Advertisement

ಚಾ.ನಗರಕ್ಕೆ ಆತಂಕ ತಂದಿಟ್ಟ ಪೇದೆ: ಸೋಂಕು ಶಂಕೆಯಿದ್ದರೂ ಸಂಬಂಧಿಕರ ಮನೆಗೆ ಹೋಗಿದ್ದ ಪೇದೆ

08:09 AM May 06, 2020 | keerthan |

ಚಾಮರಾಜನಗರ: ಇಷ್ಟು ದಿನ ಹಸಿರು ವಲಯದಲ್ಲಿದ್ದ ಜಿಲ್ಲೆಗೆ ಆತಂಕವೊಂದು ಎದುರಾಗಿದೆ. ಕೋವಿಡ್-19 ಸೋಂಕು ತಗುಲಿದ್ದ ಬೆಂಗಳೂರಿನ ಪೊಲೀಸ್ ಪೇದೆಯೊಬ್ಬರು ಹನೂರು ಸಮೀಪದ ಬೆಳತ್ತೂರಿನ ಸಂಬಂಧಿಕರ ಮನೆಯಲ್ಲಿದ್ದು ಹೋಗಿದ್ದರಿಂದ 18 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಎರಡು ಗ್ರಾಮಗಳನ್ನು ಸೀಲ್‌ ಡೌನ್ ಮಾಡಲಾಗಿದೆ.

Advertisement

ಬೆಂಗಳೂರಿನ ಬೇಗೂರು ಪ್ರದೇಶದ ಪೊಲೀಸ್ ಪೇದೆಯೊಬ್ಬರಿಗೆ ಕೋವಿಡ್-19 ಶಂಕೆಯಿದ್ದುದರಿಂದ ಬೆಂಗಳೂರಿನಲ್ಲೇ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಅದರ ಫಲಿತಾಂಶ ಬರುವ ಮೊದಲೇ ಈ ಪೇದೆ ಜಿಲ್ಲೆಯ ಹನೂರಿನ ಬೆಳತ್ತೂರಿನ ನೆಂಟರ ಮನೆಗೆ ಬೈಕಿನಲ್ಲಿ ಸೋಮವಾರ ಬೆಳಿಗ್ಗೆ ಬಂದಿದ್ದಾರೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಆತನಿಗೆ ಬೆಂಗಳೂರಿನಿಂದ ಕರೆ ಬಂದು ಸೋಂಕು ಫಲಿತಾಂಶ ಪಾಸಿಟಿವ್ ಇರುವುದು ಗೊತ್ತಾಗಿದೆ. ಕೂಡಲೇ ಬೆಂಗಳೂರಿಗೆ ವಾಪಸಾಗಿದ್ದಾರೆ.

ಈ ವಿಷಯವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಸೋಮವಾರ ತಡರಾತ್ರಿ 11.40ರಲ್ಲಿ ಪೇದೆಯ ಸಂಬಂಧಿಕರು ಹಾಗೂ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 18 ಜನರನ್ನು ನಗರದ ಅಂಬೇಡ್ಕರ್ ಭವನದಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

ಈ 18 ಜನರಲ್ಲಿ 9 ತಿಂಗಳ ಹಾಗೂ 1 ವರ್ಷದ ಶಿಶುಗಳಿವೆ. 9 ವರ್ಷದ ಬಾಲಕ, 5 ವರ್ಷದ ಬಾಲಕಿ ಇದ್ದಾರೆ. 70, 63, ಹಾಗೂ 60 ವರ್ಷದ ಮೂವರು ವೃದ್ಧೆಯರು, 66 ವರ್ಷದ ಓರ್ವ ವೃದ್ಧರಿದ್ದಾರೆ.

ಕೋವಿಡ್-19 ಪಾಸಿಟಿವ್ ವ್ಯಕ್ತಿ ಬಂದಿದ್ದ ಕಾರಣ ಬೆಳತ್ತೂರು ಮತ್ತು ಸಮೀಪದ ಉದ್ದನೂರು ಗ್ರಾಮಗಳನ್ನು ಈಗ ಸೀಲ್‌ ಡೌನ್ ಮಾಡಲಾಗಿದೆ. ಬೆಳತ್ತೂರು ಗ್ರಾಮದ ತಾಲೂಕು ಕೇಂದ್ರವಾದ ಹನೂರಿಗೆ ಕೇವಲ 5 ಕಿ.ಮೀ. ದೂರದಲ್ಲಿದೆ.

Advertisement

ಕೋವಿಡ್19 ಹಸಿರು ವಲಯದಲ್ಲಿದ್ದ ಹಾಗೂ ಕ್ವಾರಂಟೈನ್‌ನಲ್ಲಿ ಸಹ ಒಬ್ಬರೂ ಇರದಿದ್ದ ಚಾಮರಾಜನಗರ ಜಿಲ್ಲೆಯಲ್ಲೀಗ, ಬೆಂಗಳೂರಿನ ಪೇದೆ ಮಾಡಿದ ಅವಾಂತರದಿಂದ ಆತಂಕ ಎದುರಾಗಿದೆ.

ಜಿಲ್ಲೆಯೊಳಗೆ ಹೊರ ಜಿಲ್ಲೆಯಿಂದ ಜನರನ್ನು ಬಿಡುತ್ತಿಲ್ಲ. ಆದರೂ ಈ ಪೇದೆ ಬೆಂಗಳೂರಿನಿಂದ ಚೆಕ್‌ಪೋಸ್ಟ್ ದಾಟಿ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ಪೊಲೀಸ್ ಪೇದೆಯೆಂಬ ಕಾರಣದಿಂದ ಆತನನ್ನು ಚೆಕ್‌ಪೋಸ್ಟ್ ನಲ್ಲಿ  ಬಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next