Advertisement

ಸೋಂಕಿನ ಸುಳಿಯಲ್ಲಿ ಕೋವಿಡ್‌ 19 ವಾರಿಯರ‍್ಸ್‌

06:11 AM Jun 21, 2020 | Lakshmi GovindaRaj |

ಬೆಂಗಳೂರು: ಪೊಲೀಸ್‌, ವೈದ್ಯಕೀಯ ವಿದ್ಯಾರ್ಥಿಗಳು, ಬಿಎಂಟಿಸಿ ಸಿಬ್ಬಂದಿ ಸೇರಿ ಕೋವಿಡ್‌ 19 ವಾರಿಯರ‍್ಸ್‌‌ಗೂ ಶನಿವಾರ ಕೋವಿಡ್‌ 19 ದೃಢಪಟ್ಟಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಶನಿವಾರ 94 ಮಂದಿಗೆ ಸೋಂಕು  ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಮೂವರು ಮೃತಪಡುವ ಮೂಲಕ ಸಾವಿನ ಸಂಖ್ಯೆ 61 ಕ್ಕೆ ಏರಿಕೆಯಾಗಿದೆ. ಒಂದೆಡೆ ಸಾವಿನ ಸಂಖ್ಯೆ ಹಾಗೂ ಸೋಂಕಿತರು ಹೆಚ್ಚಳವಾಗುತ್ತಿದ್ದು, ಗುಣಮುಖರಾಗುವವರು ಬೆರಳೆಣಿಕೆಯಷ್ಟು.

Advertisement

ಸಮುದಾಯಕ್ಕೂ ಸೋಂಕು ಲಗ್ಗೆ ಇಡುತ್ತಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್‌ ಕಡ್ಡಾಯ ಮಾಡಿದರೂ, ಜನರು ಎಗ್ಗಿಲ್ಲದೇ ಸಂಚಾರ ನಡೆಸುತ್ತಿದ್ದು, ಸೋಂಕು ಹೆಚ್ಚ ಳಕ್ಕೆ  ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ರಾಜ್ಯದಲ್ಲಿನ ವಿವಿಧ ಜಿಲ್ಲೆಗಳಲ್ಲಿ ಗುಣಮುಖವಾಗುವವರ ಪ್ರಮಾಣ ಶೇ. 50 ರಷ್ಟಿದ್ದು, ಮಹಾನಗರದಲ್ಲಿ ಮಾತ್ರ ಶೇ. 1ರಷ್ಟು ಇರುವುದು ಜನರನ್ನು ಚಿಂತೆಗೀಡು ಮಾಡಿದೆ.

ಶನಿವಾರವೂ ಕೋವಿಡ್‌ 19 ತನ್ನ ಅಟ್ಟಹಾಸ ಮುಂದುವರಿಸಿದ್ದು, ಇಬ್ಬರ ಪೊಲೀಸರು, 4 ಮೆಡಿಕಲ್‌ ವಿದ್ಯಾರ್ಥಿಗಳು, ಬಿಎಂಟಿಸಿ ಸಿಬ್ಬಂದಿ ಸೇರಿ 94 ಮಂದಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಇಲ್ಲಿಯವರೆಗೆ 1076 ಸೋಂಕಿತರು ಪತ್ತೆಯಾಗಿದ್ದಾರೆ.  621 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 14,909 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದ್ದು, 279 ಕಂಟೈನ್ಮೆಂಟ್‌ ವಲಯ ಮಾಡಲಾಗಿದೆ.

ತಮಿಳುನಾಡಿನಿಂದ ಬಂದ ಇಬ್ಬರು ಹಾಗೂ ದಮನ್‌ನಿಂದ ಬಂದಿರುವ 18 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೆಆರ್‌ ಮಾರುಕಟ್ಟೆಯ ಆನಂದಪುರ ಕೊಳಗೇರಿಯಲ್ಲಿ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಹಲವು ದಿನಗಳಿಂದ ಜ್ವರ,  ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಶುಕ್ರವಾರ ಸಂಜೆ ಚಾಮರಾಜ  ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದಾಗ ಪಾಸಿಟಿವ್‌ ಖಚಿತವಾಗಿದೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸುವ ಮೊದಲೇ ವ್ಯಕ್ತಿ ಮೃತಪಟ್ಟಿದ್ದಾರೆ. ಕಲಾಸಿಪಾಳ್ಯ ಠಾಣೆಯ 56 ವರ್ಷದ ಪೊಲೀಸ್‌  ಕೋವಿಡ್‌ 19ಗೆ ಮೃತಪಟ್ಟಿದ್ದಾರೆ.

ಕೋವಿಡ್‌ 19ಗೆ ಮೃತಪಟ್ಟಿದ್ದ ವಿವಿಪುರಂ ಎಎಸ್‌ಐ ಜತೆಗೆ ಇವರದ್ದು ಪ್ರಾಥಮಿಕ ಸಂಪರ್ಕ ಇತ್ತು ಎಂಬುದು ತಿಳಿದು ಬಂದಿದೆ. ಕೋವಿಡ್‌ 19  ವಾರಿಯರ‍್ಸ್‌‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೋರಮಂಗಲದ ಚಾಲಕ ಹಾಗೂ ನಿರ್ವಾಹಕನಿಗೆ ಸೋಂಕು ಪತ್ತೆಯಾಗಿದೆ. ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಿಬ್ಬಂದಿ 25 ಮಂದಿ ಸ್ನೇಹಿತರ ಜತೆಗೂಡಿ  ಹುಟ್ಟುಹಬ್ಬದ ಆಚರಣೆ ಮಾಡಿದ್ದು, ಇವರಿಗೂ ಸೋಂಕು ತಗಲುವ ಆತಂಕ ಎದುರಾಗಿದೆ.

Advertisement

ರಾಮಮಂದಿರ ಸೀಲ್‌ ಡೌನ್‌: ರಾಜಾಜಿನಗರದ ರಾಮಮಂದಿರದಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ವ್ಯಕ್ತಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ಪಾಲಿಕೆ ಅಧಿಕಾರಿಗಳು ರಾಮಮಂದಿರವನ್ನು ಒಂದು ವಾರ ಸೀಲ್‌ ಡೌನ್‌  ಮಾಡಿದ್ದಾರೆ. ಶನಿವಾರ ರಾಮಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ಸೋಂಕು ಪತ್ತೆಯಾಗಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 6 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ.

2.71 ಲಕ್ಷ ರೂ. ದಂಡ ಸಂಗ್ರಹ: ಕೋವಿಡ್‌-19 ಸೋಂಕು ನಿಯಂತ್ರಿಸುವ ಹಿನ್ನೆಲೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಮುಖಗವಸು(ಮಾಸ್ಕ್‌) ಧರಿಸದೇ  ಸಾರ್ವಜನಿಕ  ಸ್ಥಳಗಳಲ್ಲಿ ಅಡ್ಡಾಡುವವರಿಗೆ ಮಾರ್ಷಲ್‌ಗ‌ಳು ದಂಡ  ಗ್ರಹಿಸುತ್ತಿದ್ದು, ಶನಿವಾರ 1351 ಮಂದಿಗೆ 2.71 ಲಕ್ಷ ರೂ. ಸಂಗ್ರಹಿಸಿದ್ದಾರೆ.

ಪೂರ್ವ ವಲಯ ದಲ್ಲಿ 66 ಸಾವಿರ, ಪಶ್ಚಿಮ 52400, ದಕ್ಷಿಣ ವಲಯ ದಲ್ಲಿ 78 ಸಾವಿರ  ರೂ., ಮಹದೇವಪುರ 19803, ಆರ್‌. ಆರ್‌.ನಗರ 13 ಸಾವಿರ ರೂ., ಯಲಹಂಕ 19,200, ದಾಸರಹಳ್ಳಿ 6800, ಬೊಮ್ಮನಹಳ್ಳಿ 15800 ರೂ. ಸಂಗ್ರಹಿಸಿದ್ದಾರೆ. ಮಾಸ್ಕ್‌ ಧರಿಸದ 1,316 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 35 ಮಂದಿ ಸೇರಿದಂತೆ 1,351 ಮಂದಿಯಿಂದ ಒಟ್ಟು 2.71 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು: ನಗರದ ಖಾಸಗಿ ಕಾಲೇಜಿನ 4 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ಮೆಡಿಕಲ್‌ ಕಾಲೇಜಿನಲ್ಲಿ ಆತಂಕ ಮನೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆಯ ಕಂಟ್ರೋಲ್‌  ರೂಮ್‌ನಲ್ಲಿ ರೋಗಿಗಳ ಒಳಬರುವುದು ಮತ್ತು ಹೋಗುವುದನ್ನು ದಾಖಲಿಸುವ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಸಿ ಕಾಲೇಜಿನ 4 ವೈದ್ಯ ವಿದ್ಯಾರ್ಥಿಗಳಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಬಿಎಂಸಿ ಕಾಲೇಜಿನ ಡೀನ್‌  ಅವರೊಂದಿಗೂ ಸೋಂಕಿತ ವೈದ್ಯ ವಿದ್ಯಾರ್ಥಿಗಳು ಪ್ರಾಥಮಿಕ ಸಂಪರ್ಕ ವಿವರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಸಿಬಿ ಕಚೇರಿ ಮತ್ತೆ ಸೀಲ್‌: ಇತ್ತೀಚೆಗೆ ವಂಚನೆ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದ ಮೂವರು ಆರೋಪಿಗಳ ಪೈಕಿ ಮತ್ತೆ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಸಿಸಿಬಿ ಕಚೇರಿಯನ್ನು ಮತ್ತೆ ಸೀಲ್‌ಡೌನ್‌ ಮಾಡಲಾಗಿದೆ.  25 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಹಲವೆಡೆ ಕೋವಿಡ್‌ 19 ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಅನಗತ್ಯ ಓಡಾಟ ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇನೆ. ಅಗತ್ಯ ಕಾರ್ಯಗಳಿಗೆ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡತಕ್ಕದ್ದು. ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ವ್ಯಾಪಾರ- ವಹಿವಾಟು ಹಾಗೂ ಇತರೆ ಕೆಲಸಗಳನ್ನು ನಡೆಸಬೇಕಾಗಿ ವಿನಂತಿಸುತ್ತೇನೆ. 
-ಆರ್‌.ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next