Advertisement

ವಯೋ ವೃದ್ಧರ ಮೇಲೆ ಕೋವಿಡ್ 19 ವೈರಸ್‌ ಕರಿನೆರಳು

12:58 PM Apr 16, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್‌ ಕರಿನೆರಳು ವಯೋವೃದ್ಧರ ಮೇಲೆ ಹೆಚ್ಚು ಬಿದ್ದಿದೆ. ಇಲ್ಲಿಯವರೆಗೆ 52 ಮಂದಿ ವೃದ್ಧರು ಸೋಂಕಿತರಾಗಿದ್ದು, ಅವರಲ್ಲಿ 12 ಮಂದಿ ಮೃತಪಟ್ಟಿದ್ದು, ಐವರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ.

Advertisement

ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅಂತೆಯೇ ಸಾಕಷ್ಟು ಮಂದಿ ಗುಣಮುಖರಾಗಿ ಹೊರಬರುತ್ತಿದ್ದಾರೆ. ಆದರೆ ಸೋಂಕು ತಗಲಿಸಿಕೊಂಡು 60 ವರ್ಷ ಪ್ರಾಯ ಮೇಲ್ಪಟ್ಟ 52 ಮಂದಿಯಲ್ಲಿ 5 ಮಂದಿ ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಬಾಕಿ 35 ಮಂದಿ ಆಸ್ಪತ್ರೆಯಲ್ಲಿ ಇಂದಿಗೂ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಇತ್ತೀಚೆಗೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯರಲ್ಲೂ ಕೋವಿಡ್ 19 ಸೋಂಕು ದೃಢಪಡುತ್ತಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇಲ್ಲಿಯವರೆಗೂ ಕಲಬುರಗಿಯಲ್ಲಿ 76 ವರ್ಷ, 55 ವರ್ಷ, 65 ವರ್ಷ ಪ್ರಾಯದ ಮೂವರು, ಬೆಂಗಳೂರಿನಲ್ಲಿ 76 ಹಾಗೂ 65 ವರ್ಷ ಪ್ರಾಯದ ಇಬ್ಬರು, ತುಮಕೂರಿನಲ್ಲಿ 60 ವರ್ಷ ಪ್ರಾಯದ ವೃದ್ಧ, ಚಿಕ್ಕಬಳ್ಳಾಪುರದಲ್ಲಿ 70 ವರ್ಷ ಹಾಗೂ 65 ವರ್ಷ, ಗದಗದಲ್ಲಿ 80 ವರ್ಷ ಪ್ರಾಯದ ವೃದ್ಧೆ, ವಿಜಯಪುರದಲ್ಲಿ 69 ವರ್ಷ, ಬಾಗಲಕೋಟೆಯಲ್ಲಿ 75 ವರ್ಷ, ಬೆಳಗಾವಿಯಲ್ಲಿ 80 ವರ್ಷ ಪ್ರಾಯದ ವೃದ್ಧೆ ಕೋವಿಡ್ 19ದಿಂದ ಸಾವಿಗೀಡಾಗಿದ್ದಾರೆ.

ಏಳು ಪ್ರಕರಣಗಳು ತನಿಖೆಯಲ್ಲಿ
ಸಾವಿಗೀಡಾದ 12 ಮಂದಿ ವೃದ್ಧರಲ್ಲಿ ಇಬ್ಬರು ವಿದೇಶ ಪ್ರಯಾಣ ಹಿನ್ನೆಲೆ, ಒಬ್ಬರು ದಿಲ್ಲಿ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಬಾಕಿ 9 ಮಂದಿ ಯಾವುದೇ ವಿದೇಶ ಪ್ರಯಾಣ ಮಾಡದಿದ್ದರೂ ಕೋವಿಡ್ 19 ಸೋಂಕಿತರಾಗಿದ್ದಾರೆ. ಅಚ್ಚರಿ ಎಂದರೆ ಇಂದಿಗೂ ಬಾಗಲಕೋಟೆ, ಕಲಬುರಗಿ, ಗದಗ, ವಿಜಯಪುರ, ಚಿಕ್ಕಬಳ್ಳಾಪುರದಲ್ಲಿ ಸಾವಿಗೀಡಾದ ತಲಾ ಒಬ್ಬ ವೃದ್ಧರು ಹಾಗೂ ಬೆಂಗಳೂರಿನ ಇಬ್ಬರು ವೃದ್ಧರು ಸಹಿತ ಏಳು ಮಂದಿ ವೃದ್ಧರಿಗೆ ಸೋಂಕು ಯಾವಾಗ, ಯಾರಿಂದ ತಗಲಿತು ಎಂಬುದು ಪತ್ತೆಯಾಗಿಲ್ಲ. ಇಂದಿಗೂ ಈ ಪ್ರಕರಣಗಳನ್ನು ಆರೋಗ್ಯ ಇಲಾಖೆ ತನಿಖೆ ನಡೆಸುತ್ತಲಿದೆ. ಇನ್ನು ಈ ಮೃತರಿಂದ 10ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದೆ.

ಏಳು ಮಂದಿ ವೃದ್ಧರದ್ದು ಮೃತಪಟ್ಟ ಬಳಿಕ ವರದಿ
12 ಮಂದಿಯಲ್ಲಿ ಏಳು ಮಂದಿಗೆ ಕೋವಿಡ್ 19 ಸೋಂಕು ತಗಲಿ ಅವರು ಮೃತರಾದ ಬಳಿಕ ವರದಿ ಬಂದಿದೆ. ಕೆಲವೆಡೆ ಪ್ರಯೋಗಾಲಯ ಕೊರತೆ ಹಾಗೂ ಸೋಂಕು ಪರೀಕ್ಷೆಗೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ಹೀಗಾ ಗಿ ದೆ. ಕಲಬುರಗಿಯಲ್ಲಿ ಇಬ್ಬರು, ಚಿಕ್ಕಬಳ್ಳಾಪುರದ ವೃದ್ಧೆ, ಬೆಂಗಳೂರಿನ ಇಬ್ಬರು ವೃದ್ಧರು, ಬೆಳಗಾವಿಯ ವೃದ್ಧೆ ಹಾಗೂ ತುಮಕೂರಿನ ವೃದ್ಧ ಸಾವಿಗೀಡಾದ ಬಳಿಕವೇ ಸೋಂಕು ಪರೀಕ್ಷಾ ವರದಿ ಬಂದು ಸೋಂಕು ತಗಲಿರುವುದು ದೃಢಪಟ್ಟಿತ್ತು.

Advertisement

ಕಾಳಜಿ ಆವಶ್ಯಕ
ಆಸ್ಪತ್ರೆಗೆ ಸೋಂಕು ಅಂತಿಮ ಹಂತ ತಲುಪಿದಾಗ ಬರುವುದು ಹಾಗೂ ಆರೋಗ್ಯ ಕುರಿತ ನಿರ್ಲಕ್ಷ್ಯದಿಂದ ವಯೋವೃದ್ಧರಲ್ಲಿ ಸೋಂಕು – ಸಾವು ಹೆಚ್ಚಾಗುತ್ತಿದೆ. ಇತರ ಕಾಯಿಲೆಗಳು ಇರುವುದರಿಂದ ಚೇತರಿಕೆ ತಡವಾಗುತ್ತಿದೆ. ಕುಟುಂಬಸ್ಥರು ಹಾಗೂ ಸ್ವತಃ ಅವರೇ ಕಾಳಜಿವಹಿಸಿ ಶೀಘ್ರ ಆಸ್ಪತ್ರೆಗೆ ಬರಬೇಕು.
– ಡಾ| ಸಿ. ನಾಗರಾಜ್‌,
ನಿರ್ದೇಶಕರು, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ.

ವೃದ್ಧ ರಿಗೇ ಮಾರಕ ಏಕೆ?
– ರೋಗ ನಿರೋಧಕ ಶಕ್ತಿ ಕಡಿಮೆ.
– ಓಡಾಟ ಹಾಗೂ ಎಲ್ಲರೊಟ್ಟಿಗೂ ಒಡನಾಟ ಹೆಚ್ಚು. ವೈಯಕ್ತಿಕ ಸ್ವತ್ಛತೆಗೆ ಆದ್ಯತೆ ಕಡಿಮೆ.
– ಸೋಂಕಿನ ಆರಂಭಿಕ ಲಕ್ಷಣ ಕಾಣಿಸಿ ಕೊಂಡಾಗ ನಿರ್ಲಕ್ಷ್ಯ ಮಾಡುವುದು.
– ಸೋಂಕು ಅಂತಿಮ ಹಂತ ತಲುಪಿದಾಗ ಆಸ್ಪತ್ರೆಗೆ ಕರೆತರುವುದು.
– ವಯೋಸಹಜ ಕಾಯಿಲೆಗಳು ಇದ್ದಾಗ ಕೋವಿಡ್ 19 ಸೋಂಕಿನಿಂದ ಮತ್ತಷ್ಟು ಆರೋಗ್ಯ ಹಾನಿ.

ಅಂಕಿ-ಅಂಶ
– ಕಾಲು ಭಾಗದಷ್ಟು ಜನ 50 ವರ್ಷ ಮೇಲ್ಪಟ್ಟವರು
– ರಾಜ್ಯದ ಒಟ್ಟಾರೆ ಸೋಂಕಿತರಲ್ಲಿ 50 ವರ್ಷ ಪ್ರಾಯದ ಮೇಲ್ಪಟ್ಟವರು ಶೇ. 26ರಷ್ಟು ಮಂದಿ ಇದ್ದಾರೆ. ಅಂದರೆ ಒಟ್ಟಾರೆ 279 ಸೋಂಕಿತರಲ್ಲಿ 50 ವರ್ಷ ಪ್ರಾಯ ಮೇಲ್ಪಟ್ಟವರು 73 ಮಂದಿ.
– ಮೃತರು – 12 (ವೃದ್ಧರು -10, ವೃದ್ಧೆಯರು -2)
– ಆಸ್ಪತ್ರೆಯಲ್ಲಿ ಚಿಕಿತ್ಸೆ – 35 ( ವೃದ್ಧರು -22, ವೃದ್ಧೆಯರು – 13)

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next