ಚಿತ್ರದುರ್ಗ: ಕೋವಿಡ್ -19 ಸೋಂಕಿತರೆಲ್ಲಾ ಗುಣಮುಖರಾಗಿ ಬಿಡುಗಡೆ ಹೊಂದಿ ಕೋವಿಡ್ -19 ಮುಕ್ತ ಜಿಲ್ಲೆ ಎನ್ನಿಸಿಕೊಂಡ ಸಂಭ್ರಮ ಕೆಲ ಹೊತ್ತಿನಲ್ಲೇ ಮಾಯವಾಗಿದೆ.
ಚಳ್ಳಕೆರೆ ಕೋವಿಡ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಉತ್ತರ ಪ್ರದೇಶದ ಕಾರ್ಮಿಕರಿಗೆ ಚಿಕಿತ್ಸೆ ನೀಡಿದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ಬುಧವಾರವಷ್ಟೇ ಸೇರ್ಪಡೆಯಾಗಿದ್ದ ನೂತನ ಪೊಲೀಸ್ ಕಾನ್ಸ್‌ಟೇಬಲ್‌ಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬುಧವಾರ ನಡೆಸಿದ ಪರೀಕ್ಷೆಯಲ್ಲಿ ಪುರುಷ ಆರೋಗ್ಯ ಸಹಾಯಕರು, ಡಿ’ ಗ್ರೂಪ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಆದರೆ ರಾತ್ರಿ 9 ಗಂಟೆ ವೇಳೆಗೆ ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ ಇಬ್ಬರ ವರದಿಯೂ ನೆಗೆಟಿವ್ ಆಗಿತ್ತು. ಆದರೂ ಇಬ್ಬರನ್ನು ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಇಬ್ಬರಿಗೂ ಮತ್ತೊಮ್ಮೆ ಪರೀಕ್ಷೆ ನಡೆಸಿ ಮತ್ತೆ ನೆಗೆಟಿವ್ ವರದಿ ಬಂದರೆ ಶುಕ್ರವಾರ ಬಿಡುಗಡೆ ಮಾಡುತ್ತೇವೆ ಎಂದು ಡಿಎಚ್‌ಒ ಡಾ. ಪಾಲಾಕ್ಷ ತಿಳಿಸಿದ್ದಾರೆ.
ಇನ್ನೊಂದೆಡೆ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ಬುಧವಾರವಷ್ಟೇ ಸೇರ್ಪಡೆಯಾಗಿದ್ದ ನೂತನ ಪೊಲೀಸ್ ಕಾನ್ಸ್‌ಟೇಬಲ್‌ಗೂ ಕೋವಿಡ್ ಸೋಂಕು ತಗುಲಿದೆ. ಕೋಲಾರ ಜಿಲ್ಲೆ ಕೆಜಿಎಫ್ ಮೂಲದ ಇವರನ್ನು ತರಬೇತಿಗೆ ಕಳುಹಿಸುವ ಮುನ್ನ ಆಯ್ಕೆಯಾದವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಬುಧವಾರ ಬಂದ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಬಂದ ಮಾಹಿತಿ ಆಧರಿಸಿ ಧರ್ಮಪುರ ಕೋವಿಡ್ ಹೆಲ್ತ್‌ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ಕೋವಿಡ್ ಪರೀಕ್ಷೆ ವರದಿ ಬರುವ ಮೊದಲೇ ಐಮಂಗಲ ಪೊಲೀಸ್ ತರಬೇತಿ ಕೇಂದ್ರಕ್ಕೆ ಕಳುಹಿಸಿದ ಪರಿಣಾಮ ಚಿತ್ರದುರ್ಗ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಕಾನ್ಸ್‌ಟೇಬಲ್ ಜೊತೆಗಿದ್ದ 14 ಜನರನ್ನು ಜವನಗೊಂಡನಹಳ್ಳಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ತರಬೇತಿಗೆ ಕರೆತಂದಿದ್ದ ಬೆಂಗಳೂರಿನ ಎಎಸ್‌ಐ, ಚಾಲಕನನ್ನು ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ.