ವಿಜಯಪುರ: ಕೋವಿಡ್ 19 ಬಾಧೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮೇಲೆ ಕರಿ ನೆರಳು ಬೀರಿದೆ. ಲಾಕ್ ಡೌನ್‌ನಿಂದಾಗಿ ಅನ್ಯ ರಾಜ್ಯ ಹಾಗೂ ವಿದೇಶಗಳಿಗೆ ರಫ್ತಾಗಲು ಸಿದ್ಧವಾಗಿದ್ದ ಹತ್ತಾರು ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸಾಗಾಟ ಸಮಸ್ಯೆಯಿಂದ ಗೋದಾಮಿನಲ್ಲಿ ಸಿಹಿಯ ಬದಲು ಕಹಿಯಾಗತೊಡಗಿದೆ.
ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಎರಡು ಸಹಕಾರಿ ಹಾಗೂ 6 ಖಾಸಗಿ ಮಾಲೀಕತ್ವದ ಕಾರ್ಖಾನೆಗಳು ಸೇರಿದಂತೆ 8 ಕಾರ್ಖಾನೆಗಳು ಸಕ್ಕರೆ ಉತ್ಪಾದಿಸುತ್ತವೆ. ಕೋವಿಡ್ 19 ಭೀತಿ ಆವರಿಸುತ್ತಲೇ ಮಾ. 31ರ ವರೆಗೆ ಸರ್ಕಾರ ನಿರ್ಬಂಧ ಹೇರುತ್ತಲೇ ಕಾರ್ಖಾನೆಗಳ ಸಿಬ್ಬಂದಿ-ಕಾರ್ಮಿಕರು ಮನೆ ಸೇರಿದ್ದರು. ಈ ಹಂತದಲ್ಲೇ ಕೇಂದ್ರ ಸರ್ಕಾರ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿರುವುದು ಸಕ್ಕರೆ ಕಾರ್ಖಾನೆ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಲಾಕ್‌ಡೌನ್‌ನಿಂದ ಅಗತ್ಯ ವಸ್ತುಗಳ ಸರಬರಾಜು ವಾಹನ ಸಂಚಾರಕ್ಕೆ ನಿರ್ಬಂಧ ಇಲ್ಲ ಎಂದು ಸರ್ಕಾರಗಳು ಹೇಳಿವೆ. ಆದರೂ ಪೊಲೀಸರು ವಾಹನಗಳ ಚಾಲಕರ ಮೇಲೆ ಲಾಠಿ ಪ್ರಯೋಗ ಮಾಡುವ, ದೈಹಿಕವಾಗಿ ಹಲ್ಲೆ ಮಾಡುವ ಪ್ರಕರಣಗಳಿಂದಾಗಿ ಸರಕು ಸಾಗಾಣಿಕೆ ಮಾಲೀಕರು ತಮ್ಮ ವಾಹನಗಳನ್ನು ಮೂಲೆ ಸೇರಿಸಿದ್ದಾರೆ. ಇದಲ್ಲದೇ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಬಾರ್ಡರ್ ಸೀಲ್ ಹಾಕಿದ್ದು, ಜಿಲ್ಲೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಗಳಲ್ಲಿ ಕಲ್ಲು-ಮುಳ್ಳುಗಳ ರಾಶಿಹಾಕಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಜಿಲ್ಲೆಯಲ್ಲಿ ಈ ವರ್ಷ 8 ಸಕ್ಕರೆ ಕಾರ್ಖಾನೆಗಳು ಉತ್ಪಾದನೆ ನಡೆಸಿದ್ದು, ಸುಮಾರು 24 ಸಾವಿರ ಮೆಟ್ರಿಕ್ ಟನ್ ಸಕ್ಕರೆ ದಾಸ್ತಾನಿದೆ. ಇದಲ್ಲದೇ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ಹೆಚ್ಚುವರಿಯಾಗಿ ಸುಮಾರು 11 ಸಾವಿರ ಮೆಟ್ರಿಕ್ ಟನ್ (ಬಫರ್ ಸ್ಟಾಕ್) ಸಕ್ಕರೆ ದಾಸ್ತಾನಿದೆ. ಕಾಪು ದಾಸ್ತಾನು ಹೊರತುಪಡಿಸಿ ಸಕ್ಕರೆ ಕಾರ್ಖಾನೆ ಮಾಲೀಕರು ಮಾರಿಕೊಳ್ಳಲು ಅವಕಾಶ ಇರುವ 24 ಸಾವಿರ ಮೇಟ್ರಿಕ್ ಟನ್ ಸಕ್ಕರೆ ಸಾಗಾಟಕ್ಕೆ ಲಾಕ್ ಡೌನ್ ಸಂಕಷ್ಟ ತಂದೊಡ್ಡಿದ್ದು, ಇತ್ತ ಸರಕು ಲೋಡ್ ಮಾಡಲು ಸಿಬ್ಬಂದಿ ಸಹ ಲಭ್ಯ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತಿರುವ ಸಕ್ಕರೆಗೆ ವಿದೇಶದಲ್ಲೂ ಬೇಡಿಕೆ ಇದ್ದು, ಜಾಗತಿಕ ಮಟ್ಟದಲ್ಲಿ ಕೋವಿಡ್ 19 ದಾಳಿಯಿಂದಾಗಿ ರಫ್ತಿಗೂ ಕೊಕ್ಕೆ ಬಿದ್ದಿದೆ.
ಭಾರತದ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಗೂ ಸಕ್ಕರೆ ಸಾಗಾಣಿಕೆ ಮಾಡಲು ಲಾರಿ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಸಕ್ಕರೆ ಮಾಲೀಕರು ಅನುಭವಿಸುತ್ತಿರುವ ಈ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಲಾಕ್‌ಡೌನ್ ಆದೇಶದ ಪರಿಣಾಮ ಮನೆಯಲ್ಲೇ ಉಳಿಯಿರಿ ನಿಯಮದಿಂದ ಊರುಗಳಿಗೆ ತೆರಳಿರುವ ಕಾರ್ಖಾನೆಗಳ ಸಿಬ್ಬಂದಿ-ಕಾರ್ಮಿಕರನ್ನು ಕರೆಸಿಕೊಳ್ಳುವ ಕುರಿತು ಚಿಂತನೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಸದರಿ ಸಿಬ್ಬಂದಿಗೆ ಹಾಗೂ ಲಾರಿ ಚಾಲಕ-ಸಹಾಕರಿಗೆ ಕೋವಿಡ್ 19 ಲಾಕ್‌ಡೌನ್ ವಿನಾಯ್ತಿಯ ಸರಕು ಸಾಗಾಟದ ವಾಹನಗಳಿಗೆ ವಿಶೇಷ ಪಾಸ್ ನೀಡಲು ಯೋಜನೆ ರೂಪಿಸಲಾಗಿದೆ.
ಇಂಥ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಲು ಮಾ.30 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ಕರೆದಿದೆ. ಸದರಿ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಸಮಸ್ಯೆಗಳ ಸರಮಾಲೆಯನ್ನು ನಿವೇದಿಸಿಕೊಳ್ಳುವ ಸಾಧ್ಯತೆ ಇದೆ.
-ಜಿ.ಎಸ್.ಕಮತರ