Advertisement

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

09:16 AM Apr 10, 2020 | Hari Prasad |

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಒಂದೇ ದಿನದಲ್ಲಿ 800ರ ಗಡಿಗೆ ಬಂದು ಮುಟ್ಟಿದ್ದು, ಸಾವಿನ ಸಂಖ್ಯೆ 164ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.  ಕೇಂದ್ರ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಬುಧವಾರ ಈ ಮಾಹಿತಿ ನೀಡಿದ್ದಾರೆ.

Advertisement

ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗಿನ 24 ಗಂಟೆಗಳಲ್ಲಿ 773 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 32 ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು, ಭಾರತದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 5,749 ಮಂದಿಯಿದ್ದು, ಇವರಲ್ಲಿ 70 ಜನರು ವಿದೇಶದವರಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ 402 ಜನರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು: ದೇಶದಲ್ಲಿ ಸೋಂಕಿತರು ಅತಿ ಹೆಚ್ಚು ಕಂಡುಬಂದಿರುವುದು ಮಹಾರಾಷ್ಟ್ರದಲ್ಲಿ ಎಂದ ಅಧಿಕಾರಿಗಳು, ಆ ರಾಜ್ಯದಲ್ಲಿ 1,135 ಜನರು ಸೋಂಕಿಗೊಳಗಾಗಿದ್ದಾರೆ. ಇನ್ನು, 738 ಸೋಂಕಿತರು ಇರುವ ತಮಿಳುನಾಡು ದ್ವಿತೀಯ ಸ್ಥಾನದಲ್ಲಿದ್ದು, 576 ಪ್ರಕರಣಗಳು ಇರುವ ದೆಹಲಿ ತೃತೀಯ ಸ್ಥಾನದಲ್ಲಿದೆ. 453 ಪ್ರಕರಣಗಳು ಇರುವ ತೆಲಂಗಾಣ ನಾಲ್ಕನೇ ಸ್ಥಾನದಲ್ಲಿದ್ದರೆ, 345 ಪ್ರಕರಣಗಳು ದಾಖಲಾಗಿರುವ ಕೇರಳ 5ನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸೋಂಕಿನ ಅಂಕಿ-ಅಂಶ ಆತಂಕಕಾರಿಯಲ್ಲ
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರು ಸಾವಿಗೀಡಾಗಿದ್ದಾರೆ. ಆದರೆ, ಈ ಅಂಕಿ-ಅಂಶ ಆತಂಕಕಾರಿಯೇನಲ್ಲ. ಏಕೆಂದರೆ, ಭಾರತದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್‌ನ (ಐಸಿಎಂಆರ್‌) ಮುಖ್ಯ ವಿಜ್ಞಾನಿ ಡಾ. ರಮಣ್‌ ಗಂಗಖೇಡ್ಕರ್‌ ತಿಳಿಸಿದ್ದಾರೆ.

ಒಂದೇ ದಿನದಲ್ಲಿ 32 ಸಾವು
ಮಂಗಳವಾರ – ಬುಧವಾರದ ಅವಧಿಯಲ್ಲಿ 32 ಸಾವು ಸಂಭವಿಸಿದ್ದು, ಸಾವಿನ ಪ್ರಮಾಣ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿ ಒಂದೇ ದಿನದಲ್ಲಿ 16 ಸಾವು ಸಂಭವಿಸಿದೆ. ದೆಹಲಿ, ಪಶ್ಚಿಮ ಬಂಗಾಳ, ಹರ್ಯಾಣ, ತಮಿಳುನಾಡಿನಲ್ಲಿ ತಲಾ 2 ಮತ್ತು ಆಂಧ್ರ ಪ್ರದೇಶದಲ್ಲಿ ಒಬ್ಬ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

15 ಜಿಲ್ಲೆ ಪೂರ್ತಿ ಶಟ್‌ಡೌನ್‌
ಕೋವಿಡ್ ಹಾಟ್‌ ಸ್ಪಾಟ್‌ಗಳೆಂದು ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶದ 15 ಜಿಲ್ಲೆಗಳನ್ನು ಸಂಪೂರ್ಣವಾಗಿ ಶಟ್‌ ಡೌನ್‌ ಮಾಡಲು ಅಲ್ಲಿನ ರಾಜ್ಯ ಸರಕಾರ ನಿರ್ಧರಿಸಿದೆ. ಏ.8ರ ಮಧ್ಯರಾತ್ರಿ 12ರಿಂದ ಏ. 13ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

ಹಾಗಾಗಿ, ಲಕ್ನೋ, ಆಗ್ರಾ, ಗಾಜಿಯಾಬಾದ್‌, ಗೌತಮಬುದ್ಧ ನಗರ (ನೋಯ್ಡಾ), ಕಾನ್ಪುರ, ವಾರಾಣಸಿ, ಶಾಮ್ಲಿ, ಮೀರತ್‌, ಬರೇಲಿ, ಬುಲಂದ್‌ಶಹರ್‌, ಫಿರೋಜಾಬಾದ್‌, ಮಹಾರಾಜ್‌ ಗಂಜ್‌, ಸೀತಾಪುರ್‌, ಸಹರಣ್‌ಪುರ್‌ ಹಾಗೂ ಬಸ್ತಿ ಜಿಲ್ಲೆಗಳು ಸಂಪೂರ್ಣವಾಗಿ ಶಟ್‌ಡೌನ್‌ ಆಗಲಿವೆ.

ಶಟ್‌ ಡೌನ್‌ ಅವಧಿಯಲ್ಲಿ ಯಾರೊಬ್ಬರಿಗೂ ಮನೆಗಳಿಂದ ಹೊರಬರಲು ಅವಕಾಶ ಇರುವುದಿಲ್ಲ. ಅಗತ್ಯವಸ್ತುಗಳ ಪೂರೈಕೆಯು ಅವರ ಮನೆ ಬಾಗಿಲಿಗೇ ಲಭ್ಯವಾಗಲಿದೆ. ಅಗತ್ಯ ಸೇವಾ ಸಿಬ್ಬಂದಿಗಳಿಗೆ ನೀಡಲಾಗಿರುವ ಕರ್ಫ್ಯೂ ಪಾಸ್‌ಗಳನ್ನೂ ಮತ್ತೂಮ್ಮೆ ಪರಿಶೀಲಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ಹೈಡ್ರೊಕ್ಲೋರೋಕ್ವಿನ್‌ ಕೊರತೆಯಿಲ್ಲ
ಕೋವಿಡ್ ಸೋಂಕನ್ನು ನಿಯಂತ್ರಣಕ್ಕೆ ತರಲು ಬಳಸಲಾಗುತ್ತಿರುವ ಹೈಡ್ರಾಕ್ಲೋರೋಕ್ವಿನ್‌ ಔಷಧದ ಕೊರತೆ ಭಾರತದಲ್ಲಿ ಎಲ್ಲಿಯೂ ಇಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಹೊಸದಿಲ್ಲಿಯಲ್ಲಿ ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌, “ದೇಶದಲ್ಲಿ ಹೈಡ್ರಾಕ್ಲೋರೋಕ್ವಿನ್‌ನ ಪ್ರಮಾಣವನ್ನು ಸತತವಾಗಿ ಪರಿಶೀಲಿಸಲಾಗುತ್ತಿದೆ. ಆ ಔಷಧ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.

ವಿಶ್ವಾದ್ಯಂತ 83,568 ಸಾವು
ದಿನಕಳೆದಂತೆ ಕೋವಿಡ್ ವಿವಿಧ ದೇಶಗಳಲ್ಲಿ ಸಾವಿರಾರು ಮಂದಿಯನ್ನು ಬಲಿಪಡೆದುಕೊಳ್ಳುತ್ತಿದ್ದು, ಬುಧವಾರ ಸಾವಿನ ಸಂಖ್ಯೆ 83,568ಕ್ಕೇರಿದೆ. 192 ದೇಶಗಳಲ್ಲಿ ಈ ವೈರಸ್ ಮಹಾಮಾರಿ ಅಬ್ಬರಿಸುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 14.38 ಲಕ್ಷ ಆಗಿದೆ. ಈ ಪೈಕಿ ಕನಿಷ್ಠ 2.75 ಲಕ್ಷ ಮಂದಿ ಚೇತರಿಕೆ ಕಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಅಮೆರಿಕದಲ್ಲಿ ಒಂದೇ ದಿನ 890 ಮಂದಿ ಸಾವಿಗೀಡಾಗಿದ್ದು, ಸ್ಪೇನ್‌ ನಲ್ಲಿ 757 ಮಂದಿ ಮೃತಪಟ್ಟಿದ್ದಾರೆ. ಸ್ಪೇನ್‌ ನಲ್ಲಿ ಈವರೆಗೆ 14,555 ಮಂದಿ ಸಾವನ್ನಪ್ಪಿದ್ದು, 1,46,690 ಮಂದಿಗೆ ಸೋಂಕು ದೃಢಪಟ್ಟಿದೆ. ಅತಿ ಹೆಚ್ಚು ಸಾವನ್ನು ಕಂಡಿರುವ ಇಟಲಿಯಲ್ಲಿ ಸಾವಿನ ಸಂಖ್ಯೆ ಬುಧವಾರ 17,127 ಆಗಿದ್ದು, ಸೋಂಕಿತರ ಸಂಖ್ಯೆ 1,35,586ಕ್ಕೇರಿದೆ.

ಇದೇ ವೇಳೆ, ಇರಾನ್‌ ನಲ್ಲೂ ಪರಿಸ್ಥಿತಿ ಗಂಭೀರವಾಗಿಯೇ ಇದ್ದು, 24 ಗಂಟೆಗಳ ಅವಧಿಯಲ್ಲಿ 121 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 1997 ಹೊಸ ಪ್ರಕರಣ ಪತ್ತೆಯಾಗಿದೆ. ಇಲ್ಲಿ ಒಟ್ಟು 3,993 ಮಂದಿ ಅಸುನೀಗಿದ್ದಾರೆ. ಜಗತ್ತಿನಲ್ಲೇ ಅತೀ ಹೆಚ್ಚು ಸಾವು-ನೋವನ್ನು ಕಂಡಿರುವ ಯುರೋಪ್‌ ನಲ್ಲಿ 7.50 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿಶ್ವದಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಅರ್ಧದಷ್ಟು ಐರೋಪ್ಯ ಒಕ್ಕೂಟದವರು.

Advertisement

Udayavani is now on Telegram. Click here to join our channel and stay updated with the latest news.

Next