ವಾಷಿಂಗ್ಟನ್: ಕೋವಿಡ್ -19 ಆರ್ಭಟಕ್ಕೆ ಅಮೆರಿಕಾದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಲೇ ಇದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 1,738 ಜನರು ಬಲಿಯಾಗಿದ್ದಾರೆಂದು ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾನಿಲಯ ವರದಿ ತಿಳಿಸಿದೆ.
ಯುಎಸ್ ನಲ್ಲಿ ಒಟ್ಟಾರೆಯಾಗಿ ಈ ಮಾರಕ ವೈರಸ್ ಗೆ 47,676 ಜನರು ಬಲಿಯಾಗಿದ್ದು ಇತರ ದಿನಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಜೀ ನ್ಯೂಸ್ ತಿಳಿಸಿದೆ. ಜಗತ್ತಿನಾದ್ಯಂತ ಉಳಿದ ದೇಶಗಳಿಗಿಂತ ಅಮೆರಿಕಾದಲ್ಲೇ ಕೋವಿಡ್ 19 ರುದ್ರ ನರ್ತನ ಮೆರೆದಿದ್ದು ಅತೀ ಹೆಚ್ಚು ಜನರು ಮೃತಪಟ್ಟ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಮಾತನಾಡುತ್ತಾ, ಈ ವೈರಸ್ ಬಹುಕಾಲದವರೆಗೂ ಕಾಡುವ ಅಪಾಯವಿದೆ. ಹಲವು ದೇಶಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಲಾಕ್ ಡೌನ್ ಅನ್ನು ವ್ಯಥಾ ಸಡಿಲಿಸಬಾರದು ಎಂದಿದ್ದಾರೆ.
ಭಾರತದಲ್ಲೂ ಕೋವಿಡ್ -19 ಭೀತಿ ಹೆಚ್ಚಾಗುತ್ತಲೇ ಇದ್ದು ಈವರೆಗೂ 20,471 ಜನರಿಗೆ ಸೋಂಕು ತಗುಲಿದ್ದು, 652 ಜುನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,486 ಹೊಸ ಪ್ರಕರಣಗಳು ವರದಿಯಾಗಿ 49 ಜನರು ಸಾವನ್ನಪ್ಪಿದ್ದಾರೆಂದು ವರದಿ ತಿಳಿಸಿದೆ.
ಜಗತ್ತಿನಾದ್ಯಂತ 26 ಲಕ್ಷಕ್ಕಿಂತಲೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದು, 1.84ಲಕ್ಷ ಜನ ಕೊನೆಯುಸಿರೆಳೆದಿದ್ದಾರೆ. ವೈರಾಣುವಿಗೆ ಒಳಗಾದವರಲ್ಲಿ 7 ಲಕ್ಷಕ್ಕಿಂತ ಹೆಚ್ಚು ಜನರು ಗುಣ ಮುಖರಾಗಿದ್ದಾರೆಂದು ವರದಿ ತಿಳಿಸಿದೆ.