Advertisement

ಅಮೆರಿಕದಲ್ಲಿ ಲಕ್ಷ ದಾಟಿದ ಸಾವು ಭಯಾನಕ ಸ್ಥಿತಿ

03:18 AM May 29, 2020 | Team Udayavani |

ಅಮೆರಿಕದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಒಂದು ಲಕ್ಷ ದಾಟಿದೆ. ಇದುವರೆಗೂ ಆ ರಾಷ್ಟ್ರದಲ್ಲಿ 17 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಕೋವಿಡ್ ಎಷ್ಟು ವೇಗವಾಗಿ ಹರಡಬಲ್ಲದು, ಎಷ್ಟು ಹಾನಿ ಮಾಡಬಲ್ಲದು ಎನ್ನುವುದಕ್ಕೆ ದೊಡ್ಡಣ್ಣ ಸಾಕ್ಷಿಯಾಗುತ್ತಿದೆ.

Advertisement

ಆದಾಗ್ಯೂ, ಈ ಬೃಹತ್‌ ಸಂಖ್ಯೆಯು ಅಷ್ಟೇನೂ ಅಚ್ಚರಿ ಹುಟ್ಟಿಸದಿರಲು ಕಾರಣವೇನೆಂದರೆ, ಕಳೆದ 2 ತಿಂಗಳ ಹಿಂದೆಯೇ ಟ್ರಂಪ್‌ ಆಡಳಿತ ಮರಣ ಪ್ರಮಾಣ ಎರಡು ಲಕ್ಷ ದಾಟದಂತೆ ನಿಯಂತ್ರಿಸಲು ಸಾಧ್ಯವಾದರೆ, ದೇಶದ ಪ್ರಯತ್ನ ಫ‌ಲಿಸಿದಂತೆ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಆದರೆ, ಸದ್ಯಕ್ಕಂತೂ ರೋಗ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ.

ಇದೇನೇ ಇದ್ದರೂ, ಅಮೆರಿಕದಂಥ ಶಕ್ತಿಶಾಲಿ ರಾಷ್ಟ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರೇಕೆ ಮೃತಪಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸ್ಪಷ್ಟವಾಗಿ ಸಿಗುತ್ತಿಲ್ಲ. ಕೋವಿಡ್ ಚೀನದ ಗಡಿ ದಾಟುತ್ತಿದ್ದಂತೆಯೇ ಯಾರೂ ಕೂಡ ಅದು ಅಮೆರಿಕಕ್ಕೆ ಈ ಪ್ರಮಾಣದಲ್ಲಿ ಹಾನಿ ಮಾಡಬಹುದು ಎಂದು ಊಹಿಸಿರಲಿಲ್ಲ.

ರೋಗದ ಗಂಭೀರತೆಯನ್ನು ಆರಂಭಿಕ ದಿನಗಳಲ್ಲಿ ಟ್ರಂಪ್‌ ಸರಕಾರ ಕಡೆಗಣಿಸಿದ್ದೇ ವ್ಯಾಪಕ ಪ್ರಮಾಣದಲ್ಲಿ ರೋಗ ಹರಡುವಿಕೆಗೆ ಕಾರಣವಾಯಿತು. ಇದರ ನಡುವೆಯೇ, ಉಲ್ಲೇಖಿಸಲೇಬೇಕಾದ ಅಂಶವೆಂದರೆ, ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಹೇಗೆ ಅಧಿಕವಿದೆಯೋ ಹಾಗೆಯೇ, ಅತ್ಯಧಿಕ ಕೋವಿಡ್ ಪತ್ತೆ ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರವೂ ಅದೇ ಆಗಿದೆ.

ಬುಧವಾರದ ವೇಳೆಗೆ ಆ ರಾಷ್ಟ್ರದಲ್ಲಿ 1 ಕೋಟಿ 55 ಲಕ್ಷ ಕೋವಿಡ್‌-19 ಟೆಸ್ಟ್‌ಗಳನ್ನು ನಡೆಸಲಾಗಿದೆ. ಇದಕ್ಕೆ ಹತ್ತಿರದಲ್ಲಿರುವ ರಾಷ್ಟ್ರವೆಂದರೆ  ಹಾಟ್‌ ಸ್ಪಾಟ್‌ಗಳಲ್ಲಿ 3ನೇ ಸ್ಥಾನದಲ್ಲಿರುವ ರಷ್ಯಾ. ಅಲ್ಲಿ 94 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಇದುವರೆಗೂ 32 ಲಕ್ಷಕ್ಕೂ ಅಧಿಕ ಟೆಸ್ಟ್‌ಗಳನ್ನು ನಡೆಸಲಾಗಿದೆ.

Advertisement

ಇದೇ ವೇಳೆಯಲ್ಲೇ ಕೋವಿಡ್ ವಿರುದ್ಧದ ಲಸಿಕೆಯ ಸಂಶೋಧನೆ ಹಾಗೂ ರೋಗಿಗಳ ಮೇಲೆ ವಿವಿಧ ಔಷಧಿಗಳ ಪ್ರಯೋಗದಲ್ಲೂ ಅಮೆರಿಕವೇ ಎಲ್ಲ ದೇಶಗಳಿಗಿಂತಲೂ ಮುಂದಿದೆ. ಒಂದು ವಾದವೆಂದರೆ, ಈ ರೀತಿ ರೋಗಿಗಳ ಮೇಲಿನ ಪ್ರಯೋಗಗಳಿಂದಾಗಿಯೇ ಅಲ್ಲಿ ಮರಣ ಪ್ರಮಾಣ ಅಧಿಕವಾಗುತ್ತಿದೆ ಎನ್ನುವುದು!

ಅತ್ತ ಟ್ರಂಪ್‌ ಕೂಡ ತಾವು ಕೆಲ ಸಮಯದಿಂದ ಹೈಡ್ರಾಕ್ಸಿಕ್ಲೊರೊಕ್ವಿನ್‌ ಔಷಧವನ್ನು ಮುನ್ನೆಚ್ಚರಿಕೆಯಾಗಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಆ ದೇಶದ ತಜ್ಞರಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್‌ ಪ್ರಯೋಜನಕಾರಿಯೆಂದು ಸಾಬೀತಾಗಿಲ್ಲ, ಅದು ಹಾನಿ ಮಾಡಬಲ್ಲದು ಎಂಬುದು ಅಲ್ಲಿನ ತಜ್ಞರ ವಾದ. ಆದರೆ ಇದನ್ನು ಭಾರತದಲ್ಲೂ ಮುನ್ನೆಚ್ಚರಿಕೆಯಾಗಿ ಆರೋಗ್ಯ ವಲಯದ ನಿರ್ದಿಷ್ಟ ವರ್ಗ ಬಳಸುತ್ತಿದೆ.

ಸ್ಪೇನ್‌, ಇಟಲಿಯಂಥ ಐರೋಪ್ಯ ರಾಷ್ಟ್ರಗಳಲ್ಲಿ ಕೋವಿಡ್ ಉತ್ತುಂಗಕ್ಕೇರಿದಾಗಲೂ ಅಮೆರಿಕ ಎಚ್ಚೆತ್ತುಕೊಳ್ಳಲಿಲ್ಲ. ಅಂದಿನಿಂದ ಇಂದಿನವರೆಗೂ ಅಮೆರಿಕದ ನಾಗರಿಕರು ಲಾಕ್‌ಡೌನ್‌, ಸಾಮಾಜಿಕ ಅಂತರದ ನಿಯಮಗಳನ್ನು ಮುರಿಯುತ್ತಲೇ ಸಾಗಿದ್ದಾರೆ.

ಲಾಕ್‌ಡೌನ್‌ ತೆರವುಗೊಳಿಸುವಂತೆ ನಿರಂತರವಾಗಿ ಪ್ರತಿಭಟನೆಗಳೂ ವರದಿಯಾಗುತ್ತಲೇ ಇವೆ. ಖುದ್ದು ಟ್ರಂಪ್‌ ಕೂಡ ಏನೂ ಆಗಿಯೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಆದರೆ, ಅವರ ಈ ವರ್ತನೆಯ ಹಿಂದೆ, ಮುಂಬರುವ ಅಮೆರಿಕನ್‌ ಚುನಾವಣೆಗಳಿರಲೂಬಹುದು.

ಹೀಗಾಗಿ, ಅಷ್ಟೇನೂ ಭಯಾನಕ‌ ಸ್ಥಿತಿ ಇಲ್ಲ ಎಂಬಂತೆ ವರ್ತಿಸುತ್ತಾ, ಜನರ ಗಮನವನ್ನು ಬೇರೆಡೆ ಸೆಳೆಯಲು ದಿನಕ್ಕೊಂದು ಅಸಂಬದ್ಧ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ, ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಅಲ್ಲಿನ ಒಟ್ಟು 17 ಲಕ್ಷ ಪ್ರಕರಣಗಳಲ್ಲಿ ಈಗಲೂ 11 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಷಮಿಸುವ ಸಾಧ್ಯತೆಯೂ ಇರುವುದರಿಂದ, ಜನರಿಗೆ ಭಯವಂತೂ ದೂರವಾಗಲಾರದು.

Advertisement

Udayavani is now on Telegram. Click here to join our channel and stay updated with the latest news.

Next