Advertisement

ENT ತಜ್ಞರು, ರೆಸಿಡೆಂಟ್‌ ಡಾಕ್ಟರ್‌ಗಳ ಸೇವೆ ಪಡೆಯಿರಿ ; ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

03:36 AM Apr 13, 2020 | Hari Prasad |

ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ಕೋವಿಡ್ ಸೋಂಕು ವ್ಯಾಪಿಸಿರುವ ಕಾರಣ ಕೋವಿಡ್ ಪರೀಕ್ಷೆಯ ಸ್ಯಾಂಪಲ್‌ ಸಂಗ್ರಹಕ್ಕೆ ವಿದ್ಯಾವಂತ ಸಿಬ್ಬಂದಿಯ ಅಗತ್ಯತೆಯಿದ್ದು, ಕೂಡಲೇ ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ತಜ್ಞರನ್ನು ಹಾಗೂ ರೆಸಿಡೆಂಟ್‌ ವೈದ್ಯರನ್ನು ಈ ಕೆಲಸಕ್ಕೆ ಬಳಸಿಕೊಳ್ಳಿ ಎಂದು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

Advertisement

‘ದೇಶವು ಈಗ ಹಿಂದೆಂದೂ ಕಾಣದಂಥ ಸ್ಥಿತಿಯನ್ನು ಎದುರಿಸುತ್ತಿದೆ. ಈ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯಲು ಸರ್ಕಾರವು ಹಲವು ಕಾರ್ಯತಂತ್ರಗಳನ್ನು ರೂಪಿಸಿದೆ. ಆ ಪೈಕಿ ಸೋಂಕು ಶಂಕಿತ ವ್ಯಕ್ತಿಗಳ ಗಂಟಲು ದ್ರಾವಣವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವುದು ಪ್ರಮುಖವಾಗಿದೆ.

ಈ ಮಾದರಿಗಳನ್ನು ಸಂಗ್ರಹಿಸಲು ನಮಗೆ ತುರ್ತಾಗಿ ತರಬೇತಿ ಪಡೆದ ಸಮರ್ಪಕ ಸಿಬ್ಬಂದಿಯ ಅಗತ್ಯವಿದೆ. ಹಾಗಾಗಿ, ಕೂಡಲೇ ಅಂಥವರನ್ನು ಈ ಸೇವೆಗೆ ಬಳಸಿಕೊಳ್ಳಿ’ ಎಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳಿಗೆ (ಆರೋಗ್ಯ) ಬರೆದ ಪತ್ರದಲ್ಲಿ ಆರೋಗ್ಯ ಸಚಿವಾಲಯ ನಿರ್ದೇಶಿಸಿದೆ.

“ಎಲ್ಲಾ ವೈದ್ಯಕೀಯ ಸಂಸ್ಥೆಗಳಿಗೂ ಈ ಕುರಿತು ಸೂಚನೆಯನ್ನು ರವಾನಿಸಿ. ಎಲ್ಲ ವೈದ್ಯಕೀಯ ಕಾಲೇಜುಗಳು ಕೂಡ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರುವಂತೆ ತಿಳಿಸಿ. ಸ್ಯಾಂಪಲ್‌ ಗಳನ್ನು ವೃತ್ತಿಪರವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕಾದಾಗ, ಸೇವೆಗೆ ಸಿದ್ಧವಿರುವಂತೆ ಅವರಿಗೆ ಸೂಚಿಸಿ’ ಎಂದೂ ಪತ್ರದಲ್ಲಿ ನಿರ್ದೇಶಿಸಲಾಗಿದೆ.

ಮತ್ತೂಂದೆಡೆ, ಈಗಾಗಲೇ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ವೈದ್ಯರು ಸೇರಿದಂತೆ 30 ಸಾವಿರಕ್ಕೂ ಹೆಚ್ಚು ವೈದ್ಯರು ಸ್ವಯಂಪ್ರೇರಿತರಾಗಿ ಕೊವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಲು ಮುಂದೆ ಬಂದಿದ್ದಾರೆ.

Advertisement

ವೈದ್ಯಕೀಯ ತಂಡದ ಮೇಲೆ ದಾಳಿ
ಕೋವಿಡ್ ಸೋಂಕು ಪರೀಕ್ಷೆಗೆ ತೆರಳಿದ್ದ ವೈದ್ಯಕೀಯ ತಂಡವನ್ನು ಬೆದರಿಸಿ, ಒತ್ತೆಯಿರಿಸಿದ್ದ ಪ್ರಕರಣ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ವಥೂರ ಗ್ರಾಮದಲ್ಲಿ ನಡೆದಿದೆ. ಶನಿವಾರ, ವೈದ್ಯಕೀಯ ತಂಡ ವೈರಸ್‌ ಸೋಂಕು ಪರೀಕ್ಷೆ ನಡೆಸಲು ಗ್ರಾಮಕ್ಕೆ ತೆರಳಿತ್ತು. ಶಂಕಿತ ಸೋಂಕಿತ ರೋಗಿಯನ್ನು ಅವರು ಪರೀಕ್ಷೆಗೊಳಪಡಿಸಬೇಕಿತ್ತು. ಆದರೆ ಅದನ್ನು ಅವರ ಕುಟುಂಬ ತಡೆಯಿತು. ಅಲ್ಲದೇ ವೈದ್ಯಕೀಯ ತಂಡದವರ ಮೇಲೆ ಕಲ್ಲು ತೂರಾಟ ನಡೆಸಿ, ಅವರನ್ನು ತಮ್ಮ ಮನೆಯಲ್ಲಿ ಕೂಡಿಹಾಕಿದ್ದರು.

ಇನ್ನೊಂದು ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆ ಮೇಲೆ ಕುಟುಂಬವೊಂದು ಹಲ್ಲೆ ನಡೆಸಿದೆ. ಆರೋಗ್ಯ ಕಾರ್ಯಕರ್ತೆ ಇಲ್ಲಿಯ ಕುಟುಂಬವೊಂದರ ಸದಸ್ಯರಿಗೆ ಕೋವಿಡ್ ಸೋಂಕು ಪರೀಕ್ಷೆ ನಡೆಸಲು ಗಂಟಲು ದ್ರವದ ಮಾದರಿಯನ್ನು ಸಂಗ್ರಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next