ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ ಕೋವಿಡ್ 19 ವೈರಸ್ ಸೋಂಕಿನಿಂದ ಬರೋಬ್ಬರಿ 1,480 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಸಾವಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ಅಮೆರಿಕವು ಜಾಗತಿಕ ದಾಖಲೆ ಬರೆದಿದೆ. ಯಾವುದೇ ದೇಶದಲ್ಲೂ ಇದುವರೆಗೆ ಒಂದೇ ದಿನದಲ್ಲಿ ಇಷ್ಟೊಂದು ಮಂದಿ ಮೃತಪಟ್ಟಿರಲಿಲ್ಲ. ಒಟ್ಟಾರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ರವಿವಾರ 8,100ಕ್ಕೇರಿದೆ. ಸೋಂಕಿತರ ಸಂಖ್ಯೆ 3 ಲಕ್ಷ ತಲುಪಿದೆ.
ನ್ಯೂಯಾರ್ಕ್ ಕೂಡ ಒಂದೇ ದಿನದಲ್ಲಿ ಭಾರಿ ಸಾವು ನೋವನ್ನು ಕಂಡಿದೆ. ಇಲ್ಲಿ ಪ್ರತಿ ಎರಡೂವರೆ ನಿಮಿಷಗಳಿಗೆ ಒಬ್ಬ ವ್ಯಕ್ತಿಯಂತೆ ಸಾವಿಗೀಡಾಗುತ್ತಿದ್ದಾರೆ. ನ್ಯೂಯಾರ್ಕ್ ಒಂದರಲ್ಲಿಯೇ 2,935 ಮಂದಿ ಈವರೆಗೆ ಮೃತಪಟ್ಟಿದ್ದು, ಶನಿವಾರ ಒಂದೇ ದಿನ 562 ಜನ ಬಲಿಯಾಗಿದ್ದಾರೆ.
ಚೀನ ಮಾಹಿತಿ ಬಗ್ಗೆ ಸಿಐಎ ತನಿಖೆ: ಕೋವಿಡ್ 19 ವೈರಸ್ ಸಾವಿನ ಬಗ್ಗೆ ಚೀನ ಸರಕಾರ ಸರಿಯಾಗಿ ಮಾಹಿತಿ ನೀಡಿಲ್ಲ ಎನ್ನುವುದು ಅಮೆರಿಕದ ಆರೋಪ. ಸದ್ಯ ಆ ದೇಶ ನೀಡಿರುವ ಅಂಕಿ – ಅಂಶಗಳ ಮಾಹಿತಿಯ ಸತ್ಯಾಂಶ ಶೋಧನೆಗೆ ತನಿಖಾ ಸಂಸ್ಥೆ ಸಿಐಎ ಮುಂದಾಗಿದೆ. ಆದರೆ, ತನ್ನದೇ ಆದ ಮೂಲಗಳ ಪ್ರಕಾರ ಚೀನದಲ್ಲಿ ಸಂಭವಿಸಿದ ಸಾವು – ನೋವುಗಳ ಬಗ್ಗೆ ನೈಜ ಅಂಕಿ – ಅಂಶಗಳನ್ನು ಪಡೆಯುವಲ್ಲಿ ಅಮೆರಿಕದ ಗುಪ್ತಚರ ಇಲಾಖೆ ಇದುವರೆಗೂ ಸಫಲವಾಗಿಲ್ಲ. ಮತ್ತೂಂದು ಮಹತ್ವದ ಅಂಶವೆಂದರೆ ಚೀನ ಸರಕಾರಕ್ಕೆ ಅಲ್ಲಿನ ಅಧಿಕಾರಿಗಳೇ ಸಾವು ನೋವಿನ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವ ಅಂಶವೂ ಸಿಐಎ ಅಧಿಕಾರಿಗಳು ಕಂಡುಕೊಂಡಿದ್ದಾರೆ.
ನಾನು ಹಾಕಲ್ಲ, ನೀವು ಹಾಕಿ
ಗಾಳಿಯಿಂದಲೂ ಉಸಿರಿನ ಮೂಲಕ ಕೋವಿಡ್ 19 ವೈರಸ್ ಹರಡುತ್ತದೆ ಎಂದು ಹೊಸ ಸಂಶೋಧನಾ ವರದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಕಾಲಿಡುವಾಗ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಅಮೆರಿಕ ಸರಕಾರ ಜನರಿಗೆ ಸೂಚಿಸಿದೆ. ಮನೆಯಲ್ಲೇ ತಯಾರಿಸಿರುವ ಮಾಸ್ಕ್ ಗಳನ್ನು ಅಥವಾ ಸ್ಕಾರ್ಫ್ ಗಳನ್ನಾದರೂ ಧರಿಸಿಕೊಂಡು, ವೈರಸ್ ಹಬ್ಬುವುದನ್ನು ತಪ್ಪಿಸಿ ಎಂದು ಟ್ರಂಪ್ ಆದೇಶಿಸಿದ್ದಾರೆ. ಆದರೆ, ನಾನು ಮಾತ್ರ ಧರಿಸುವುದಿಲ್ಲ ಎಂದಿದ್ದಾರೆ.
ಸಾವಿನ ಸಂಖ್ಯೆ : 8,100
ನ್ಯೂಯಾರ್ಕ್‌ನ ಸಾವಿನ ಸಂಖ್ಯೆ: 300,000