ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಮತ್ತೆ ವಾಗ್ದಾಳಿಯನ್ನು ಮುಂದುವರಿಸಿದ್ದು, ಚೀನಾ ಬಳಿಕ ಇದೀಗ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೊದಲೇ ಎಚ್ಚರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ತಡೆ ಹಿಡಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಜಾಗತಿಕವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅಧಿಕ ಪ್ರಮಾಣದಲ್ಲಿ ಆರ್ಥಿಕ ನೆರವನ್ನು ನೀಡುವ ದೇಶವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿದೆ. ಹೀಗಾಗಿ ಕೋವಿಡ್ 19 ವೈರಸ್ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಶ್ವೇತ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ತಡೆ ಹಿಡಿಯುತ್ತೇವೆ. ನಾವು ಏನಾಗುತ್ತದೆ ಅಂತ ನೋಡುತ್ತೇವೆ ಎಂದು ಹೇಳಿದರು.
ಆದರೆ ವಿಶ್ವಸಂಸ್ಥೆಗೆ ಎಷ್ಟು ಪ್ರಮಾಣದ ಹಣವನ್ನು ತಡೆ ಹಿಡಿಯಲಾಗುವುದು ಎಂಬ ಬಗ್ಗೆ ವಿವರ ನೀಡಿಲ್ಲ. ಏತನ್ಮಧ್ಯೆ ಇದೇ ಸುದ್ದಿಗೋಷ್ಠಿಯಲ್ಲಿ ಟ್ರಂಪ್, ನಾನು ತಡೆ ಹಿಡಿದಿದ್ದೇನೆ ಎಂದು ಹೇಳಿಲ್ಲ, ತಡೆಹಿಡಿಯುವುದಾಗಿ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.
ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈಗಾಗಲೇ ವಿಶ್ವಸಂಸ್ಥೆ ಚೀನಾ ಪರ ಎಂಬುದಾಗಿ ಟ್ವೀಟರ್ ನಲ್ಲಿ ಟ್ರಂಪ್ ಆರೋಪಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಹಲವು ವಿಷಯಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಪ್ಪನ್ನು ಎಸಗಿದೆ. ಕೋವಿಡ್ ವೈರಸ್ ಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಬಳಿ ಮೊದಲೇ ಸಾಕಷ್ಟು ಮಾಹಿತಿಗಳು ಇದ್ದಿದ್ದವು. ಆದರೆ ಅದು ಚೀನಾ ಪರವಾಗಿದ್ದರಿಂದ , ವಿಷಯವನ್ನು ಮುಚ್ಚಿಟ್ಟಿತ್ತು. ನಮಗೆ ಒಂದು ತಿಂಗಳು ಮೊದಲೇ ವೈರಸ್ ಬಗ್ಗೆ ಮಾಹಿತಿ ನೀಡಬಹುದಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ.