ಕುಷ್ಟಗಿ: ಕೋವಿಡ್-19 ವ್ಯಾಪಿಸುವಿಕೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮ ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.
ಏ. 12ರವರೆಗೆ ನೋಂದಣಿ ಪ್ರಕ್ರಿಯೆ,ಏ. 24ರವರೆಗೆ ಖರೀದಿ ಪ್ರಕ್ರಿಯೆ ನಡೆಯಬೇಕಿದ್ದು, ಆದರೆ ಮಾರ್ಚ್ 22ರಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ನೋಂದಣಿ ಸ್ಥಗಿತಗೊಂಡಿದೆ. ಬೆಂಬಲ ಬೆಲೆಯ ಕಡಲೆ ನೋಂದಣಿ ಕೇಂದ್ರಗಳಾದ ಹನುಮಸಾಗರದಲ್ಲಿ 304, ತಾವರಗೇರಾದಲ್ಲಿ 780 ರೈತರ ಹೆಸರು ನೋಂದಣಿಯಾಗಿವೆ.
ಪ್ರಸ್ತುತ ಕೋವಿಡ್-19 ವೈರಸ್ ಹರಡುವಿಕೆ ನಿಯಂತ್ರಿಸಲು, ಲಾಕ್‌ಡೌನ್ ಜಾರಿಯಾಗಿದ್ದು, ಮಾ. 31ರವರೆಗೆ ತಾತ್ಕಾಲಿಕ ಸ್ಥಗಿತದ ಆದೇಶ ನೀಡಿದೆ. ಲಾಕ್‌ಡೌನ್ ಏ. 14ಕ್ಕೆ ಕೊನೆಗೊಳ್ಳುವ ಸಾಧ್ಯತೆಯೂ ಕಡಿಮೆ, ಇನ್ನಷ್ಟು ದಿನಗಳು ವಿಸ್ತಾರಗೊಳ್ಳುವ ಅನುಮಾನ ರೈತರಲ್ಲಿ ಆತಂಕ ಹೆಚ್ಚಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲೆಂದೇ ದಾಸ್ತಾನುಮಾಡಿಕೊಂಡಿರುವ ಕಡಲೆಯನ್ನು ಕೀಟಬಾಧೆ, ಇಲಿ, ಹೆಗ್ಗಣ ಕಾಟಗಳಿಂದ ನಿರ್ವಹಣೆ ಮಾಡುವುದು ಸವಾಲಾಗಿದೆ. ನೋಂದಣೆ ಮಾಡಿದ ಸಾವಿರಕ್ಕೂ ಅಧಿಕ ರೈತರು ಅತಂತ್ರ ಪರಿಸ್ಥಿತಿಯಲ್ಲಿ ಸರ್ಕಾರದ ಮುಂದಿನ ಕ್ರಮ ಏಪ್ರಿಲ್ 14ರ ನಂತರ ಯಾವ ಕ್ರಮ ಕೈಗೊಳ್ಳುವರೋ ಎನ್ನುವ ನಿರೀಕ್ಷೆ ರೈತರದ್ದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಡಲೆ ಖರೀದಿಸುವ ವ್ಯವಸ್ತೆಯಾಗಬೇಕು. ಇದರಿಂದ ಕಡಲೆ ಕೆಡದಂತೆ ಇಡಲು ಸಾಧ್ಯವಾಗಲಿದೆ ಎನ್ನುವ ಅಭಿಪ್ರಾಯ ರೈತರದ್ದಾಗಿದೆ.
ಈ ಪರಿಸ್ಥಿತಿಯಲ್ಲಿ ಕಡಲೆ ಬೆಳೆ ನೋಂದಣಿಯಾಗಿರುವ ರೈತರು ಇತ್ತ ಮಾರುವ ಹಾಗಿಲ್ಲ, ಬದಲಾದ ಪರಿಸ್ಥಿತಿಯಲ್ಲಿ ಹಣಕಾಸಿನ ಅಡಚಣೆಗೆ ಮಾರಾಟಕ್ಕೂ ಅವಕಾಶವಿಲ್ಲದೇ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಗಿದೆ.
ಕೋವಿಡ್-19 ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬೆಂಬಲ ಬೆಲೆಯಡಿ ಕಡಲೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಏ. 14ರ ನಂತರ ಖರೀದಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಸರ್ಕಾರದ ಅದೇಶ ನಿರೀಕ್ಷಿಸಲಾಗುತ್ತಿದೆ.
–ಸಿದ್ದೇಶ ಎಂ., ತಹಶೀಲ್ದಾರ್