Advertisement

ಸಿರಿಬಾಗಿಲು ಪ್ರತಿಷ್ಠಾನದಿಂದ ಕೋವಿಡ್‌ 19 ಯಕ್ಷ ಜಾಗೃತಿ ಯಕ್ಷಗಾನ ಬಿಡುಗಡೆ

07:23 PM Mar 22, 2020 | Sriram |

ವಿದ್ಯಾನಗರ: ಜಗತ್ತಿಗೆ ಸವಾಲಾ ಗಿರುವ ಕೋವಿಡ್‌ 19 ಬಗ್ಗೆ ಜಾಗೃತಿ ಮೂಡಿಸುವ ಕೆಲಸವು ವಿವಿಧ ರೀತಿಯಲ್ಲಿ ನಡೆಯುತ್ತಿದ್ದು ಕಲೆಯ ಮೂಲಕ ಜಾಗೃತಿ ಮೂಡಿಸುವ ಮಹತ್ಕಾರ್ಯದ ಮೂಲಕ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಶ್ಲಾಘನೀಯ.

Advertisement

ಯಕ್ಷಲೋಕಕ್ಕೆ ಗಣನೀಯ ಕೊಡುಗೆ ನೀಡಿರುವ ಈ ಪ್ರತಿಷ್ಠಾನವು ಲೋಕ ವ್ಯಾಪಿಯಾಗಿ ಹರಡಿಕೊಂಡಿರುವ ಮಹಾಮಾರಿ ಕೋವಿಡ್‌ 19 ರೋಗದ ಬಗ್ಗೆ ಯಕ್ಷಗಾನ ಮಾಧ್ಯಮದ ಮೂಲಕ ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಜಾಲತಾಣಗಳಲ್ಲಿ ಬಿತ್ತರಿಸುವ ಸಲುವಾಗಿ ಕಾಲ್ಪನಿಕ ಪ್ರಸಂಗ ಕೊರೊನಾ ಯಕ್ಷ ಜಾಗೃತಿ ಎಂಬ ಯಕ್ಷಗಾನವನ್ನು ಪ್ರಸ್ತುತ ಪಡಿಸಿ ಚಿತ್ರೀಕರಣವನ್ನು ನಡೆಸಿ, ದಾಖಲಿಸಿ ಬಿತ್ತರಿಸಿದೆ. ಮಾತ್ರವಲ್ಲ ಜಾಲಮಾಧ್ಯಮಗಳಲ್ಲಿ ಸಹಸ್ರಾರು ವೀಕ್ಷಕರು ವೀಕ್ಷಿಸಿ ಪ್ರತಿಕ್ರಿಯಿಸುತ್ತಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್‌ ಚಿಗುರುಪಾದೆ ಯವರ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ದಾಖಲೀಕರಣಗೊಂಡ ಯಕ್ಷಗಾನ ಕೊರೊನಾಸುರ ಕಾಳಗ ಪ್ರಸಂಗದ ಹಾಡುಗಳನ್ನು ಖ್ಯಾತ ಯಕ್ಷಗಾನ ಕವಿ ಶ್ರೀಧರ ಡಿ ಎಸ್‌ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಪದ್ಯರಚನೆ ಮಾಡಿರುತ್ತಾರೆ. ಯಕ್ಷಗಾನದ ಮೂಲಕ ಕೋವಿಡ್‌ 19 ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಈ ಪ್ರಸಂಗದಲ್ಲಿ ಸುಪ್ರಸಿದ್ಧ ಕಲಾವಿದರು ಫಲಾಪೇಕ್ಷೆಯಿಲ್ಲದೆ ಜನ ಜಾಗೃತಿ ಮೂಡಿಸಲು ಪ್ರಾಮಾಣಿಕ ಪ್ರಯೋಗ ನೀಡಿರುವುದು ಯಕ್ಷಪ್ರೇಮಿಗಳ ಮುಕ್ತಕಂಠದ ಹೊಗಳಿಕೆಗೆ ಪಾತ್ರವಾಗಿದೆ.

ದೇವಕಾನ ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯು ಉಚಿತವಾಗಿ ವೇಷ ಭೂಷಣಗಳನ್ನು ಒದಗಿಸಿದೆ.

ಪ್ರತಿಷ್ಠಾನದ ಈ ಉನ್ನತವಾದ ಪ್ರಯೋಗದ ಹಿಮ್ಮೇಳದಲ್ಲಿ ಭಾಗವತರು ಸಿರಿಬಾಗಿಲು ರಾಮಕೃಷ್ಣಮಯ್ಯ ಚೆಂಡೆ ಶಂಕರ ನಾರಾಯಣ ಭಟ್‌ ನಿಡುವಜೆ, ಮದ್ದಳೆ ಉದಯ ಕಂಬಾರು , ಚಕ್ರ ತಾಳದಲ್ಲಿ ಶ್ರೀಮುಖ ಯಸ್‌ ಆರ್‌ ಮಯ್ಯ ಹಾಗೂ ಕೋವಿಡ್‌ 19 ರಾಧಾಕೃಷ್ಣನಾವಡ ಮಧೂರು, ಧನ್ವಂತರಿ ವಾಸುದೇವ ರಂಗಾಭಟ್‌ ಮಧೂರು, ರಾಜೇಂದ್ರ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಮಣಿಭದ್ರ ಗುರುರಾಜ ಹೊಳ್ಳ ಬಾಯಾರು, ಪತ್ನಿ ಪ್ರಕಾಶ್‌ ನಾಯಕ್‌ ನೀರ್ಚಾಲು, ಮಣಿಕರ್ಣ ಕಿಶನ್‌ ಅಗ್ಗಿತ್ತಾಯ, ಪುರಜನರು ಶ್ರೀಕೃಷ್ಣಭಟ್‌ ದೇವಕಾನ, ಶಬರೀಶ ಮಾನ್ಯ ಕಿರಣ್‌ ಕುದ್ರೆಕೋಡ್ಲು ಪಾತ್ರವರ್ಗದಲ್ಲಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನದ ಚಿತ್ರೀಕರಣವನ್ನು ವರ್ಣ ಸ್ಟುಡಿಯೋ ನೀರ್ಚಾಲ್‌, ಕ್ಯಾಮರಾ ಸಹಕಾರ ಉದಯ ಕಂಬಾರು, ವೇಣುಗೋಪಾಲ್‌, ಶೇಖರ ವಾಂತಿಚ್ಚಾಲ್‌, ಮಹೇಶ್‌ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಗೌರವಾನ್ವಿತ ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂಗೆ ಯಕ್ಷಗಾನದ ಮೂಲಕ ಸಾಥ್‌ ನೀಡಿ, ಕೋವಿಡ್‌ 19 ವನ್ನು ತೊಲಗಿಸುವಂತೆ ಜನಜಾಗೃತಿ ಮೂಡಿಸುವ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಲವಾರು ಯಕ್ಷಗಾನೀಯ ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಕೊಡುಗೆ ಯಕ್ಷಗಾನ ಲೋಕಕ್ಕೆ ನೀಡಿದೆ. ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಿಸಿ ತನ್ಮೂಲಕ ನಿರಂತರ ಯಕ್ಷಗಾನ ಅಧ್ಯಯನ ಹಾಗೂ ಸಂಶೋಧನೆ ವಸ್ತುಸಂಗ್ರಹಾಲಯ, ಸಭಾಂಗಣ ನಡೆಸುವ ಇರಾದೆಯನ್ನು ಹೊಂದಲಾಗಿದ್ದು ಕಾಮಗಾರಿ ಭರದಿಂದ ಸಾಗುತ್ತಿರುವುದು ಉಲ್ಲೇಖಾರ್ಹ.

ಸಹಕಾರದಿಂದ ಸುಸೂತ್ರ
ಜಿಲ್ಲೆಯಲ್ಲಿ ಕೋವಿಡ್‌ 19  ಹರಡುವಿಕೆ ಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ನಿಯಂತ್ರಣಗಳನ್ನು ಹೇರಿದ್ದು ಈ ನಡುವೆ ಇಂತಹ ಕಾರ್ಯ ಸವಾಲೆನಿಸಿದರೂ ಎಲ್ಲರ ಸಹಕಾರದಿಂದ ಕೈಗೊಂಡ ಕಾರ್ಯ ಸುಸೂತ್ರವಾಗಿ ನಡೆಯಿತು. ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಕಲಾವಿದರು, ವೇಷಭೂಷಣಕ್ಕೆ ಸಹಕಾರ ನೀಡಿದವರು ಸಹಿತ ಎಲ್ಲರ ಸಹಕಾರ, ಕಲಾಪ್ರೇಮ ಮತ್ತು ಸೇವಾ ಮನೋಭಾವ ಮತ್ತು ಪರಿಶ್ರಮದಿಂದ ಶುಕ್ರವಾರ ರಾತ್ರಿ ಕಂಡ ಕನಸು ಶನಿವಾರ ರಾತ್ರಿ ನನಸಾಯಿತು.
-ರಾಮಕೃಷ್ಣ ಮಯ್ಯ
(ಖ್ಯಾತ ಭಾಗವತರು) ಸಿರಿಬಾಗಿಲು ಪ್ರತಿಷ್ಠಾನ

Advertisement

Udayavani is now on Telegram. Click here to join our channel and stay updated with the latest news.

Next