Advertisement
ಆದರೆ, ಸೋಂಕು ಸೃಷ್ಟಿಯಾಗಿ 5 ತಿಂಗಳು ಕಳೆದರೂ ಅದರ ಪ್ರಭಾವವೇನೂ ಕಡಿಮೆಯಾಗುತ್ತಿಲ್ಲ. ಅಲ್ಲದೆ, ರಾಷ್ಟ್ರವ್ಯಾಪಿ ನಿರ್ಬಂಧದಿಂದಾಗಿ ಕೋವಿಡ್ ವೈರಸ್ ಗಿಂತಲೂ ಭೀಕರವಾದ ಆರ್ಥಿಕ ಬಿಕ್ಕಟ್ಟು ಸರ್ಕಾರಗಳ ನಿದ್ದೆಗೆಡಿಸುತ್ತಿವೆ. ಮನೆಗಳಲ್ಲೇ ಕುಳಿತು ಜನರೂ ರೋಸಿ ಹೋಗಿದ್ದಾರೆ.
ಎಲ್ಲ ದೇಶಗಳೂ ನಿರ್ಬಂಧಗಳನ್ನು ಸಡಿಲಿಕೆ ಮಾಡುತ್ತಿದ್ದರೆ, ಕೋವಿಡ್ ವೈರಸ್ ಕೇಂದ್ರಸ್ಥಾನವಾದ ಚೀನದಲ್ಲಿ ಸಡಿಲಿಕೆಯಾಗಿದ್ದ ಲಾಕ್ ಡೌನ್ ಮತ್ತೆ ಜಾರಿಯಾಗುವಂತಿದೆ. ಇಲ್ಲಿನ ಈಶಾನ್ಯ ಭಾಗದ ಜಿಲಿನ್ ಎಂಬ ನಗರ ಸೇರಿದಂತೆ ಕೆಲವೆಡೆ ಎರಡನೇ ಹಂತದ ಸೋಂಕು ವ್ಯಾಪಿಸುವಿಕೆಯು ಆರಂಭವಾಗಿದೆ.
Related Articles
Advertisement
ದುಬಾೖ ಸದ್ಯ ಸಹಜ ಸ್ಥಿತಿಯತ್ತದುಬಾೖ ಸದ್ಯ ಸಹಜ ಸ್ಥಿತಿಗೆ ಬರುತ್ತಿದ್ದು, ಹಂತ ಹಂತವಾಗಿ ಇಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಬುಧವಾರದಿಂದ ಪಾರ್ಕ್‌ಗಳು, ಹೋಟೆಲ್‌ಗಳು, ಖಾಸಗಿ ಬೀಚ್ ಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸಂಪೂರ್ಣ ಲಾಕ್‌ಡೌನ್ ಅನ್ನು ಎ.24ರಂದೇ ಸಡಿಲಿಸಿದ್ದ ದುಬಾೖ ಆಡಳಿತ, ರಾತ್ರಿ ಹೊತ್ತು 8 ಗಂಟೆಗಳ ಕರ್ಫ್ಯೂ ಮಾತ್ರ ವಿಧಿಸಿತ್ತು. ತದನಂತರ ಒಂದೊಂದೇ ನಿರ್ಬಂಧಗಳನ್ನು ತೆಗೆದುಹಾಕುತ್ತಾ ಬಂದಿತ್ತು. ಪಾರ್ಕ್, ಖಾಸಗಿ ಬೀಚುಗಳು ತೆರೆದರೂ ಸಾಮಾಜಿಕ ಅಂತರ ನಿಯಮ ಮಾತ್ರ ಜಾರಿಯಲ್ಲಿದೆ. ಮಸೀದಿಗಳು, ಸಿನೆಮಾಮಂದಿರಗಳು, ನೈಟ್ ಕ್ಲಬ್ ಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ. ಸಡಿಲಿಕೆಗೆ ಬೋರಿಸ್ ಜಾನ್ಸನ್ ಹಿಂದೇಟು
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇತ್ತೀಚೆಗೆ ಲಾಕ್ ಡೌನ್ ಸಡಿಲಿಕೆ ಕುರಿತು ಒಲವು ತೋರಿದ್ದರೂ, ಈಗ ಹಿಂದೇಟು ಹಾಕುತ್ತಿದ್ದಾರೆ. ನಾನು ನಿರ್ಬಂಧ ಸಡಿಲಿಕೆ ಮಾಡಿರುವ ಇತರೆ ದೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಅಂಥ ದೇಶಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕ ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದೊಂದು ಎಚ್ಚರಿಕೆಯ ಘಂಟೆಯಾಗಿದ್ದು, ನಿರ್ಲಕ್ಷ್ಯ ವಹಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬುದು ಗೊತ್ತಾಗಿದೆ ಎಂದಿದ್ದಾರೆ ಜಾನ್ಸನ್. ಹೇಗಿದೆ ಬ್ರೆಜಿಲ್ ಸ್ಥಿತಿ?
ಕಳೆದ 24 ಗಂಟೆಗಳ ಅವಧಿಯಲ್ಲಿ 881 ಮಂದಿ ಸಾವಿಗೀಡಾಗುವ ಮೂಲಕ ಬ್ರೆಜಿಲ್ ಈಗ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಜರ್ಮನಿಯನ್ನೂ ಹಿಂದಿಕ್ಕಿದೆ. ಜತೆಗೆ ಅದುವೇ ಮತ್ತೂಂದು ಕೋವಿಡ್ ಹಾಟ್‌ಸ್ಪಾಟ್ ಆಗುವ ಭೀತಿಯೂ ಹುಟ್ಟಿಕೊಂಡಿದೆ. ಹೀಗಿದ್ದರೂ, ಲಾಕ್ ಡೌನ್ ಮುಂದುವರಿಸಿದರೆ ಪ್ರಯೋಜನವಿಲ್ಲ ಎಂದು ಭಾವಿಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೋ, ಹಲವರ ವಿರೋಧದ ನಡುವೆಯೇ ಬ್ಯೂಟಿ ಸೆಲೂನ್‌ಗಳು, ಜಿಮ್‌ಗಳನ್ನು ಅತ್ಯಗತ್ಯ’ ಸೇವೆಗಳ ಪಟ್ಟಿಗೆ ಸೇರಿಸಿದ್ದು, ಅವುಗಳನ್ನು ಪುನರಾರಂಭಗೊಳಿಸಲು ಆದೇಶ ನೀಡಿದ್ದಾರೆ. ಪಾಕಿಸ್ಥಾನಕ್ಕೆ ಭಾರೀ ಹೊಡೆತ
ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣ ಪಾಕಿಸ್ಥಾನಕ್ಕೆ ಲಾಕ್ ಡೌನ್ ತೆರವು ಮಾಡದೆ ಬೇರೆ ವಿಧಿಯಿಲ್ಲ ಎಂಬಂಥ ಸ್ಥಿತಿಯಿದೆ. ದೇಶದ ಆರ್ಥಿಕತೆ ಹಾಗೂ ಕಾರ್ಮಿಕರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವು ಮಾಡುವುದಾಗಿ ಸರಕಾರ ಘೋಷಿಸಿದೆ. ಜತೆಗೆ, ಧಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿದು ಮಸೀದಿಗಳನ್ನೂ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಟಲಿ, ಪೋಲೆಂಡ್, ಜರ್ಮನಿ ಕಥೆಯೇನು?
ಕೋವಿಡ್ ವೈರಸ್ ನಿಂದಾಗಿ 22 ಸಾವಿರಕ್ಕೂ ಅಧಿಕ ಮಂದಿಯನ್ನು ಕಳೆದುಕೊಂಡಿರುವ ಇಟಲಿಯಲ್ಲಿ ಅತ್ಯಗತ್ಯ ಸೇವೆ ಹೊರತುಪಡಿಸಿದರೆ, ಬಹುತೇಕ ಸೇವೆಗಳು ಸ್ಥಗಿತಗೊಂಡಿವೆ. ಇಲ್ಲಿ ಇನ್ನೂ ಲಾಕ್‌ಡೌನ್ ಹೆಚ್ಚಿನ ಪ್ರಮಾಣದಲ್ಲಿ ಸಡಿಲಿಕೆ ಆಗಿಲ್ಲ. ಮಾ.11ರಂದು ಲಾಕ್‌ಡೌನ್ ಘೋಷಿಸಿದ್ದ ಡೆನ್ಮಾರ್ಕ್, ಏ.15ರ ವೇಳೆಗಾಗಲೇ ನಿರ್ಬಂಧ ಸಡಿಲಿಕೆ ಮಾಡಿದೆ. ಎ.27ರಿಂದ ಸ್ಪಾ, ಸೆಲೂನ್, ಸ್ಟುಡಿಯೋಗಳು, ಕೋರ್ಟ್‌ಗಳನ್ನು ತೆರೆಯಲಾಗಿದೆ. ಪೋಲೆಂಡ್‌ನಲ್ಲಿ ಮೇ 18ರಿಂದ ರೆಸ್ಟಾರೆಂಟ್‌ಗಳು, ಸೆಲೂನ್‌ಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಘೋಷಿಸಿದೆ. ಆಸ್ಟ್ರಿಯಾ ಮತ್ತು ಜರ್ಮನಿ ದೇಶಗಳು 2 ತಿಂಗಳ ಬಳಿಕ ಜೂ.15ರಂದು ತಮ್ಮ ದೇಶಗಳ ಗಡಿಗಳನ್ನು ತೆರೆಯುವುದಾಗಿ ತಿಳಿಸಿವೆ. ಮಲೇಷ್ಯಾದಲ್ಲಿ ಷರತ್ತುಬದ್ಧ ಅನುಮತಿ
ಸೋಂಕಿತರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ, ಮೇ 4ರಿಂದಲೇ ಬಹುತೇಕ ಆರ್ಥಿಕ ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಹೀಗಾಗಿ ದೇಶದ ಅರ್ಧದಷ್ಟು ಕಾರ್ಮಿಕ ವರ್ಗ ಮತ್ತೆ ಕೆಲಸ ಆರಂಭಿಸಿದೆ. ಸದ್ಯದಲ್ಲೇ ಧಾರ್ಮಿಕ ಕೇಂದ್ರಗಳನ್ನೂ ತೆರೆಯಲಾಗುವುದು ಎಂದು ಪ್ರಧಾನಿ ಮುಹಿಯುದ್ದೀನ್ ಯಾಸೀನ್ ತಿಳಿಸಿದ್ದಾರೆ. ಥಾಯ್ಲೆಂಡ್‌ನಲ್ಲಿ ಮುಕ್ತ ಮುಕ್ತ…
ಚೀನದ ಬಳಿಕ ಮೊದಲು ಸೋಂಕು ಕಂಡುಬಂದಿದ್ದೇ ಥಾಯ್ಲೆಂಡ್‌ನಲ್ಲಿ. ಆದರೂ, 3,015 ಪ್ರಕರಣ ಮತ್ತು 56 ಸಾವುಗಳ ಮೂಲಕ ಇಲ್ಲಿ ಸದ್ಯಕ್ಕೆ ಬಹುತೇಕ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆಹಾರ ಮಳಿಗೆಗಳು, ರೆಸ್ಟಾರೆಂಟ್, ಮಾಲ್ ಗಳು, ಸೂಪರ್ ಮಾರ್ಕೆಟ್‌ಗಳು, ಪಾರ್ಕುಗಳು ತೆರೆದಿದ್ದು, ಲಾಕ್‌ಡೌನ್ ಬಹುತೇಕ ತೆರವಾಗಿದೆ. ಅಫ್ಘಾನಿಸ್ಥಾನ – ನಿರ್ಬಂಧ ಹೆಸರಿಗೆ ಮಾತ್ರ
ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದರೂ, ಬಹುತೇಕ ನಗರಗಳಲ್ಲಿ ನಿರ್ಬಂಧ ಜಾರಿಯಲ್ಲಿಲ್ಲ. ಅಂಗಡಿಗಳು, ಮಾರುಕಟ್ಟೆಗಳು ತೆರೆದಿವೆ. ಸ್ಥಳೀಯಾಡಳಿತಗಳೇ ನಿರ್ಬಂಧಗಳನ್ನು ತೆರವುಗೊಳಿಸಿ, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿವೆ. ರಾಜಧಾನಿ ಕಾಬೂಲ್ ನಲ್ಲೂ ಜನರು ಎಂದಿನಂತೆ ಹಾದಿ ಬೀದಿಗಳಲ್ಲಿ ಸಂಚರಿಸುತ್ತಿದ್ದಾರೆ. ಒತ್ತಡಕ್ಕೆ ಮಣಿದ ಬಾಂಗ್ಲಾ
ಏಪ್ರಿಲ್ ಅಂತ್ಯದಲ್ಲೇ ಬಹುತೇಕ ಜವಳಿ ಮಳಿಗೆಗಳು ಬಾಗಿಲು ತೆರೆದಿವೆ. ಉದ್ದಿಮೆಗಳ ಒತ್ತಡಕ್ಕೆ ಮಣಿದು ಕಂಪೆನಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಈದ್ ಹಬ್ಬದ ಬಳಿಕ ವಿಮಾನಯಾನ ಸಂಚಾರವನ್ನೂ ಪುನಾರಂಭಿಸಲು ಸರಕಾರ ಚಿಂತನೆ ನಡೆಸಿದೆ. ಶ್ರೀಲಂಕಾದಲ್ಲಿ ತೆರವು
ದೇಶದ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಉಳಿದೆಡೆ ಮೇ 11ರಿಂದಲೇ ಲಾಕ್ ಡೌನ್ ತೆರವಾಗಿದೆ. ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ಕಂಪೆನಿಗಳ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಸಿನಿಮಾ ಹಾಲ್, ಜಿಮ್ ಗಳು ಮುಚ್ಚಿವೆ. ಬಸ್ಸುಗಳು ಓಡಾಡುತ್ತಿವೆ. ಲಾಕ್‌ಡೌನ್ ತೆರವುಗೊಳಿಸಿ, ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಆತುರ ಬೇಡ. ಇಂತಹ ದುಡುಕಿನ ತೀರ್ಮಾನದಿಂದ ಮತ್ತಷ್ಟು ಸಾವು ಸಂಭವಿಸಬಹುದು.
– ಡಾ| ಆಂಥೋನಿ ಫೌಸಿ, ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ