Advertisement

ಗರ್ಭಿಣಿಯರಿಗೂ ಲಸಿಕೆ? ಕೇಂದ್ರ ಆರೋಗ್ಯ ಇಲಾಖೆಯಿಂದ ಸುಳಿವು

09:39 PM Jun 21, 2021 | Team Udayavani |

ನವ ದೆಹಲಿ: ಶೀಘ್ರದಲ್ಲೇ ಗರ್ಭಿಣಿಯರಿಗೂ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ.

Advertisement

ಈಗಾಗಲೇ ಮಗುವಿಗೆ ಹಾಲುಣುಸುತ್ತಿರುವ ಬಾಣಂತಿಯರಿಗೆ ಲಸಿಕೆ ನೀಡಲಾಗುತ್ತಿದೆ. ಜತೆಗೆ ಕೊರೊನಾ ಮೂರನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೂ ಲಸಿಕೆ ನೀಡಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಮೇ 28ರಂದು ನಡೆದಿದ್ದ ರಾಷ್ಟ್ರೀಯ ರೋಗ ನಿರೋಧಕ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದು, ಇದು ಗರ್ಭಿಣಿಯರಿಗೂ ಲಸಿಕೆ ನೀಡಬಹುದು ಎಂದು ಶಿಫಾರಸು ಮಾಡಿದೆ. ಇದರಲ್ಲಿ ಪ್ರಮುಖವಾಗಿ ಚರ್ಚೆಯಾಗಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮಗಳಾಗಿದ್ದವು. ಸಾವಿನ ದರವೂ ಹೆಚ್ಚಿತ್ತು.

ಕೊವ್ಯಾಕ್ಸಿನ್‌ ನೀಡುವ ಸಾಧ್ಯತೆ
ಕೊವಿಶೀಲ್ಡ್‌ ಗಿಂತ ಕೊವ್ಯಾಕ್ಸಿನ್‌ ಅನ್ನೇ ನೀಡುವ ಸಾಧ್ಯತೆ ಹೆಚ್ಚಾಗಿದೆ. ಆಕ್ಸ್‌ಫ‌ರ್ಡ್‌-ಅಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್‌ನಲ್ಲಿ ರಕ್ತ ಬ್ಲಾಕ್‌ ಆಗುವ ಸಮಸ್ಯೆಗಳಿವೆ. ಆದರೆ, ಕೊವ್ಯಾಕ್ಸಿನ್‌ನಲ್ಲಿ ಇಂಥ ಯಾವುದೇ ಸಮಸ್ಯೆಗಳಿಲ್ಲ. ಹೀಗಾಗಿಯೇ ಇದನ್ನೇ ಆರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ :ಯೋಗದ ಮೂಲ ನೇಪಾಳವೇ ಹೊರತು, ಭಾರತ ಅಲ್ಲ : ಒಲಿ ಪ್ರಲಾಪ!

ಸೆಪ್ಟೆಂಬರ್‌-ಅಕ್ಟೋಬರ್‌ ನಲ್ಲಿ 3ನೇ ಅಲೆ
ಜುಲೈ ಅಂತ್ಯದ ವೇಳೆಗೆ ಕೊರೊನಾ ಎರಡನೇ ಅಲೆ ಮುಗಿಯಲಿದ್ದು, ಸೆಪ್ಟೆಂಬರ್‌- ಅಕ್ಟೋಬರ್‌ ನಲ್ಲಿ ಮೂರನೇ ಅಲೆಯ ಗರಿಷ್ಠ ಮಟ್ಟ ಕಾಣಿಸಬಹುದು ಎಂದು ಐಐಟಿ ಕಾನ್ಪುರ ನಡೆಸಿರುವ ಅಧ್ಯಯನದಲ್ಲಿ ಬಹಿರಂಗವಾಗಿದೆ. ಆದರೆ, ಲಸಿಕೆ ನೀಡುವ ಪ್ರಮಾಣ ಹೆಚ್ಚಳ ಮಾಡಿದಲ್ಲಿ ಕೊರೊನಾ 3ನೇ ಅಲೆ ಹೆಚ್ಚು ಬಾಧಿಸದು ಎಂದು ಇದರಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಲಾಗಿದೆ.

Advertisement

ಲಸಿಕೆ ಬಗ್ಗೆ ಭಯ ಬೇಡ
ಲಸಿಕೆ ತೆಗೆದುಕೊಂಡರೆ ಪುರುಷ ಮತ್ತು ಮಹಿಳೆಯರಲ್ಲಿ ಮಕ್ಕಳಾಗುವ ಸಮಸ್ಯೆಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇಂಥ ಸುದ್ದಿಗಳನ್ನು ನಂಬದಿರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೆಲವು ಮಾಧ್ಯಮಗಳಲ್ಲಿ ಇಂಥದ್ದೊಂದು ವರದಿ ಬರುತ್ತಿದೆ. ಆದರೆ, ಇದರಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಎಂದೂ ಹೇಳಿದೆ.

2ನೇ ಅಲೆ ಹೋಗಿಲ್ಲ
ದೇಶದಲ್ಲಿ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಜನ ಮೈಮರೆಯಬಾರದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಸೋಮವಾರ ದೇಶದಲ್ಲಿ 53,256 ಸೋಂಕಿತರು ಪತ್ತೆಯಾಗಿದ್ದು, ಇದು ಕಳೆದ 88 ದಿನಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಹಾಗೆಯೇ ಪಾಸಿಟಿವಿಟಿ ದರವೂ ಶೇ.3.83ರಷ್ಟಕ್ಕೆ ಇಳಿದಿದೆ. ಇಡೀ ದೇಶಕ್ಕೆ ತೆಗೆದುಕೊಂಡರೆ ಮಾತ್ರ ಪಾಸಿಟಿವಿಟಿ ದರ ಕಡಿಮೆಯಿದೆ. ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಹೆಚ್ಚಿದೆ. ಅಲ್ಲದೆ, ಕೊರೊನಾ ವೇರಿಯಂಟ್‌ ಬದಲಾಗುವ ಸಾಧ್ಯತೆ ಇದ್ದು, ಎಚ್ಚರದಿಂದ ಇರಬೇಕಾಗಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next