ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಕೋವಿಡ್ 19 ಸ್ಫೋಟ ಮುಂದುವರಿದಿದ್ದು ಬುಧವಾರ ಒಂದೇ ದಿನ ಚಿಕ್ಕಬಳ್ಳಾಪುರ ನಗರದಲ್ಲಿ ಬರೋಬ್ಬರಿ 15 ಕೋವಿಡ್ -19 ಪ್ರಕರಣ ವರದಿಯಾದರೆ ಮತ್ತೂಂದಡೆ ಕೋವಿಡ್-19 ತುತ್ತಾಗಿದ್ದ ಮತ್ತಿಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮಂಗಳವಾರ ಜಿಲ್ಲೆಯಲ್ಲಿ 13 ಪ್ರಕರಣ ಕಂಡು ಬಂದಿದ್ದವು.
ಈಗ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಮಾತ್ರ ದಿನದಿಂದ ದಿನಕ್ಕೆ ಕೋವಿಡ್ 19 ಮುಂದುವರಿದಿದ್ದು ಹೊಸದಾಗಿ 15 ಪ್ರಕರಣ ದಾಖಲಾಗಿ ಸೋಂಕಿತರ ಸಂಖ್ಯೆ 229ಕ್ಕೆ ತಲುಪಿದೆ. ಇನ್ನು ಬೆಂಗಳೂರಿನಿಂದ ಬಂದವರಲ್ಲಿಯೇ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ಇಬ್ಬರು ಸಾವು: ಜಿಲ್ಲೆಯಲ್ಲಿ ಕೋವಿಡ್-19ಗೆ ತುತ್ತಾಗಿದ್ದ ಗೌರಿಬಿದನೂರು 81 ವರ್ಷದ ವ್ಯಕ್ತಿ ಹಾಗೂ ಚಿಂತಾಮಣಿ ತಾಲೂಕಿನ ಉಪ್ಪರಪೇಟೆ 55 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ. ಇದುವರೆಗೂ ಕೋವಿಡ್-19ಗೆ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ 6ಕ್ಕೆ ತಲುಪಿದ್ದು ಕೋವಿಡ್ ಇಲ್ಲದೇ ಒಬ್ಬರು ಮೃತ ಪಟ್ಟಿದ್ದಾರೆ. ಮೃತ 6 ಮಂದಿ ಪೈಕಿ ಚಿಂತಾಮಣಿ 1, ಚಿಕ್ಕಬಳ್ಳಾಪುರ 3, ಗೌರಿಬಿದನೂರು ತಾಲೂಕಿನಲ್ಲಿ ಇಬ್ಬರು ಇದ್ದಾರೆ.
ಹೆಚ್ಚುತ್ತಿರುವ ಸೋಂಕು: ಜಿಲ್ಲಾಡಳಿತ ಹಲವು ದಿನಗಳ ಹಿಂದೆಯಷ್ಟೇ ಜಿಲ್ಲೆ ಕೋವಿಡ್ 19 ಮುಕ್ತವಾಗಿ ಹಸಿರು ವಲಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿತ್ತು. ಆದರೆ, ಹಲವು ದಿನಗಳಿಂದ ಈಚೆಗೆ ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. 229 ಸೋಂಕಿತರ ಪೈಕಿ ಚಿಂತಾಮಣಿ 16, ಚಿಕ್ಕಬಳ್ಳಾಪುರ 53, ಬಾಗೇಪಲ್ಲಿ 53, ಗೌರಿಬಿದನೂರು 96, ಶಿಡ್ಲಘಟ್ಟ ತಾಲೂಕಿನಲ್ಲಿ 11 ಪ್ರಕರಣ ದಾಖಲಾಗಿವೆ. ಈ ಪೈಕಿ 169 ಮಂದಿ ಡಿಸ್ಚಾರ್ಜ್ ಆಗಿದ್ದು ಇನ್ನೂ 53 ಪ್ರಕರಣ ಸಕ್ರಿಯವಾಗಿವೆ.