Advertisement

ಕೋವಿಡ್ 19 ವಾರ್‌ ರೂಮ್‌ಗೆ ಚಾಲನೆ

11:19 AM Mar 24, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕು ತಡೆದು ಅಗತ್ಯ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವ ಉದ್ದೇಶದಿಂದ ಪಾಲಿಕೆಯ ಕೇಂದ್ರ ಕಚೇರಿಯ ಕಟ್ಟಡದಲ್ಲಿ ವಾರ್‌ ರೂಮ್‌ಗೆ ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು ಸೋಮವಾರ ಚಾಲನೆ ನೀಡಿದರು.

Advertisement

ಪಾಲಿಕೆ ವ್ಯಾಪಿಯಲ್ಲಿ ಕೋವಿಡ್ 19  ಸೋಂಕು ತಡೆ, ಸಾರ್ವಜನಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡಲು, ಸಹಾಯ 2.0 ಡ್ಯಾಶ್‌ ಬೋರ್ಡ್‌, ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹಾಗೂ ನಿಗಾ ವಹಿಸಲು ಆರೋಗ್ಯ ಅಪ್ಲಿಕೇಶನ್‌ ಮಾಹಿತಿ ಹಾಗೂ ಕಸ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳ ಸಂಗ್ರಹ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಈ ನೂತನ ಕಮ್ಯಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಮ್‌ನ ಮೂಲಕ ಕಾರ್ಯನಿರ್ವಹಿಸಲು ಪಾಲಿಕೆ ನಿರ್ಧರಿಸಿದೆ.

ಈ ಕುರಿತು ಸುದ್ದಿಗಾರರ ಜತೆ ಮೇಯರ್‌ ಗೌತಮ್‌ಕುಮಾರ್‌ ಮಾತನಾಡಿ, ವಾರ್‌ ರೂಂ ಅನ್ನು 24 ಗಂಟೆಯಲ್ಲಿ ಸ್ಥಾಪಿಸಲಾಗಿದೆ. ವಾರ್‌ ರೂಮ್‌ನ ಮೂಲಕ ಇತ್ತೀಚಿನ ದಿನಗಳಲ್ಲಿ ವಿದೇಶದಿಂದ ಬಂದವರ ಮಾಹಿತಿಯನ್ನುಕಲೆಹಾಕಿ, ಅವರು 14 ದಿನಗಳ ಕಾಲ ಮನೆಯಿಂದ ಹೊರಗೆ ಬರದಂತೆ ಕ್ರಮ ವಹಿಸಲು ಹಾಗೂ ನಿಗಾ ವಹಿಸಲಾಗುವುದು ಎಂದರು.

ಮನೆ ಬಾಗಿಲಿಗೆ ನೋಟಿಸ್‌: ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ 22 ಸಾವಿರ ಜನ ವಿದೇಶಗಳಿಂದ ಬಂದಿದ್ದು, ಇವರಿಗೆ ಹೋಮ್‌ ಕ್ವಾರಂಟೈನ್‌ ಸೀಲ್‌ ಹಾಕಲಾಗುತ್ತಿದೆ. ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದು, 300 ತಂಡ ಭಾನುವಾರ 6 ಸಾವಿರ ಜನರಿಗೆ ಹೋಮ್‌ ಕ್ವಾರಂಟೈನ್‌ ಸೀಲ್‌ ಹಾಕಲಾಗಿದ್ದು, ಸೋಮವಾರ ಸಾವಿರ ಜನರಿಗೆ ಮುದ್ರೆ ಹಾಕಲಾಗುವುದು. ಮಂಗಳವಾರ 500 ತಂಡಗಳನ್ನು ರಚನೆ ಮಾಡಿಕೊಂಡು ಮುದ್ರೆ ಹಾಕುವ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದರು. ಇನ್ನು ಮುದ್ರೆ ಹಾಕಿಸಿಕೊಂಡವರು ಸಾರ್ವಜನಿಕ ಪ್ರದೇಶಗಳಲ್ಲಿ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳೂತ್ತಿರುವ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲು ಮುಂದಾಗಿದ್ದೇವೆ. ಹೋಮ್‌ ಕ್ವಾರೆಂಟರ್‌ನಿಂದಲೂ ಪಾಲಿಕೆ ಹಿಂಬರಹ ಪಡೆದುಕೊಳ್ಳುತ್ತಿದೆ. 5-10 ದಿನಗಳಿಗೊಮ್ಮೆ ಅವರ ಆರೋಗ್ಯಸ್ಥಿತಿ ಪರಿಶೀಲಿಸಲಾಗುವುದು.ನೆರೆಹೊರೆಯವರು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ವೇಳೆ ಬೆಂಗಳೂರು ನಗರದ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಮಾರ್ಗಸೂಚಿ ಪುಸ್ತಕ ಹಾಗೂ ಅತ್ಯಾಧುನಿಕ ವೈರ್‌ಲೆಸ್‌ ಡಿಜಿಟಲ್‌ ವಾಕಿಟಾಕಿ ಬಿಡುಗಡೆಗೊಳಿಸಲಾಯಿತು. ಶಾಸಕ ರಿಜ್ವಾನ್‌ ಹರ್ಷದ್‌, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು.ಜಿ, ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌, ಆಯುಕ್ತ ಬಿ.ಹೆಚ್‌.ಅನಿಲ್‌ ಕುಮಾರ್‌, ವಿಶೇಷ ಆಯುಕ್ತ (ಆರೋಗ್ಯ) ಡಾ. ರವಿಕುಮಾರ್‌ ಸುರಪುರ, ವಿಶೇಷ ಆಯುಕ್ತ (ಘನತ್ಯಾಜ್ಯ)ಡಿ.ರಂದೀಪ್‌ ಇತರರು ಹಾಜರಿದ್ದರು.

Advertisement

 

ವಾರ್‌ ರೂಮ್‌ ವೈಶಿಷ್ಟ್ಯ :

1 ಹೋಮ್‌ ಕ್ವಾರಂಟೈನ್‌ ಸೀಲ್‌(ಗೃಹ ನಿರ್ಬಂಧ ಮುದ್ರೆ) ಹಾಕಿದವರ ಮೇಲೆ ನಿಗಾ ವಹಿಸಲು ಸೇರಿದಂತೆ ಇನ್ನಿತರೆ ಮಾಹಿತಿಗಾಗಿ ವಲಯವಾರು ನಕ್ಷೆ ಸಿದ್ದಪಡಿಸಿ, ಟ್ರ್ಯಾಕಿಂಗ್‌.

2 ಆಸ್ಪತ್ರೆಗಳಲ್ಲಿ ಎಷ್ಟು ಆಸನಗಳಿವೆ ಸೋಂಕು ದೃಢಪಟ್ಟ ಪ್ರದೇಶ ನಕ್ಷೆ ಸಿದ್ಧಪಡಿಸುವುದು, ಪಾಲಿಕೆ ಕೈಗೊಂಡ ಕ್ರಮಗಳ ಸ್ಥಿತಿಗತಿ ವಾರ್‌ ರೂಂನಲ್ಲಿ ದಿನದ 24/7 ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ದತ್ತಾಂಶ ಸಂಗ್ರಹಣೆ, ಸೋಂಕು ದೃಢಪಟ್ಟ ಪ್ರದೇಶದ ಪರಿವಾರದ ಮಾಹಿತಿ ಸಂಗ್ರಹ.

3 ನಕ್ಷೆಯನ್ನು ವಲಯವಾರು ನಿರ್ಮಿಸಿದ್ದು, ವೈರೆಸ್‌ ಸೋಂಕಿತರು/ ಶಂಕಿತರು, ಆಸ್ಪತ್ರೆಗಳನ್ನು ಬಣ್ಣಗಳ ಆಧಾರದ ಮೇಲೆ ಗುರುತಿಸಲಾಗಿದೆ. ಕೋವಿಡ್ 19 ಸೋಂಕಿತರನ್ನು ಕೆಂಪು ಬಣ್ಣ, ಕೋವಿಡ್ 19 ಶಂಕಿತರಿರುವ ಪ್ರದೇಶವನ್ನು ಹಳದಿ ಬಣ್ಣ, ಆಸ್ಪತ್ರೆಗಳಿರುವ ಸ್ಥಳವನ್ನು ನೀಲಿ ಬಣ್ಣದಲ್ಲಿ ಗುರುತಿಸಲಾಗಿದೆ. ಸೋಂಕು ಪತ್ತೆ ಆದರೆ ಹತ್ತಿರ ಯಾವ ಆಸ್ಪತ್ರೆಗಳಿವೆ, ಎಷ್ಟು ಆಸನಗಳಿವೆ ಎಂಬುದರ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next