ಬೀದರ: ದೇಶದಲ್ಲಿ ಸಾವಿನ ರಣಕೇಕೆ ಹಾಕುತ್ತ ವಿವಿಧ ಕ್ಷೇತ್ರಗಳಿಗೆ ಬಿಸಿ ಮುಟ್ಟಿಸಿರುವ ಕೋವಿಡ್ 19 ಸೋಂಕು ಇದೀಗ ಕೃಷಿ ಕ್ಷೇತ್ರದೆಡೆಗೆ ತನ್ನ ಕಬಂಧ ಬಾಹುವನ್ನು ಚಾಚಿದೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ರೈತರನ್ನು ಸಂತ್ರಸ್ತರನ್ನಾಗಿಸಿದೆ.
ಹೌದು, ಕೋವಿಡ್ 19 ವೈರಸ್‌ನಿಂದ ಜನ ಜೀವನದ ಮೇಲಷ್ಟೇ ಅಲ್ಲ ಕೈಗೆ ಬಂದ ಬೆಳೆಗಳಿಗೂ ಕೆಟ್ಟ ಪರಿಣಾಮ ಬೀರಿದೆ. ಪ್ರಮುಖವಾಗಿ ತೋಟಗಾರಿಕೆ ಫಸಲಿಗೆ ಹಾನಿಯಾಗುತ್ತಿದೆ. ಒಂದು ಕಡೆ ಮಾರುಕಟ್ಟೆ ಬಂದ್ ಮತ್ತು ಸಾಗಣೆ ಸೌಲಭ್ಯ ಇಲ್ಲದಿರುವುದು ಮತ್ತೂಂದೆಡೆ ಫಸಲು ಉಳಿಸಿಕೊಳ್ಳಲಾಗದ ಸ್ಥಿತಿ. ಇದರಿಂದ ರೈತರು ತೀವ್ರ ನಷ್ಟದ ಭೀತಿಗೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ, ಕಲ್ಲಂಗಡಿ, ಪಪ್ಪಾಯಮತ್ತು ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಬೆಳೆಗಳನ್ನು ಬೆಳೆಯಲಾಗಿದ್ದು, ಸದ್ಯ ಕಟಾವು ಹಂತಕ್ಕೆ ಬಂದಿವೆ. ಬೀದರ ಗಡಿ ಜಿಲ್ಲೆಯಾಗಿರುವುದರಿಂದ ಇಲ್ಲಿ ಬೆಳೆದ ಹಣ್ಣುಗಳನ್ನು ಬೀದರ ಬಿಟ್ಟರೇ ಹೈದ್ರಾಬಾದ್ ಮತ್ತು ಸೊಲ್ಲಾಪುರಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಲಾಕ್ ಡೌನ್‌ದಿಂದ ದೇಶವೇ ಸ್ತಬ್ಧವಾಗಿ ಅಂತರ ರಾಜ್ಯ ಗಡಿಗಳ ಸಂಚಾರ ರದ್ಧತಿಯಿಂದ ಸಾಗಣೆ ಸೌಲಭ್ಯ ಆಗುತ್ತಿಲ್ಲ. ಜತೆಗೆ ಜಿಲ್ಲೆಯಲ್ಲೂ ಮಾರುಕಟ್ಟೆ ವ್ಯವಸ್ಥೆ ಇಲ್ಲ, ತಳ್ಳು ಗಾಡಿ ಮೇಲೆ ವ್ಯಾಪಾರ ನಡೆದಿದೆ.
ಹಾಗಾಗಿ ಈ ಬಾರಿ ಉತ್ತಮ ಇಳುವರಿ, ಬೆಲೆಯಿದ್ದರೂ ಸಹ ಬೆಳೆಗೆ ಬೇಡಿಕೆ ಇಲ್ಲದಂತಾಗಿದೆ. ಬೀದರ, ಬಸವಕಲ್ಯಾಣ ಮತ್ತು ಹುಮನಾಬಾದ್ ತಾಲೂಕಿನ ವಿವಿಧೆಡೆ ಹೆಚ್ಚು ತೋಟಗಾರಿಕೆ ಬೆಳೆಗಳು ಬೆಳೆಯಲಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಫಸಲು ಹೊಲದಲ್ಲಿಯೇ ಕೊಳೆತು ಮಣ್ಣು ಸೇರುತ್ತಿವೆ.
ಜಿಲ್ಲೆಯಲ್ಲಿ ತೋಗಾರಿಕೆ ಮತ್ತು ಕೃಷಿ ಫಸಲಿನ ಕಟಾವು ಈಗಾಗಲೇ ಮುಗಿದಿದೆ. ಆದರೆ, ಲಾಕ್‌ಡೌನ್‌ದಿಂದ ಮಾರುಕಟ್ಟೆ ಸೌಲಭ್ಯವಿಲ್ಲದೇ ಫಸಲು ಸಾಗಿಸಲು ಆಗುತ್ತಿಲ್ಲ. ಉತ್ತಮ ಬೆಳೆ, ಬೆಲೆ ಇದ್ದರೂ ಸಹ ರೈತರು ಸಂತ್ರಸ್ತರಾಗಿದ್ದಾರೆ. ಸರ್ಕಾರ ಇತ್ತ ಗಮನ ಹರಿಸಿ ಮಾರುಕಟ್ಟೆಗೆ ಅಗತ್ಯ ವ್ಯವಸ್ಥೆ ಮತ್ತು ಬೆಳೆ ಹಾಳಾದರೆ ವೈಜ್ಞಾನಿಕ ಪರಿಹಾರ ನೀಡಬೇಕು
. -ಮಲ್ಲಿಕಾರ್ಜುನ ಸ್ವಾಮಿ, ಗೌರವಾಧ್ಯಕ್ಷ, ರೈತ ಸಂಘ.
-ಶಶಿಕಾಂತ ಬಂಬುಳಗೆ