Advertisement

ಕೋವಿಡ್ 19 ಆತಂಕ ನಡುವೆ ಬಿಎಸ್ಸೆನ್ನೆಲ್‌ ಗುತ್ತಿಗೆ ಕಾರ್ಮಿಕರಿಗೆ ಬರೆ

11:43 AM Apr 16, 2020 | Sriram |

ಉಡುಪಿ: ಕೋವಿಡ್ 19 ಸಂಕಟದಿಂದ ದೇಶಾದ್ಯಂತ ಲಾಕ್‌ಡೌನ್‌ ಇದ್ದು, ಎಲ್ಲರೂ ವಿವಿಧ ರೀತಿಯ ಸಮಸ್ಯೆಗಳಲ್ಲಿದ್ದಾರೆ. ಆದರೆ ಬಿಎಸ್ಸೆನ್ನೆಲ್‌ ಸಂಸ್ಥೆಯ ಕಾರ್ಮಿಕರ ಸಮಸ್ಯೆ ಮಾತ್ರ ವಿಭಿನ್ನವಾದುದು. ಕೆಲಸವಿಲ್ಲ, ಬಾಕಿ ವೇತನವೂ ಕೈಸೇರಿಲ್ಲ. ತಲೆ ಮೇಲೆ ಸಾಲದ ಶೂಲ. ಈಗ ಲಾಕ್‌ಡೌನ್‌ನಿಂದ ಜೀವನ ಮತ್ತಷ್ಟು ಅಧೋಗತಿಗೆ ತಲುಪಿದೆ.

Advertisement

ಅವಿಭಜಿತ ದ.ಕ. ಜಿಲ್ಲೆ, ಮಂಗಳೂರು ಟೆಲಿಕಾಂ ವೃತ್ತ ವ್ಯಾಪ್ತಿಯಲ್ಲಿ 1,100ಕ್ಕೂ ಹೆಚ್ಚು ಮಂದಿ ಗುತ್ತಿಗೆ ನೆಲೆಯಲ್ಲಿ ನಿಯೋ ಜನೆಗೊಂಡಿದ್ದರು. ಕಚೇರಿ ನಿರ್ವಹಣೆ, ಕೇಬಲ್‌ ಜೋಡಣೆ, ಲೈನ್‌ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದರು. 2019ರಲ್ಲಿ ದ.ಕ., ಉಡುಪಿ, ಕಾರವಾರ, ಶಿವಮೊಗ್ಗ ವ್ಯಾಪ್ತಿಯಲ್ಲಿ 1,100 ಗುತ್ತಿಗೆ ಕಾರ್ಮಿಕರಿದ್ದರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಕ್ರಮೇಣ ಆರ್ಥಿಕ ನಷ್ಟದಿಂದ ಸಂಸ್ಥೆ ಕಾರ್ಮಿಕರ ಸಂಖ್ಯೆ ಕಡಿತಗೊಳಿಸಿತ್ತು. ಸಿಬಂದಿ ಅನಿವಾರ್ಯ ಎನಿಸಿದಾಗ ವೇತನ ಬರುತ್ತದೆ ಎಂಬ ವಿಶ್ವಾಸ ಮೂಡಿಸಿ ಅಧಿಕಾರಿಗಳು ಕಾರ್ಮಿಕರನ್ನು ದುಡಿಸಿದ್ದರು. ಅವರ ನಿತ್ಯದ ಖರ್ಚು ನೋಡಿಕೊಳ್ಳುತ್ತಿದ್ದರು.

ಪಿ.ಎಫ್. ಖಾತೆಗೂ ಹಣ ಜಮೆ ಆಗಿಲ್ಲ
ಹಲವು ತಿಂಗಳು ಕಳೆದರೂ ವೇತನ ಬರಲಿಲ್ಲ. ಕೆಲವರು ಅರ್ಧಕ್ಕೆ ಬಿಟ್ಟು ಹೋದರು. ಇನ್ನುಳಿದವರು ಇಂದಲ್ಲ ನಾಳೆ ಬಂದೀತು ಎನ್ನುವ ನಿರೀಕ್ಷೆಯಲ್ಲಿ ಕೆಲಸ ಮುಂದುವರಿಸಿದರು. ಈಗ ಅವಿಭಜಿತ ದ.ಕ. ಜಿಲ್ಲೆ ಯಲ್ಲಿ 200 ಮಂದಿ ಉಳಿದುಕೊಂಡಿದ್ದಾರೆ. ಅರ್ಧಕ್ಕೆ ಬಿಟ್ಟವರ ಹಾಗೂ ಈಗಲೂ ಕರ್ತವ್ಯದಲ್ಲಿರುವವರ ವೇತನ ಬರಲು ಬಾಕಿಯಿದೆ. 2018ರಿಂದ ಕಾರ್ಮಿಕರ ಪಿ.ಎಫ್. ಖಾತೆಗೂ ಹಣ ಪಾವತಿಯಾಗಿಲ್ಲ.

ಗುತ್ತಿಗೆದಾರರಿಗೂ ಬಾಕಿ
ಸಂಸ್ಥೆಯು ಕಾರ್ಮಿಕರಿಗೆ 14 ತಿಂಗಳ ಹಣ, ಗುತ್ತಿಗೆ ದಾರರಿಗೆ 12.5 ಕೋ. ರೂ. ಪಾವತಿ ಬಾಕಿ ಇರಿಸಿದೆ. ಕಾರ್ಮಿಕರ ಆವಶ್ಯಕತೆ ಮನಗಂಡು ಗುತ್ತಿಗೆದಾರರು 1.5 ಕೋ. ರೂ.ಗಳಷ್ಟು ಸ್ವಂತ ಹಣ ಹಂಚಿದ್ದಾರೆ.

ಬಾಕಿ ವೇತನ ಸಿಗದೆ, ಕೆಲಸವಿಲ್ಲದೆ ಮನೆಯಲ್ಲಿರು ವವರ ಸ್ಥಿತಿ ಅತಂತ್ರವಾಗಿದೆ. ಇವರನ್ನು ಅವಲಂಬಿಸಿ ರುವ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಜೀವನೋಪಾಯಕ್ಕಾಗಿ ಮೀಟರ್‌ ಬಡ್ಡಿ ಸಾಲ ತೆಗೆದು, ಸಾಲ ಭಾರ ಹೊತ್ತುಕೊಂಡಿದ್ದಾರೆ. ಬಂದ್‌ನಿಂದ ಈಗ ಇವರ ಬದುಕು ಮತ್ತಷ್ಟು ಜಟಿಲವಾಗಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಆಯಾ ಉದ್ಯೋಗದಾತ ಸಂಸ್ಥೆಗಳು ವೇತನ ಸಹಿತ ರಜೆ ನೀಡುವಂತೆ ಸರಕಾರ ಸೂಚಿಸಿದೆ. ಗುತ್ತಿಗೆ ಕಾರ್ಮಿಕರಿಗೂ ಬಿಎಸ್ಸೆನ್ನೆಲ್‌ ವೇತನ ನೀಡಿ, ಅವರ ಕುಟುಂಬಗಳಿಗೆ ಕೊಂಚ ನೆಮ್ಮದಿ ಕರುಣಿಸಬೇಕಿದೆ.

ಗುತ್ತಿಗೆ ಕಾರ್ಮಿಕರಿಗೆ ಒಂದು ತಿಂಗಳ ವೇತನ ನೀಡಲು ಕ್ರಮ ತೆಗೆದುಕೊಂಡಿದ್ದೇವೆ. ಮುಂದೆ ಹಂತ ಹಂತ ವಾಗಿ ಬಾಕಿ ವೇತನ ನೀಡಲಾಗುವುದು.
-ರವಿ, ಮಹಾಪ್ರಬಂಧಕರು ಬಿಎಸ್ಸೆನ್ನೆಲ್‌, ಮಂಗಳೂರು

ವೇತನ ವಂಚಿತ ಕಾರ್ಮಿಕರಿಗೆ ವಿತರಣೆಗಿರುವ 6.5 ಕೋಟಿ ರೂ. ಬಿಲ್‌ ಅಧಿಕಾರಿಗಳಲ್ಲಿದೆ. ಅದನ್ನು ತತ್‌ಕ್ಷಣ ಪಾವತಿಸಿದಲ್ಲಿ ಸದ್ಯದ ಪರಿಸ್ಥಿತಿಯಿಂದ ಪಾರಾಗಬಹುದು. ಈಗ ಸಂಕಷ್ಟದ ಕಾಲದಲ್ಲಿ ಕಾರ್ಮಿಕರಿಗೆ ನೆರವು ನೀಡುವ ಅಗತ್ಯವಿದೆ.
-ಸತೀಶ್‌ ಹೆಗ್ಡೆ, ಗುತ್ತಿಗೆದಾರರು

Advertisement

Udayavani is now on Telegram. Click here to join our channel and stay updated with the latest news.

Next