ನವದೆಹಲಿ: ದೇಶದಲ್ಲಿ ಕೋವಿಡ್ 19 ವೈರಸ್ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಈ ನಿಟ್ಟಿನಲ್ಲಿ ರಾಜ್ಯವಾರು ಸೋಂಕುಪೀಡಿತರ ಮಾಹಿತಿ ಮತ್ತು ಈ ಸೋಂಕಿಗೆ ಬಲಿಯಾದವರ ಮಾಹಿತಿಗಳನ್ನು ನಿಖರವಾಗಿ ನೀಡಲು
covid 19india.org ಎಂಬ ಡ್ಯಾಶ್ ಬೋರ್ಡ್ ಕಾರ್ಯಾರಂಭಿಸಿದೆ.
ಇದರಲ್ಲಿ ರಾಜ್ಯವಾರು ಸೋಂಕು ಪಾಸಿಟಿವ್ ಪ್ರಕರಣಗಳು, ಸದ್ಯಕ್ಕೆ ಸೋಂಕು ಪೀಡಿತರಾಗಿರುವವರು, ಚೇತರಿಸಿಕೊಂಡವರು ಹಾಗೂ ಮೃತಪಟ್ಟವರ ಸಂಖ್ಯೆಗಳನ್ನು ನೀಡಲಾಗುತ್ತದೆ.
ಪ್ರಾರಂಭದಲ್ಲಿ ದೇಶದಲ್ಲಿನ ಒಟ್ಟು ಪ್ರಕರಣಗಳು, ಸದ್ಯ ಪಾಸಿಟಿವ್ ಆಗಿಯೇ ಇರುವ ಪ್ರಕರಣಗಳು, ಚೇತರಿಸಿಕೊಂಡವರು ಮತ್ತು ಮೃತಪಟ್ಟವರ ಸಂಖ್ಯೆಗಳನ್ನು ನೀಡಲಾಗಿದೆ. ಮತ್ತು ಇದರೊಂದಿಗೆ ಈ ಎಲ್ಲಾ ಪ್ರಕರಣಗಳು ಏರಿಕೆಯಾಗಿದೆಯೋ ಇಳಿಕೆಯಾಗಿದೆಯೋ ಎಂಬ ಅಂಕಿ ಅಂಶ ಇಲ್ಲಿ ಲಭ್ಯವಿದೆ.
ರಾಜ್ಯಗಳ ಪಟ್ಟಿಯ ಬಳಿಕ ದೇಶದ ಭೂಪಟವನ್ನು ನೀಡಲಾಗಿದ್ದು ಇಲ್ಲಿ ನಾವು ಯಾವ ರಾಜ್ಯದ ಮೇಲೆ ಕರ್ಸ್ರರ್ ಇರಿಸುತ್ತೇವೆಯೋ ಆ ರಾಜ್ಯದಲ್ಲಿನ ಕೋವಿಡ್ 19 ಸೋಂಕು ಪ್ರಕರಣದ ಅಂಕಿ ಅಂಶಗಳು ಲಭ್ಯವಾಗುತ್ತವೆ. ಪ್ರತೀ ರಾಜ್ಯಗಳಿಗೂ ಬಣ್ಣಗಳನ್ನು ನೀಡಲಾಗಿದ್ದು ಇಲ್ಲಿ ಗಾಢ ಕುಂಕುಮ ಬಣ್ಣ ಇರುವುದು ಅತೀ ಹೆಚ್ಚಿನ ಸೋಂಕು ಪ್ರಕಣಗಳಿರುವ ರಾಜ್ಯವಾಗಿದೆ ಮತ್ತು ತಿಳಿ ಬಣ್ಣ ಕಡಿಮೆ ಪ್ರಕರಣಗಳು ದಾಖಲಾಗಿರುವ ರಾಜ್ಯಗಳನ್ನು ಸೂಚಿಸುತ್ತದೆ.
ಇದೆಲ್ಲದರ ಕೆಳಗೆ ಸೋಂಕು ಹರಡುವಿಕೆಯ ವೇಗವನ್ನು ಸಹ ಗ್ರಾಫ್ ಮೂಲಕ ನೀಡಲಾಗಿದೆ. ಈ ಡ್ಯಾಶ್ ಬೋರ್ಡ್ ನ ಪ್ರಾರಂಭದಲ್ಲಿ ಕೋವಿಡ್ 19 ಸೋಂಕಿನ ಕುರಿತಾದ ಸತ್ಯ-ಮಿಥ್ಯ ಹಾಗೂ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಸ್ಕ್ರೋಲ್ ರೂಪದಲ್ಲಿ ನೀಡಲಾಗಿದೆ.
ವಿಶ್ವದ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿರುವ ಈ ಮಾರಕ ವೈರಸ್ ನ ಸದ್ಯದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು
ವರ್ಲ್ಡೋಮೀಟರ್ ಎಂಬ ವೆಬ್ ಸೈಟ್ ಕಾರ್ಯಾಚರಿಸುತ್ತಿರುವಂತೆ ನಮ್ಮ ದೇಶದಲ್ಲಿ ಈ ವೈರಸ್ ಕುರಿತಾದ ಲೆಟೆಸ್ಟ್ ಅಪ್ ಡೇಟ್ ಗಳಿಗೆ ರಚಿಸಿರುವ ಈ ಡ್ಯಾಶ್ ಬೋರ್ಡ್ ಅತ್ಯಂತ ಉಪಯುಕ್ತವಾಗಿದೆ.