Advertisement

ಕೋವಿಡ್ ಇದರ ಮುಂದೆ ಎಲ್ಲರೂ ಸಮಾನರಲ್ಲ! ; ಹೆಣ್ಣು- ಗಂಡೆಂಬ ಬೇಧ ತೋರುತ್ತಿದೆಯೇ ವೈರಾಣು?

08:33 AM May 12, 2020 | Hari Prasad |

ಕೋವಿಡ್ ವೈರಸ್‌ನ ಹಾವಳಿ ಜಗದಾದ್ಯಂತ ಹೆಚ್ಚಾಗುತ್ತಾ ಸಾಗಿರುವ ವೇಳೆಯಲ್ಲೇ, ಅನೇಕ ಅಂಶಗಳೂ ಬೆಳಕಿಗೆ ಬರುತ್ತಿವೆ.

Advertisement

ಸಾರ್ಸ್‌ ಮತ್ತು ಮರ್ಸ್‌ ಸಾಂಕ್ರಾಮಿಕಗಳಂತೆ ಕೋವಿಡ್ ಕೂಡ ಪುರುಷರಿಗೇ ಹೆಚ್ಚು ಹಾನಿಮಾಡುತ್ತಿದೆಯೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ.

ಈ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆಯಾದರೂ, ಸದ್ಯದ ಅಧ್ಯಯನಗಳಂತೂ ಆ ದಿಕ್ಕಿನಲ್ಲೇ ಬೆರಳು ತೋರಿಸುತ್ತಿವೆ.

ಆದಾಗ್ಯೂ ಸೋಂಕು ಹರಡುವಿಕೆ ಪ್ರಮಾಣ ಮುಂದಿನ ದಿನಗಳಲ್ಲಿ ಸಮಾನವಾಗಬಹುದಾದರೂ, ಸೋಂಕನ್ನು ಎದುರಿಸುವಲ್ಲಿ ಮಹಿಳೆಯರ ರೋಗನಿರೋಧಕ ವ್ಯವಸ್ಥೆ ಬಲಿಷ್ಠವಿರುವುದರಿಂದ ಮರಣ ಪ್ರಮಾಣ ಅವರಲ್ಲಿ ಕಡಿಮೆಯಿರಲಿದೆ ಎಂದೂ ಹೇಳಲಾಗುತ್ತಿದೆ.

ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು ಅಪಾಯಕಾರಿಯೇ?
ಕೋವಿಡ್ ಯಾವುದೇ ಜಾತಿ ಅಥವಾ ಧರ್ಮ ನೋಡುವುದಿಲ್ಲವಾದರೂ, ಅದು ಲಿಂಗ ತಾರತಮ್ಯವನ್ನಂತೂ ಮಾಡುತ್ತಿದೆ ಎನ್ನುವುದನ್ನು ಇಲ್ಲಿಯವರೆಗಿನ ಅಂಕಿಸಂಖ್ಯೆಗಳು ಸಾರುತ್ತಿವೆ! ಕೋವಿಡ್ ಸೋಂಕು ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಭಿನ್ನವಾದ ಪ್ರಭಾವ ಬೀರುತ್ತಿದೆ.

Advertisement

ಇಂದು ಜಗತ್ತಿನಾದ್ಯಂತ ಕೋವಿಡ್ ವೈರಸ್ ಗೆ ಪುರುಷರೇ ಅಧಿಕ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಪುರುಷರಿಗಿಂತ ಮಹಿಳೆಯರ ರೋಗನಿರೋಧಕ ಕ್ಷಮತೆ (ಅದರಲ್ಲೂ ವೈರಸ್‌ಗಳ ವಿರುದ್ಧ) ಉತ್ತಮವಾಗಿರುವುದೇ ಇದಕ್ಕೆ ಕಾರಣವಿರಬಹುದು ಎಂದು ತಜ್ಞರು ಹೇಳುತ್ತಾರೆ.

ಸಾರ್ಸ್‌ ಮರ್ಸ್‌ ಸಮಯದಲ್ಲೂ…
ಕೋವಿಡ್‌-19 ಎಂದಷ್ಟೇ ಅಲ್ಲ, 2003ರಲ್ಲಿ ಜಗತ್ತನ್ನು ಕಾಡಿದ ಸೀವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌ (ಸಾರ್ಸ್‌) ಮತ್ತು 2012ರಲ್ಲಿ ಕಾಣಿಸಿಕೊಂಡ ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌ (ಮರ್ಸ್‌) ನಂಥ ಕೊರೊನಾ ಸಾಂಕ್ರಾಮಿಕಗಳ ವೇಳೆಯೂ ಪುರುಷರ ಮರಣ ಪ್ರಮಾಣ ಮಹಿಳೆಯರಿಗಿಂತ ಅಧಿಕವಿತ್ತು ಎನ್ನುತ್ತದೆ ಆನಲ್ಸ್‌ ಆಫ್ ಇಂಟರ್ನಲ್‌ ಮೆಡಿಸಿನ್ಸ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ.

ಇಲಿಗಳಲ್ಲೂ ಇದೇ ಗುಣ?
ಸಾರ್ಸ್‌ ಕುರಿತು ಪ್ರಮುಖ ಅಧ್ಯಯನ ಕೈಗೊಂಡಿದ್ದ ಯೂನಿವರ್ಸಿಟಿ ಆಫ್ ಐಯೋವಾದ ಮೈಕ್ರೋಬಯಾಲಜಿ ಪ್ರೊಫೆಸರ್‌ ಡಾ. ಸ್ಟೇನ್ಲಿ ಪರ್ಲ್ಮನ್‌  ಅವರು “ಇಲಿಗಳ ಮೇಲೆ ಮಾಡಿದ ಅಧ್ಯಯನದಲ್ಲೂ ಈ ಭಿನ್ನತೆ ನಮಗೆ ಕಂಡುಬಂತು.

ಹೆಣ್ಣು ಇಲಿಗಳಿಗೆ ಹೋಲಿಸಿದರೆ ಗಂಡು ಇಲಿಗಳಲ್ಲಿ ಚಿಕ್ಕ ಪ್ರಮಾಣದಲ್ಲಿ ಸಾರ್ಸ್‌ ಕಾಣಿಸಿಕೊಂಡಿತು. ಗಂಡು ಇಲಿಗಳ ರೋಗನಿರೋಧಕ ವ್ಯವಸ್ಥೆಯು ಆ ವೈರಸ್‌ನ ವಿರುದ್ಧ ದುರ್ಬಲ ಪ್ರತಿಕ್ರಿಯೆ ತೋರಿಸಿದ್ದಷ್ಟೇ ಅಲ್ಲದೇ, ವೈರಸ್‌ ಅನ್ನು ದೇಹದಿಂದ ತೊಲಗಿಸುವಲ್ಲೂ ವಿಳಂಬ ಕಾಣಿಸಿತು.

ಇನ್ನು ಹೆಣ್ಣು ಇಲಿಗಳಿಗಿಂತ ಗಂಡು ಇಲಿಗಳ ಶ್ವಾಸಕೋಶಕ್ಕೇ ಹೆಚ್ಚು ಹಾನಿ ಕಂಡುಬಂತು. ಈಗ ಕೋವಿಡ್‌-19 ಕೂಡ ಇದೇ ರೀತಿ ಮಾಡುತ್ತಿದೆಯೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ” ಎನ್ನುತ್ತಾರೆ.

ಸ್ವಚ್ಛತೆಯಲ್ಲಿ ಹೆಣ್ಮಕ್ಕಳೇ ಮುಂದೆ…
 ವೈರಾಣುವಿನ ವಿರುದ್ಧ ಹೋರಾಡಲು ಸ್ವಚ್ಛತೆಯ ಪರಿಪಾಲನೆ ಪ್ರಮುಖ ಅಸ್ತ್ರ ಎನ್ನುವುದು ತಿಳಿದೇ ಇದೆ. ಆದರೆ, ಇಲ್ಲಿಯವರೆಗಿನ ಅಧ್ಯಯನಗಳು, “ಕೈತೊಳೆಯುವುದರಿಂದ ಹಿಡಿದು, ಇತರೆ ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಸ್ವಚ್ಛತೆ ಪಾಲಿಸುತ್ತಾರೆ’ ಎನ್ನುತ್ತವೆ. ಆರೋಗ್ಯ ವಲಯದ ಸಿಬ್ಬಂದಿಯಲ್ಲೂ ಕೂಡ ಮಹಿಳೆಯರು ಹೆಚ್ಚು ಸ್ವಚ್ಛತೆ ಪಾಲಿಸುತ್ತಾರೆ ಎನ್ನುವುದು ತಿಳಿದುಬಂದಿದೆ.

ಪುರುಷರಲ್ಲಿ ದುಶ್ಚಟ ಅಧಿಕ
ಮಹಿಳೆಯರಿಗಿಂತ ಪುರುಷರಲ್ಲಿ ಮದ್ಯಪಾನ, ಧೂಮಪಾನ, ಗುಟ್ಕಾ, ತಂಬಾಕು ಸೇವನೆಯ ಚಟ ವಿಪರೀತವಿರುವುದರಿಂದಲೂ ಕೋವಿಡ್ ಅವರಿಗೆ ಹೆಚ್ಚು ಹಾನಿ ಮಾಡುತ್ತಿರಬಹುದು ಎನ್ನುವ ವಾದವೂ ಇದೆ. ಅದರಲ್ಲೂ ಧೂಮಪಾನ ಮಾಡುವವರ ಶ್ವಾಸಕೋಶವು ದುರ್ಬಲವಾಗಿರುತ್ತದೆ. ಹೀಗಾಗಿ, ಅವರಿಗೆ ಕೋವಿಡ್ ವೈರಸ್ ನಿಂದ ತೊಂದರೆ ಅಧಿಕವಂತೆ.

ಸ್ಥೂಲಕಾಯರಿಗೆ ಪ್ರಾಣಾಂತಕವೇ?
ಕೋವಿಡ್ ವೈರಸ್ ಸ್ಥೂಲಕಾಯದ ವ್ಯಕ್ತಿಗಳಿಗೆ ಹೆಚ್ಚು ಅಪಾಯಕಾರಿಯೇ ಎಂಬ ಬಗ್ಗೆ ಈಗ ಜಗತ್ತಿನಾದ್ಯಂತ ಅಧ್ಯಯನ ನಡೆಯುತ್ತಿವೆ ಇಲ್ಲಿಯವರೆಗಿನ ಅಂಕಿ-ಸಂಖ್ಯೆಗಳಲ್ಲೂ ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ತಜ್ಞರು.

ಬ್ರಿಟನ್‌ನಲ್ಲಿ 17 ಸಾವಿರ ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ಪತ್ತೆಯಾಗಿದ್ದೇನೆಂದರೆ, ಯಾರಲ್ಲಿ ಅಧಿಕ ಬೊಜ್ಜಿನ ಸಮಸ್ಯೆ ಇದೆಯೋ ಮತ್ತು ಯಾರ ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ) 30ಕ್ಕಿಂತ ಅಧಿಕವಿದೆಯೋ, ಅವರಲ್ಲಿ ಸಾವಿನ ಪ್ರಮಾಣ 33 ಪ್ರತಿಶತಕ್ಕಿಂತಲೂ ಅಧಿಕವಿದೆ. ಬಿಎಂಐ ಅಂದರೆ, ಮನುಷ್ಯನ ಎತ್ತರ ಮತ್ತು ತೂಕದ ಅನುಪಾತ.

ವರ್ಲ್ಡ್ ಒಬೆಸಿಟಿ ಫೆಡರೇಷನ್‌ನ ಪ್ರಕಾರ, ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ಬಹುತೇಕರ ಬಿಎಂಐ 25ಕ್ಕಿಂತಲೂ ಅಧಿಕವಿದೆ. ಅಮೆರಿಕ, ಇಟಲಿ ಮತ್ತು ಚೀನಾದಲ್ಲಿ ನಡೆದ ಆರಂಭಿಕ ಅಧ್ಯಯನಗಳೂ ಕೂಡ ಅಧಿಕ ಬಿಎಂಐ ಕೂಡ ಸಮಸ್ಯೆ ಉಲ್ಬಣಿಸಲು ಬಹುದೊಡ್ಡ ಕಾರಣ ಎಂದು ಹೇಳಿವೆ.

ಮತ್ತೂಂದು ಅಧ್ಯಯನದಲ್ಲಿ ಸ್ಥೂಲಕಾಯದ ಜನರಲ್ಲಿ ಮೃತ್ಯುದರ ದ್ವಿಗುಣವೆಂದು ಪತ್ತೆಯಾಗಿದೆ. ಇನ್ನು ಇದಷ್ಟೇ ಅಲ್ಲದೆ, ಇವರಲ್ಲಿ ಹೃದಯ ತೊಂದರೆ ಇರುವವರು, ಅಥವಾ ತೀವ್ರತರ ಸಕ್ಕರೆಕಾಯಿಲೆ ಸೇರಿದಂತೆ, ಇತರೆ ಆರೋಗ್ಯ ಸಮಸ್ಯೆಯಿರುವವರನ್ನೂ ಪರಿಗಣಿಸಿದರೆ, ಈ ಅಂಕಿಸಂಖ್ಯೆ ಮತ್ತಷ್ಟು ಅಧಿಕವಾಗುತ್ತದೆ.

ಯೂನಿವರ್ಸಿಟಿ ಆಫ್ ಗ್ಲಾಸ್ಗೋದ ಪ್ರೊ. ನವೀದ್‌ ಸತ್ತಾರ್‌ ಅವರು, “ಅತಿಯಾದ ತೂಕ ಇರುವ ವ್ಯಕ್ತಿಗಳ ದೇಹದಲ್ಲಿ ಹೆಚ್ಚು ಕೊಬ್ಬು ಇರುತ್ತದೆ. ಅಲ್ಲದೇ ಅವರ ರೋಗ ನಿರೋಧಕ ವ್ಯವಸ್ಥೆಯೂ ಅಷ್ಟು ಫಿಟ್‌ ಆಗಿ ಇರುವುದಿಲ್ಲ. ಶ್ವಾಸಕೋಶದ ಸಾಮರ್ಥ್ಯದ ಮೇಲೂ ಸ್ಥೂಲಕಾಯ ಪರಿಣಾಮ ಬೀರುತ್ತದೆ.

ಅಧಿಕ ತೂಕವಿರುವವರ ಶರೀರದ ಮಹತ್ವಪೂರ್ಣ ಅಂಗಗಳಿಗೆ ಆಕ್ಸಿಜನ್‌ನ ಕೊರತೆ ಹೆಚ್ಚಿರುತ್ತದೆ. ದೇಹಕ್ಕೆ ಅಧಿಕ ಆಕ್ಸಿಜನ್‌ನ ಅಗತ್ಯವಿರುತ್ತದೆ. ಇಂಥದ್ದರಲ್ಲಿ ಕೋವಿಡ್ ಸೋಂಕು ಶ್ವಾಸಕೋಶಕ್ಕೆ ದಾಳಿ ಮಾಡಿತೆಂದರೆ, ಸ್ಥೂಲಕಾಯರಿಗೆ ಹೆಚ್ಚು ಅಪಾಯ ಎದುರಾಗಬಹುದು” ಎನ್ನುತ್ತಾರೆ.

ಈ ಕಾರಣಕ್ಕಾಗಿಯೇ ಅಧಿಕ ಭಾರ ಇರುವ ವ್ಯಕ್ತಿಗಳಿಗೆ ಐಸಿಯುನಲ್ಲಿ ಆಕ್ಸಿಜನ್‌ ಪೂರೈಕೆಯ ಅಗತ್ಯತೆ ಹೆಚ್ಚಾಗುತ್ತದೆ ಮತ್ತು ಅವರ ಕಿಡ್ನಿಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಎನ್ನುತ್ತಾರೆ ಯೂನಿವರ್ಸಿಟಿ ಆಫ್ ರೀಡಿಂಗ್‌ನ ಡಾಕ್ಟರ್‌ ಡ್ಯಾನ್‌ ಸೆಲಾಯ್‌.

ಸೋಂಕಿನ ಅಪಾಯ ಹೇಗೆ ಅಧಿಕ?
ಕೋವಿಡ್ ವೈರಸ್‌ ದೇಹವನ್ನು ಪ್ರವೇಶಿಸುವಲ್ಲಿ ನಮ್ಮ ಜೀವಕೋಶಗಳಲ್ಲಿರುವ ಎಸ್‌ಇ-2 ಹೆಸರಿನ ಕಿಣ್ವವು ಮುಖ್ಯವಾಗಿ ಸಹಕರಿಸುತ್ತದೆ ಎನ್ನುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಈ ಕಿಣ್ವವು ದೊಡ್ಡ ಪ್ರಮಾಣದಲ್ಲಿ ಕೊಬ್ಬಿನ ಕೋಶಗಳಲ್ಲಿ ಕಂಡುಬರುತ್ತದೆ. ಅಧಿಕ ತೂಕದ ಜನರಲ್ಲಿ ಕೊಬ್ಬಿನ ಕೋಶಗಳೂ ಅಧಿಕವಿರುವುದರಿಂದ, ಅವರು ಸೋಂಕಿಗೆ ಒಳಗಾಗುವ, ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇರಬಹುದು ಎನ್ನಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next