಿ ಸೋಂಕು ಪ್ರಕರಣಗಳು ಕುಸಿದು ಮತ್ತೆ ಮೂರು ವಾರಗಳ ಅಂತರ ಮತ್ತೆ ಏರಿಕೆ ಹಾದಿ? ಹಿಡಿದರೆ ಅದನ್ನು  ಸೋಂಕಿನ 2ನೇ ಅಲೆ ಎಂದು ಹೇಳಲಾಗುತ್ತದೆ. ವೈರಸ್ ಕಾಲಿಟ್ಟ ಸಂದರ್ಭದಲ್ಲಿ ಸರ್ಕಾರ ಲಾಕ್‌ಡೌನ್  ಜಾರಿ ಮೂಲಕ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಸೋಂಕಿನ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದೆ. ಏಳು ತಿಂಗಳಿಂದ ರಾಜ್ಯದಲ್ಲೂ ಕೋವಿಡ್ ಸೋಂಕಿದ್ದು, ಜನರಿಗೂ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಯಿದೆ. ಹೀಗಾಗಿ, ಸೋಂಕಿನ 2ನೇ ಅಲೆ ಆರಂಭವಾದರೆ ಅದಕ್ಕೆ ಸರ್ಕಾರ, ಕಾನೂನು ಕ್ರಮಗಳಿಗಿಂತಲೂ ಜನರೇ ಪ್ರಮುಖ ಕಾರಣವಾಗಿರುತ್ತಾರೆ. ಒಟ್ಟಾರೆಯಾಗಿ ಎರಡನೇ ಅಲೆ ಜನರ ಕೈಯಲ್ಲಿದೆ’ ಎಂದು ಹೇಳುತ್ತಾರೆ.

ಮಹಾನಗರಗಳಲ್ಲಿ ಇಳಿಕೆ ? ನಂತರ ಏರಿಕೆ ಪ್ರವೃತ್ತಿ

Advertisement

ದೆಹಲಿ, ಮುಂಬೈ, ಪುಣೆ ಹಾಗೂ ಚೆನ್ನೈ ನಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಸೋಂಕು ಪ್ರಕರಣಗಳು ಅರ್ಧದಷ್ಟು ಕಡಿಮೆಯಾದವು. ದೆಹಲಿಯಲ್ಲಿ ಒಂದು ಸಾವಿರದ ಆಸುಪಾಸಿಗೆ ಇಳಿಕೆಯಾದವು. ಆದರೆ, ಈ ಎಲ್ಲಾ ನಗರಗಳಲ್ಲಿಯೂ ಈಗ ಮತ್ತೆ ಏರಿಕೆ ಆರಂಭವಾಗಿದೆ. ಇದಕ್ಕೆ ಚಳಿಗಾಲ ಮತ್ತು ಅಲ್ಲಿನ ಜನರ ನಿರ್ಲಕ್ಷ್ಯವೂ ಕಾರಣ ಎನ್ನಲಾಗುತ್ತಿದೆ.

ಚಳಿಗಾಲದ ಕಾಯಿಲೆಗಳಿಗೂ ಕೋವಿಡ್ ಗೂ ಸಂಬಂಧ

ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತ, ಜ್ವರ, ಕೆಮ್ಮು, ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು (ಸಿಒಪಿಡಿ) ದುಪ್ಪಟ್ಟಾಾಗುತ್ತವೆ. ಇವೇ ಕೋವಿಡ್ ಸೋಂಕಿನ ಪ್ರಮುಖ ರೋಗ ಲಕ್ಷಣಗಳಾಗಿವೆ. ಹೀಗಾಗಿ, ಜನರು ಚಳಿಗಾಲದ ಕಾಯಿಲೆಗಳು ಎಂದು ನಿರ್ಲಕ್ಷ್ಯ ಮಾಡದೇ ಪರೀಕ್ಷೆಗೆ ಒಳಗಾಗಬೇಕು. ದೇಹವನ್ನು ಬೆಚ್ಚಗಿಟ್ಟುಕೊಳ್ಳಬೇಕು, ಶ್ವಾಸಕೋಶ ಕಾಯಿಲೆ ಹೊಂದಿರುವವರು ಮನೆಯಿಂದ ಆಚೆ ಬರಬಾರದು ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.?ನಾಗರಾಜ್ ಸಲಹೆ ನೀಡಿದ್ದಾಾರೆ.

ಸೋಂಕು ಪ್ರಕರಣಗಳ ಇಳಿಕೆ ಪ್ರವೃತ್ತಿ ಆರಂಭವಾದಾಗ ಜನರು ಪ್ರಮುಖ ಪಾತ್ರ ವಹಿಸುತ್ತಾರೆ. ಈಗ ರಾಜ್ಯದ ಜನ ಹೆಚ್ಚಿನ ಜಾಗೃತಿ ವಹಿಸಬೇಕು. ಇಂಗ್ಲೆಂಡ್, ಸ್ಪೇನ್, ಅಮೇರಿಕಾದಲ್ಲಿ ಕೋವಿಡ್ ವೈರಸ್ ಎರಡನೇ ಅಲೆ ಆರಂಭವಾಗಿದೆ. ಮತ್ತೆ ಲಾಕ್‌ಡೌನ್ ನತ್ತ ಅಲ್ಲಿನ ಸರ್ಕಾರಗಳು ಚಿಂತನೆ ನಡೆಸಿವೆ. ಒಂದು ವೇಳೆ ಜನ ಮೈಮರೆತು ಸೋಂಕಿನ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಇಲ್ಲಿಯೂ ಕೋವಿಡ್ ಎರಡನೇ ಅಲೆ ಸಾಧ್ಯತೆಗಳು ಹೆಚ್ಚಿವೆ.

– ಡಾ.ಸುದರ್ಶನ್ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆಗಳು

Advertisement

Udayavani is now on Telegram. Click here to join our channel and stay updated with the latest news.

Next