ಹೈದರಾಬಾದ್: ರಸ್ತೆ ಬದಿ ಕೋವಿಡ್ ಶಂಕಿತ ವ್ಯಕ್ತಿಯೊಬ್ಬರ ಶವ ಕಂಡು ಬಂದಿದ್ದು, ಭಾರೀ ಆತಂಕ ಮೂಡಿಸಿದೆ. ಅಲ್ಲದೇ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇದು ಯಾವ ರೀತಿ ಬೇಕಾದರೂ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಗರದ ಬಾರ್‌ವೊಂದರಲ್ಲಿ ಸಹಾಯಕನಾಗಿದ್ದ ನೇಪಾಳ ಮೂಲದ ಶೇರ್ ಬಹದ್ದೂರ್ (77) ಗುರುವಾರ ಶೀತ ಹಾಗೂ ಜ್ವರ ಕಾಣಿಸಿಕೊಂಡಿದ್ದರಿಂದ ಇಲ್ಲಿನ ಲಾಲ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಕೋವಿಡ್ ಸೋಂಕಿನ ಶಂಕಿತ ಲಕ್ಷಣಗಳು ಕಂಡಿದ್ದರಿಂದ ಅವರನ್ನು ಕಿಂಗ್‌ಕೋಟೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಲ್ಲಿ ಅವರು ಹೊರ ರೋಗಿಯಾಗಿ ದಾಖಲಾಗಿದ್ದರು. ಈ ವಿಭಾಗದಲ್ಲಿ 100ಕ್ಕೂ ಅಧಿಕ ರೋಗಿಗಳಿದ್ದರು.
ಬಳಿಕ ಜಿಲ್ಲಾಸ್ಪತ್ರೆಯಿಂದ ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡುವ ಗಾಂಧಿ ಆಸ್ಪತ್ರೆಗೆ ದಾಖಲಾಗುವಂತೆ ಆತನಿಗೆ ಶಿಫಾರಸು ಮಾಡಲಾಗಿತ್ತು. ಜಿಲ್ಲಾಸ್ಪತ್ರೆ ಹೊರಭಾಗದಲ್ಲಿ ನಿಂತಿದ್ದ ಈತ ಆ್ಯಂಬುಲೆನ್ಸ್ ಬರುವಷ್ಟರಲ್ಲಿ ಕಾಣೆಯಾಗಿದ್ದರು. ಶುಕ್ರವಾರ ರಾತ್ರಿ ಗಾಂಧಿ ಆಸ್ಪತ್ರೆಯಿಂದ 4 ಕಿ.ಮೀ. ದೂರದಲ್ಲಿ ಶೇರ್ ಬಹದ್ದೂರ್ ಶವವಾಗಿ ಕಂಡುಬಂದಿದ್ದರು.
ಪೊಲೀಸರು ಪರಿಶೀಲನೆ ನಡೆಸಿದಾಗ ಆತನ ಜೇಬಿನಲ್ಲಿ ಕೋವಿಡ್ ಸೋಂಕು ಪರೀಕ್ಷೆ ಪತ್ತೆ ಚೀಟಿಗಳು ದೊರೆತಿವೆ. ಮೃತದೇಹವನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಸಹಾಯವಾಣಿ ಹಾಗೂ ಪಾಲಿಕೆಗೆ ಕರೆ ಮಾಡಿದರೂ ಯಾರೊಬ್ಬರೂ ಸ್ಪಂದಿಸಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಟ್ಟಿದ್ದ ಶವವನ್ನು ರಾತ್ರಿಯಿಡೀ ರಸ್ತೆ ಬದಿಯಲ್ಲೇ ಇರಿಸಲಾಗಿತ್ತು. ಶನಿವಾರ ಬೆಳಗ್ಗೆ ಆರೋಗ್ಯ ಸಿಬ್ಬಂದಿ ತಂಡ ಆಗಮಿಸಿ, ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಸೋಂಕು ಪತ್ತೆ ಪರೀಕ್ಷೆಗೆ ಈತನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವರು, ಜಿಲ್ಲಾಸ್ಪತ್ರೆಯಿಂದ ಗಾಂಧಿ ಆಸ್ಪತ್ರೆಗೆ ನಡೆದುಕೊಂಡು ಹೋಗಲು ಪ್ರಯತ್ನಿಸಿ, ಅಸ್ವಸ್ಥನಾಗಿ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸು ಶಂಕಿಸಿದ್ದಾರೆ.
ಒಂದು ವೇಳೆ ಶೇರ್ ಬಹದ್ದೂರ್‌ಗೆ ಸೋಂಕು ಇರುವುದು ದೃಢಪಟ್ಟರೆ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ರೋಗಿಗಳು ಹಾಗೂ ಸಿಬ್ಬಂದಿಯನ್ನು ಸೋಂಕು ಪರೀಕ್ಷೆಗೊಳಪಡಿಸಬೇಕಾಗುತ್ತದೆ. ವೈದ್ಯಕೀಯ ವ್ಯವಸ್ಥೆಯ ಎಡವಟ್ಟಿನಿಂದ ನಡೆದಿರುವ ಈ ಪ್ರಕರಣ ಇದೀಗ ಈ ಭಾಗದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.