ರಾಜ್ಯವು ಕೊರೊನಾ “ಕರಾಳ ವಾರ್ಷಿಕೋತ್ಸವ’ದ ಹೊಸ್ತಿಲನ್ನು ಈಗಷ್ಟೇ ದಾಟಿದೆ. ಈಗ ರಾಜ್ಯದಲ್ಲಿ ಕೊರೊನಾ 2ನೇ ಅಬ್ಬರ ಜೋರಾಗಿದೆ. ಕಳೆದ ತಿಂಗಳಿಂದ ಕೊರೊನಾ ಪ್ರಕರಣಗಳು ನಿರಂತರವಾಗಿ ಏರುಗತಿಯಲ್ಲಿವೆ. ಸದ್ಯ ಸಕ್ರಿಯ ಪ್ರಕರಣಗಳಲ್ಲಿ ಇಡೀ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಸಕ್ರಿಯ ಪ್ರಕರಣಗಳು ಹೆಚ್ಚಿರುವ ದೇಶದ ದೊಡ್ಡ ನಗರಗಳ ಪೈಕಿ ರಾಜಧಾನಿ ಬೆಂಗಳೂರು 7ನೇ ಸ್ಥಾನದಲ್ಲಿದೆ.
ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಸರಕಾರಕ್ಕೆ ಜನರ ಸುರಕ್ಷತೆ ಪ್ರಥಮ ಆದ್ಯತೆ ಆಗಿರಬೇಕು. ಇದರ ಜತೆಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದಾಗ ಸೂಕ್ಷ್ಮತೆಗೆ ಪ್ರಾಧಾನ್ಯತೆ ಸಿಗಬೇಕು. ಕೋವಿಡ್ ನಿಯಂತ್ರಣಕ್ಕೆ ಸರಕಾರ ಕೈಗೊಳ್ಳುತ್ತಿರುವ ತೀರ್ಮಾನಗಳ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಕೆಲವೊಂದು ತೀರ್ಮಾನಗಳು ವಿವಾದದ ಹಂತಕ್ಕೂ ಹೋಗುತ್ತಿವೆ. ಉದಾಹರಣೆಗೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರು ಇರಬೇಕು ಎಂಬ ಸರಕಾರದ ತೀರ್ಮಾನಕ್ಕೆ ಚಿತ್ರರಂಗದಿಂದ ಅಪಸ್ವರ ಕೇಳಿ ಬಂತು. ಕೊನೆಗೆ ಒತ್ತಡಕ್ಕೆ ಮಣಿಸಿದ ಸರಕಾರ ಎ.7ರ ವರೆಗೆ ಶೇ.100 ಪ್ರೇಕ್ಷಕರಿಗೆ ಅನುಮತಿ ಕೊಟ್ಟಿತು. ಜಿಮ್ ವಿಚಾರದಲ್ಲೂ ಸರಕಾರ ತೀರ್ಮಾನ ಬದಲಾಯಿಸಿತು. ಇಂತಹದೇ ವಿಚಾರಕ್ಕೆ ಮತ್ತೂಬ್ಬರು ಧ್ವನಿ ಎತ್ತಿದರೆ ಸರಕಾರ ಇಕ್ಕಟ್ಟಿಗೆ ಸಿಲುಕ ಬೇಕಾಗುತ್ತದೆ. ಒಂದೊಮ್ಮೆ ಚಿತ್ರರಂಗದೊಂದಿಗೆ, ಜಿಮ್ ಮಾಲಕರು, ಇತರರ ಜತೆ ಮೊದಲೇ ಚರ್ಚಿಸಿ ವಿಶ್ವಾಸಕ್ಕೆ ತೆಗೆದುಕೊಂಡು ವಿಷಯದ ಗಾಂಭಿರ್ಯತೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೆ ಗೊಂದಲಕ್ಕೆ ಅವಕಾಶ ಇರುತ್ತಿರಲಿಲ್ಲವೇನೋ.
ಅದ್ದರಿಂದ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸಮರ ಸಾರಿರುವ ರಾಜ್ಯ ಸರಕಾರ ದಿನಕ್ಕೊಂದಿಷ್ಟು ಕಠಿನ ಕ್ರಮಗಳನ್ನು ಜಾರಿಗೊಳಿಸುತ್ತಲೇ ಬರುತ್ತಿದೆ. ಅವುಗಳ ಬಗ್ಗೆ ಅಲ್ಲಲ್ಲಿ ಅವಿಶ್ವಾಸ, ಅಪಸ್ವರಗಳು ಕೇಳಿ ಬರುತ್ತಿವೆ. ಈ ಸರಣಿಗೆ ಕತ್ತರಿ ಹಾಕಬೇಕಾದರೆ ಸರಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಸಂಬಂಧಿಸಿದ ಭಾಗಿದಾರರ(ಸ್ಟೇಕ್ ಹೋಲ್ಡರ್)ನ್ನು ಕರೆದು ಮಾತನಾಡಿಸಬೇಕು. ಈ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡೆ ನಮಗೆ ಮಾದರಿಯಾಗ ಬೇಕು. ಅವರು ಶನಿವಾರ ಮಲ್ಟಿಪ್ಲೆಕ್ಸ್, ಜಿಮ್ಸ್ ಹಾಗೂ ಸುದ್ದಿಪತ್ರಿಕೆಯ ಮಾಲಕರೊಂದಿಗೆ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರಕಾರ ಕೈಗೊಂಡಿರುವ ಕ್ರಮಗಳಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ವಿಪಕ್ಷ ನಾಯಕರ ಜತೆ ಉದ್ಧವ್ ಠಾಕ್ರೆ ಚರ್ಚೆ ನಡೆಸಿ, ರವಿವಾರ ಸಂಜೆಯಷ್ಟೇ ಕಠಿನ ಕ್ರಮ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರಕಾರವೂ ಯೋಚಿಸಿದರೆ ಉತ್ತಮ.
ಸರಕಾರದ ಕ್ರಮಗಳಲ್ಲಿ ಸಾಧಕ-ಬಾಧಕ ಎರಡೂ ಇದೆ. ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಕಠಿನ ಕ್ರಮಗಳು ಅನಿವಾರ್ಯ ಮತ್ತು ಜನರು ಅದನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೈಗೊಂಡ ಒಮ್ಮತಾಭಿಪ್ರಾಯದ ತೀರ್ಮಾನವಾಗಿರಬೇಕು. ಹೀಗಾದರೆ ನಿಯಮಗಳ ಪಾಲನೆ ಮತ್ತು ಅನುಷ್ಠಾನ ಸುಲಭವಾಗಿ ಯಶಸ್ಸು ಕಾಣಲಿದೆ. ಇದರ ಜತೆಗೆ ಲಾಕ್‌ಡೌನ್, ಸೆಮಿಲಾಕ್ ಡೌನ್ ಅಥವಾ ರಾತ್ರಿ ಕರ್ಫ್ಯೂನಂಥ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿಯೇ ರಾಜ್ಯ ಸರಕಾರ ಸಚಿವರು, ಭಾಗೀದಾರರನ್ನು ಒಳಗೊಂಡ ಒಂದು ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು. ಇಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಎಲ್ಲರ ಆಶಯ.