Advertisement

ಕೋವಿಡ್-19 ಗೆದ್ದ ನಾಲ್ವರು

01:56 AM Apr 07, 2020 | Sriram |

ಮಂಗಳೂರು: ಕೋವಿಡ್-19 ಸೋಂಕಿತ ರಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಸಂಪೂರ್ಣ ಗುಣಮುಖರಾಗಿ ಸೋಮವಾರ ಬಿಡುಗಡೆಗೊಂಡಿದ್ದಾರೆ. ಮುಂದಿನ 14 ದಿನಗಳ ಕಾಲ ಅವರೆಲ್ಲರೂ ಮನೆಯಲ್ಲೇ ನಿಗಾವಣೆಯಲ್ಲಿ ಇರಲಿದ್ದಾರೆ.

Advertisement

ದುಬಾೖಯಲ್ಲಿ ಬ್ರ್ಯಾಂಡೆಡ್‌ ವಾಚ್‌ ವ್ಯಾಪಾರ ನಡೆಸುತ್ತಿದ್ದ ಭಟ್ಕಳ ಮೂಲದ 22ರ ಯುವಕ, ದುಬಾೖಯಿದ ಮಂಗಳೂರಿಗೆ ಬಂದಿದ್ದ ಕಾಸರ ಗೋಡು ಮೂಲದ 32 ವರ್ಷದ ಯುವಕ, 47 ವರ್ಷದ ಪುರುಷ ಹಾಗೂ 24 ವರ್ಷದ ಯುವಕ ಆಸ್ಪತ್ರೆಯಿಂದ ಬಿಡುಗಡೆಯಾದವರು.

ಭಟ್ಕಳದ ಯುವಕ ಮಾ. 19ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ತಪಾಸಣೆ ಸಂದರ್ಭ ರೋಗ ಲಕ್ಷಣಗಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಂದಲೇ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ. 22ರಂದು ಆತನಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದು ಮೊದಲ ಪ್ರಕರಣವಾಗಿತ್ತು. ಆತನಿಗೆ ಪ್ರತ್ಯೇಕ ಐಸೋಲೇಶನ್‌ ವಾರ್ಡ್‌ ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. 14 ದಿನಗಳ ಅನಂತರ ಮತ್ತೂಮ್ಮೆ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಲಾಯಿತು. ಮನೆ ಮಂದಿ ಕಾರಿನಲ್ಲಿ ಭಟ್ಕಳಕ್ಕೆ ಕರೆದೊಯ್ದರು.

ಉಳಿದ ಮೂವರೂ ಡಿಸ್‌ಚಾರ್ಜ್‌
ಆಸ್ಪತ್ರೆಯಿಂದ ಬಿಡುಗಡೆಯಾದ ಉಳಿದ ಮೂವರ ಪೈಕಿ ದುಬಾೖಯಿಂದ ಮಾ. 19ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕಾಸರಗೋಡಿನ 47 ವರ್ಷದ ವ್ಯಕ್ತಿ, 20ರಂದು ಆಗಮಿಸಿದ್ದ ಕಾಸರ ಗೋಡು ಮೂಲದ 32 ವರ್ಷ ಮತ್ತು 24 ವರ್ಷದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನೇರವಾಗಿ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮುಖಾಂತರ ಕಳುಹಿಸಿಕೊಡಲಾಗಿತ್ತು. ಅವರ ಪರೀಕ್ಷಾ ವರದಿಕ್ರಮವಾಗಿ ಮಾ. 23, 24ರಂದು ಬಂದಾಗ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಎ. 4ರಂದು ಮತ್ತೂಮ್ಮೆ ಎಲ್ಲರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ನೆಗೆಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರನ್ನೂ ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಲಾಯಿತು.

ಜಿಲ್ಲಾಡಳಿತಕ್ಕೆ ಮೊದಲ ಯಶಸ್ಸು
ಜಿಲ್ಲೆಯಲ್ಲಿ ಮೊದಲ ಪಾಸಿಟಿವ್‌ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತತ್‌ಕ್ಷಣದಿಂದಲೇ ಕೈಗೊಂಡಿತ್ತು. ಇದೊಂದು ಸವಾಲಿನ ಪ್ರಕರಣ ವಾಗಿತ್ತು. ಈ ನಿಟ್ಟಿನಲ್ಲಿ ವೆನ್ಲಾಕ್ ಅಧೀಕ್ಷಕರು, ವೈದ್ಯರು, ನರ್ಸ್‌ ಹಾಗೂ ಸಿಬಂದಿ ತಮ್ಮ ಪೂರ್ಣ ಸೇವೆಯನ್ನು ಮೀಸಲಿಟ್ಟು, ಅಂತಿಮವಾಗಿ ರೋಗಿಗಳನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆತ್ಮವಿಶ್ವಾಸವಿರಲಿ
ಕೋವಿಡ್-19ಕ್ಕೆ ಹೆದರುವ ಅಗತ್ಯವಿಲ್ಲ. ಆತ್ಮವಿಶ್ವಾಸವೇ ಇಲ್ಲಿ ಮುಖ್ಯ. ಸೋಂಕಿನ ವಿರುದ್ಧ ಹೋರಾಡಲು ನಮ್ಮಲ್ಲಿ ಧೈರ್ಯ ಮುಖ್ಯ. ಇದು ದ.ಕ. ಜಿಲ್ಲೆಯಲ್ಲಿ ಕೊರೊನಾ ದಿಂದ ಗುಣಮುಖನಾದ ಭಟ್ಕಳದ ಯುವಕ ಜನರಿಗೆ ನೀಡಿದ ಧೈರ್ಯದ ಮಾತುಗಳು.

331 ಪೈಕಿ 319 ವರದಿ ನೆಗೆಟಿವ್‌
ದ.ಕ. ಜಿಲ್ಲೆಯಲ್ಲಿ ಈವರೆಗೆ ಪರೀಕ್ಷೆಗೆ ಕಳುಹಿಸಿರುವ 341 ಮಂದಿಯ ಗಂಟಲು ದ್ರವ ಮಾದರಿ ಪೈಕಿ 331 ಮಂದಿಯ ವರದಿ ಸ್ವೀಕರಿಸಲಾಗಿದ್ದು, 319 ನೆಗೆಟಿವ್‌ ಆಗಿದ್ದು, 12 ಪಾಸಿಟಿವ್‌ ಬಂದಿದೆ.ಇತ್ತೀಚೆಗೆ ದಾಖಲಾದವರ ಪೈಕಿ 21 ಮಂದಿಯ ಗಂಟಲು ದ್ರವ ಮಾದರಿ ವರದಿ ಸೋಮವಾರ ಜಿಲ್ಲಾಡಳಿತದ ಕೈ ಸೇರಿದ್ದು, ಎಲ್ಲವೂ ನೆಗೆಟಿವ್‌ ಆಗಿವೆ. 10 ವರದಿಗಳು ಸ್ವೀಕರಿಸಲು ಬಾಕಿ ಇದೆ. 10 ಮಾದರಿಗಳನ್ನು ಸೋಮವಾರ ಪರೀಕ್ಷೆಗೆ ಕಳುಹಿಸಲಾಗಿದೆ. 21 ಮಂದಿಯನ್ನು ಸೋಮವಾರ ತಪಾಸಣೆಗೊಳಪಡಿಸಲಾಗಿದೆ. ಈವರೆಗೆ 4,237 ಮಂದಿ ಗೃಹ ನಿಗಾವಣೆಯಲ್ಲಿದ್ದು, 10 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿದ್ದಾರೆ. 1,709 ಮಂದಿ ಇಲ್ಲಿವರೆಗೆ 29 ದಿನಗಳ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next