ನ್ಯೂಯಾರ್ಕ್: ಮನೆಯಲ್ಲೇ ಇದ್ದರೆ ಕೋವಿಡ್ ತಗುಲುವುದಿಲ್ಲ ಎಂಬುದು ಕೂಡ ಈಗ ಸಂಪೂರ್ಣ ನಿಜವಲ್ಲ.
ಕೋವಿಡ್ ವೈರಾಣುಗಳು ಮನೆ ಸದಸ್ಯರ ನಡುವೆ ಅತ್ಯಂತ ವೇಗದಲ್ಲಿ ಪ್ರಸರಣಗೊಳ್ಳುತ್ತವೆ ಎಂದು ಸಂಶೋಧನೆಯೊಂದು ದೃಢಪಡಿಸಿದೆ.
‘ಲ್ಯಾನ್ಸೆಟ್’ನಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ಈ ಆತಂಕದ ಮಾಹಿತಿ ಬಿತ್ತರಿಸಿದೆ.
ಚೀನದ ಗ್ವಾಂಗ್ಟೌ ಪ್ರಾಂತ್ಯದಲ್ಲಿ ತಜ್ಞರು 349 ಸೋಂಕಿತ ವ್ಯಕ್ತಿಗಳ ಮೇಲೆ ಸಂಶೋಧನೆ ಕೈಗೊಂಡಿದ್ದರು. ಈ 349 ವ್ಯಕ್ತಿಗಳ ಜತೆಯಲ್ಲಿ ಜೀವಿಸುತ್ತಿದ್ದ 1964 ಮಂದಿಗೆ ಸೋಂಕು ಅತ್ಯಂತ ವೇಗದಲ್ಲಿ ಹಬ್ಬಿದೆ. ಸೋಂಕಿತ ವ್ಯಕ್ತಿಗೆ ಕೆಮ್ಮು, ಜ್ವರ ಕಾಣಿಸಿಕೊಳ್ಳುವ ಮೊದಲೇ ಮನೆಯ ಸದಸ್ಯರಿಗೆ ವೈರಾಣು ತಗುಲಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
6ರಲ್ಲಿ ಒಬ್ಬನಿಗೆ ಸೋಂಕು: ಸಾಮಾನ್ಯವಾಗಿ ಒಬ್ಬಂಟಿ ಅಥವಾ ಪ್ರತ್ಯೇಕವಾಗಿ ಜೀವಿಸುವ ಮಂದಿಗೆ ಕೋವಿಡ್ 19 ತಗುಲುವ ಸಾಧ್ಯತೆ ಕೇವಲ ಶೇ. 2.4ರಷ್ಟು. ಆದರೆ, ಮನೆಯೊಳಗೆ ಒಟ್ಟಿಗೆ ಜೀವಿಸುವವರಿಗೆ ಸೋಂಕು ತಗುಲುವ ಸಾಧ್ಯತೆ 17.1ರಷ್ಟು ಅಧಿಕ. ಅಂದರೆ ಪ್ರತಿ 6 ಮಂದಿಯಲ್ಲಿ ಒಬ್ಬ ಸದಸ್ಯ ಸೋಂಕಿಗೆ ತುತ್ತಾಗುತ್ತಾನೆ. ಎಲ್ಲ ಸದಸ್ಯರಿಗೂ ಸೋಂಕು ತಗುಲಿದ ಪ್ರಕರಣಗಳು ಶೇ.12.4ರಷ್ಟು ದಾಖಲಾಗಿವೆ.
ವೃದ್ಧರಿಗೆ ಆತಂಕ: ಮನೆ ಸದಸ್ಯರಿಂದಲೇ ಸೋಂಕಿಗೆ ತುತ್ತಾದವರಲ್ಲಿ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರು, 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿದ್ದಾರೆ. ಶೇ.39 ಮಂದಿಗೆ ಲಕ್ಷಣ ಕಾಣುವ ಮುನ್ನವೇ ಅವರಿಂದ ಇತರೆ ಸದಸ್ಯರಿಗೆ ಹಬ್ಬಿದೆ. ಮನೆಯೊಳಗೆ ಸಾಮಾಜಿಕ ಅಂತರ ಪಾಲನೆ ಅಸಾಧ್ಯ. ಹಲವು ಮಂದಿ ಒಂದೇ ವಸ್ತುಗಳನ್ನು ಬಳಸುವುದರಿಂದ ಸೋಂಕು ವ್ಯಾಪಿಸುವ ಸಾಧ್ಯತೆ ಹೆಚ್ಚು ಎನ್ನುವುದು ತಜ್ಞರ ಅಭಿಪ್ರಾಯ.