ಬೆಂಗಳೂರು: ರಾಜ್ಯದಲ್ಲಿ ಏಳೂವರೆ ಲಕ್ಷ ಜನರ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಬಾಕಿ ಉಳಿದಿದ್ದು, ಸಿಗದೆ ಪರದಾಡುತ್ತಿದ್ದಾರೆ. ಆಗಸ್ಟ್‌ನಲ್ಲಿಯೂ ಇದು ಎಲ್ಲರಿಗೆ ಸಿಗುವುದು ಕಷ್ಟ!
ಮಾಸಾಂತ್ಯದೊಳಗೆ ಹೆಚ್ಚುಕಡಿಮೆ 15 ಲಕ್ಷ ಜನರಿಗೆ ಎರಡನೇ ಡೋಸ್ ನೀಡಬೇಕಿದೆ. ಆದರೆ 6.5 ಲಕ್ಷ ಡೋಸ್ ಮಾತ್ರ ಲಭ್ಯವಾಗಲಿದೆ. ಕೊವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದು 4ರಿಂದ 6 ವಾರಗಳೊಳಗೆ 2ನೇ ಡೋಸ್ ಪಡೆಯಬೇಕು. ಸದ್ಯ ಮೊದಲ ಡೋಸ್ ಪಡೆದು 5 ವಾರ ಆದವರು 7.52 ಲಕ್ಷ ಮಂದಿ ಇದ್ದಾರೆ. ಆದರೆ ಇಂದಿಗೂ ಎರಡನೇ ಡೋಸ್ ಸಿಕ್ಕಿಲ್ಲ.
ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ತಲಾ ಒಂದು ಕಡೆ ದಾಸ್ತಾನು ಇದ್ದಾಗ ಮಾತ್ರ ಕೊವ್ಯಾಕ್ಸಿನ್ ನೀಡಲಾಗುತ್ತಿದೆ. ಖಾಸಗಿಯಲ್ಲಿ 1,410 ರೂ. ನೀಡಬೇಕಿದೆ.
ಈ ತಿಂಗಳಲ್ಲಿ 6.5 ಲಕ್ಷ ಡೋಸ್:
ಶನಿವಾರ ಅಂತ್ಯಕ್ಕೆ 2 ಲಕ್ಷ ಡೋಸ್ ಕೊವ್ಯಾಕ್ಸಿನ್ ದಾಸ್ತಾನು ಇದೆ. ಕೇಂದ್ರದಿಂದ ಆ. 8ರಿಂದ 31ರ ನಡುವೆ 6 ಲಕ್ಷ ಡೋಸ್ ಕೊವ್ಯಾಕ್ಸಿನ್ ಬರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸದ್ಯ 2ನೇ ಡೋಸ್ ಬಾಕಿ ಇರುವವರ ಸಂಖ್ಯೆ 7.5 ಲಕ್ಷ. ಜೂನ್ ಕೊನೆಯ ವಾರ ಅಥವಾ ಜುಲೈಯಲ್ಲಿ ಮೊದಲ ಡೋಸ್ ಪಡೆದವರು 12 ಲಕ್ಷಕ್ಕೂ ಅಧಿಕ ಮಂದಿ ಇದ್ದು, ಆಗಸ್ಟ್ ಅಂತ್ಯದೊಳಗೆ ಇವರ 2ನೇ ಡೋಸ್ ಅವಧಿ ಮೀರಲಿದೆ. ಈ ಮಾಸಾಂತ್ಯ ದೊಳಗೆ 20 ಲಕ್ಷ ಡೋಸ್ ಬೇಕಿದೆ. ಹೀಗಾಗಿ ಈ ತಿಂಗಳಿಡೀ ಕೊವ್ಯಾಕ್ಸಿನ್ 2ನೇ ಡೋಸ್ ಪರದಾಟ ಇರಲಿದೆ.
ಕಳೆದ ತಿಂಗಳಲ್ಲಿ ಕೊವ್ಯಾಕ್ಸಿನ್ ದಾಸ್ತಾನು ಇತ್ತು. ಹೀಗಾಗಿ ಮೊದಲ ಡೋಸ್ ನೀಡಿದೆವು. ಎರಡನೇ ಡೋಸ್‌ಗೆ ಆದ್ಯತೆ ನೀಡಿ ಬಾಕಿ ಉಳಿಯದಂತೆ ಪೂರೈಸಲು ಕ್ರಮ ಕೈಗೊಳ್ಳ ಲಾಗುವುದು. ದಾಸ್ತಾನು ಹೆಚ್ಚು ಲಭ್ಯವಾದರೆ ಮೊದಲ ಡೋಸ್ ನೀಡಲಾಗುತ್ತದೆ.
– ಡಾ| ತ್ರಿಲೋಕ್‌ಚಂದ್ರ, ಆಯುಕ್ತರು, ಆರೋಗ್ಯ ಇಲಾಖೆ
–ಜಯಪ್ರಕಾಶ್ ಬಿರಾದಾರ್