Advertisement

ಬೀಡಿ ಕಾರ್ಮಿಕರ ಸ್ವಾವಲಂಬಿ ಬದುಕಿಗೆ ಧಕ್ಕೆ ತಂದ ಕೋವಿಡ್‌-19

11:03 PM Apr 16, 2020 | Sriram |

ಉಡುಪಿ: ಬೀಡಿ ಕಟ್ಟುವುದನ್ನೇ ನಂಬಿ ಜೀವನ ಸಾಗಿಸುವ ಸಹಸ್ರಾರು ಕುಟುಂಬಗಳು ಜಿಲ್ಲೆಯಲ್ಲಿವೆ. ಅವರೆಲ್ಲರೂ ಈಗ ಕೋವಿಡ್‌-19 ವೈರಸ್‌ನಿಂದ ಸಂಕಷ್ಟಕ್ಕೊಳಗಾಗಿದ್ದಾರೆ. 

Advertisement

ಸ್ವಂತ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಒಂಟಿ ಮಹಿಳೆಯರು, ವಿಧವೆಯರು, ಸಂಸಾರದ ನಿರ್ವಹಣೆ ಹೊಣೆ ಹೊತ್ತ ಹೆಚ್ಚಿನ ಮಹಿಳೆಯರು ಬೀಡಿ ಕಟ್ಟುವ ಕೆಲಸಗಳಲ್ಲಿ ಬಹಳಷ್ಟು ವರ್ಷಗಳಿಂದ ತೊಡಗಿಸಿಕೊಳ್ಳುತ್ತ ಬಂದಿದ್ದಾರೆ. ಅವರೆಲ್ಲರಿಗೂ ಈಗ ಕೋವಿಡ್‌-19 ದೊಡ್ಡ ಆತಂಕವನ್ನೇ ತಂದಿಟ್ಟಿದೆ.

ಅಷ್ಟಿಷ್ಟು ಆದಾಯ
ಮನೆಯಲ್ಲೇ ಇದ್ದುಕೊಂಡು ಬೀಡಿ ಸುತ್ತಿ ಗುತ್ತಿಗೆದಾರ ಅಥವಾ ಏಜೆನ್ಸಿಗಳಿಗೆ ಅದನ್ನು ನೀಡಿ ಕೂಲಿ ಪಡೆಯುತ್ತಿದ್ದರು. ಬಹುತೇಕ ಮಹಿಳೆಯರು ಬೀಡಿ ಸುತ್ತುವುದರಿಂದ ಸ್ವಾವಲಂಬಿಗಳಾಗಿದ್ದರು. ಮನೆಯ ಖರ್ಚು, ಮಕ್ಕಳ ಶಿಕ್ಷಣದ ವೆಚ್ಚವನ್ನು ಕೂಡಿಟ್ಟ ಅಷ್ಟಿಷ್ಟು ಆದಾಯದಿಂದ ಭರಿಸುತ್ತಿದ್ದರು. ಅವರೆಲ್ಲರ ಆದಾಯಕ್ಕೆ ಈಗ ಕೋವಿಡ್‌-19 ಹೊಡೆತ ನೀಡಿದೆ.

ಅಸಂಘಟಿತ ಕಾರ್ಮಿಕರ ಅಡಿಯಲ್ಲಿ ಬರುವ ಬೀಡಿ ಕೈಗಾರಿಕೆಯಲ್ಲಿ ಜಿಲ್ಲೆಯಲ್ಲಿ 50 ಸಾವಿರ ಸಂಖ್ಯೆಯ ಮಹಿಳಾ ಬೀಡಿ ಕಾರ್ಮಿಕರಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳ ಹಳ್ಳಿ ಹಳ್ಳಿಗಳಿಗೆ ಬೀಡಿ ಉದ್ಯಮ ಹರಡಿಕೊಂಡಿದ್ದು, ಲಾಕ್‌ಡೌನ್‌ ಸಮಸ್ಯೆ ಈ ವಲಯದ ಕಾರ್ಮಿಕರನ್ನು ಅತಿಯಾಗಿ ಕಾಡುತ್ತಿದೆ. ಕಳೆದ 23 ದಿನಗಳಿಂದ ಕೂಲಿಯೂ ಸಿಗದೆ, ಕಟ್ಟಿದ ಬೀಡಿಯನ್ನು ಏಜೆಂಟರು ಪಡೆಯದ ಕಾರಣದಿಂದ ಕಾರ್ಮಿಕರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಬೀಡಿ ಉದ್ಯಮ ಬಾಗಿಲು ಮುಚ್ಚಿದೆ. ಇದರಿಂದ ಕಾರ್ಮಿಕರು ಮತ್ತು ಅವರು ಕುಟುಂಬದವರು ಹಸಿವಿಗೆ ಗುರಿಯಾಗಿದ್ದಾರೆ. ಈ ವಲಯದ ಕಾರ್ಮಿಕರಿಗೆ ಬಹು ದೊಡ್ಡ ಹೊಡೆತ ನೀಡಿದೆ.

ಮಾಲಕರು,ಸರಕಾರ ನೆರವಿಗೆ ಬರಬೇಕು
ಬೀಡಿ ಕಾರ್ಮಿಕರ ಕುಟುಂಬ ನಿರ್ವಹಣೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ. ಮಾಲಕರು ಮತ್ತು ಸರಕಾರ ದಿನವೊಂದಕ್ಕೆ 200 ರೂ.ನಂತೆ ಒಂದು ತಿಂಗಳ ಭತ್ತೆ 6 ಸಾವಿರ ರೂ.ಗಳನ್ನು ಎಲ್ಲ ಬೀಡಿ ಕಾರ್ಮಿಕರಿಗೆ ನೀಡಬೇಕು. ಇತರೆ ಕಾರ್ಮಿಕರಂತೆ ಬೀಡಿ ಕಾರ್ಮಿಕರಿಗೂ ಲಾಕ್‌ಡೌನ್‌ ಅವಧಿಯ ವೇತನವನ್ನು ಬೀಡಿ ಮಾಲಕರು ನೀಡಿದ್ದಲ್ಲಿ ಪರಿಸ್ಥಿತಿ ಚೇತರಿಕೆಯಾಗಬಹುದು ಎನ್ನುತ್ತಾರೆ ಉಡುಪಿ ಸಿಐಟಿಯು ಕಾರ್ಮಿಕ ಮುಖಂಡ ಬಾಲಕೃಷ್ಣ.

Advertisement

ಸರಕಾರಕ್ಕೆ ಮನವಿ
ಅಖೀಲ ಭಾರತ ಬೀಡಿ ಫೆಡರೇಶನ್‌ ಮೂಲಕ ಕೇಂದ್ರ, ರಾಜ್ಯ ಸರಕಾರಕ್ಕೆ ಮನವಿ ಮಾಡಿ ದ್ದೇವೆ. ಕಾರ್ಮಿಕ ಕಲ್ಯಾಣ ನಿಧಿ ಹಣ ಬಳಸಿ ಕೊಂಡು ಮಹಿಳೆಯರ ಖಾತೆಗೆ ಹಣ ಪಾವತಿಸಿ ಅವರ ಬದುಕನ್ನು ಉಜ್ವಲಗೊಳಿಸುವ ಕೆಲಸವಾಗ ಬೇಕು. ಆದರೇ ಎರಡೂ ಸರಕಾರಗಳು ಬೇಡಿಕೆಗೆ ಸ್ಪಂದಿಸದೆ ಇರುವುದು ಬೇಸರ ತಂದಿದೆ.
-ಮಹಾಬಲ ವಡೇರಹೋಬಳಿ,
ಅಧ್ಯಕ್ಷರು, ಜಿಲ್ಲಾಬೀಡಿ ಕಾರ್ಮಿಕರ ಫೆಡರೇಶನ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next