ಮುಂಬಯಿಯಲ್ಲಿ ಏರ್ ಇಂಡಿಯಾದ ಐವರು ಪೈಲಟ್‌ಗಳು, ಒಬ್ಬ ತಂತ್ರಜ್ಞ ಹಾಗೂ ಎಂಜಿನಿಯರಿಂಗ್ ವಿಭಾಗದ ಒಬ್ಬ ಚಾಲಕನಿಗೆ ಕೋವಿಡ್ ಸೋಂಕು ತಗಲಿದೆ.
ವಿಶೇಷವೆಂದರೆ, ಸೋಂಕು ದೃಢಪಟ್ಟಿರುವವರ ಪೈಕಿ ಯಾರಲ್ಲೂ ರೋಗ ಲಕ್ಷಣ ಕಂಡುಬಂದಿರಲಿಲ್ಲ. ಈ ಎಲ್ಲ ಪೈಲಟ್‌ಗಳೂ ಬೋಯಿಂಗ್ 787ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಎಪ್ರಿಲ್ 20ಕ್ಕೂ ಮುನ್ನ ಚೀನಾ ದೇಶಕ್ಕೆ ಹೋಗಿ ಬಂದಿದ್ದರು. ಇವರೆಲ್ಲರಿಗೂ ಸದ್ಯಕ್ಕೆ ಮನೆಯಲ್ಲೇ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.
ವಂದೇ ಭಾರತ್ ಯೋಜನೆಯಡಿ ವಿದೇಶದಿಂದ ಭಾರತೀಯರನ್ನು ಕರೆತರುವ ಮೊದಲು ವಿಮಾನದ ಎಲ್ಲ ಸಿಬಂದಿಯೂ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಸೂಚಿಸಿದ ಹಿನ್ನೆಲೆಯಲ್ಲಿ ಮೇ 8ರಂದು ಎಲ್ಲರೂ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಐವರು ಪೈಲಟ್ ಗಳಿಗೆ ಸೋಂಕು ಇರುವುದು ಪತ್ತೆಯಾಗಿತ್ತು.
ಇನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞ ಹಾಗೂ ಚಾಲಕ ಮೇ 7ರಂದು ತಮ್ಮ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರು.
ಮೊದಲ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಎರಡನೇ ಪರೀಕ್ಷೆಯ ವರದಿ ಸೋಮವಾರ ಕೈಸೇರಲಿದೆ. ಒಟ್ಟಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದ ಕಾರಣ, ಏರಿಂಡಿಯಾದ ಬಹುತೇಕ ಸಿಬಂದಿಯನ್ನು ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.