ಧಾರವಾಡ: ಕೋವಿಡ್ ಮಹಾಮಾರಿ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಹರಡುತ್ತಿದ್ದು, ಇದೀಗ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳ ಅವಲಂಬನೆ ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಜಿಲ್ಲೆಯ 22 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಶೇ.50 ಹಾಸಿಗೆಗಳನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿಡಲು ಸೂಚಿಸಿದೆ. ಆದರೆ ಕೋವಿಡ್ ಸೋಂಕು ತಗುಲಿದವರನ್ನು ಈವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗುತ್ತಿತ್ತು. ಇದೀಗ ಖಾಸಗಿ ಆಸ್ಪತ್ರೆಗಳತ್ತ ಸರ್ಕಾರ ಬೆರಳು ತೋರಿಸುತ್ತಿದ್ದು, ಅನೇಕ ಗೊಂದಲಕಾರಿ ಅಂಶಗಳು ಸಾರ್ವಜನಿಕರನ್ನು ಪೀಡಿಸುತ್ತಿವೆ.
ಕೋವಿಡ್-19 ತಗುಲಿದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಅದರ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಕೂಡ ಈಗಾಗಲೇ ಭರವಸೆ ನೀಡಿದೆ. ಆದರೂ ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ನಡೆದುಕೊಳ್ಳುವ ರೀತಿ ಕೊರೊನಾ ಸೋಂಕಿತರಲ್ಲಿ ಆತಂಕ ಮೂಡಿಸಿದೆ.
22 ಆಸ್ಪತ್ರೆಗಳು ಸಿದ್ಧ: ಜಿಲ್ಲೆಯಲ್ಲಿ 22 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ಕಾರ ಯೋಜಿಸಿ, ಆಸ್ಪತ್ರೆಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯಡಿ ಆಯ್ಕೆಯಾದ ಆಸ್ಪತ್ರೆಗಳೇ ಕೋವಿಡ್ ಚಿಕಿತ್ಸೆಗೆ ಬಳಕೆಯಾಗುತ್ತಿವೆ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು ಲಭ್ಯವಿರುವ ಹಾಸಿಗೆಗಳು 1750 ಮಾತ್ರ. ಈ ಪೈಕಿ ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟ ಹಾಸಿಗೆಗಳು ಬರೀ 440 ಇದ್ದು, ಇವು ಈಗಾಗಲೇ ಭರ್ತಿಯಾಗಿವೆ. ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅನಿವಾರ್ಯವಾಗಿದೆ. ಒಟ್ಟು 22 ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಅಂದಾಜು 1500 ಹಾಸಿಗೆಗಳಿದ್ದು, ಈ ಪೈಕಿ ಶೇ.50 ಎಂದರೆ ಸುಮಾರು 750 ಹಾಸಿಗೆಗಳನ್ನು ಶೀಘ್ರವಾಗಿಯೇ ಕೋವಿಡ್ ಚಿಕಿತ್ಸೆಗೆ ಪಡೆದುಕೊಳ್ಳ ಬಹುದಾಗಿದೆ. ಇನ್ನು ಹೆಚ್ಚುವರಿಯಾಗಿ ಕೋವಿಡ್ ಚಿಕಿತ್ಸೆಗಾಗಿಯೇ ಪತ್ರಿಯೊಂದು ಆಸ್ಪತ್ರೆಗೂ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತಿದೆ. ಅದೂ ಅಲ್ಲದೆ ವಿಶೇಷ ತಾತ್ಕಾಲಿಕ ಆಸ್ಪತ್ರೆಗಳನ್ನು ಕೂಡ ತೆರೆಯುವುದಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ನೇರವಾಗಿ ಹೋದರೆ ಬಿಲ್ ಕಟ್ಟಬೇಕು! : ಸರ್ಕಾರದ ಕೋವಿಡ್ ಪರೀಕ್ಷೆ ವ್ಯವಸ್ಥೆಯ ಮೂಲಕ ಹೋದವರಿಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಯಾರು ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆಯೋ ಅವರ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ. ಅದೂ ಅಲ್ಲದೇ ಸರ್ಕಾರ ಈ ವಿಚಾರದಲ್ಲಿ ಸಾರ್ವಜನಿಕರ ಪ್ರಾಮಾಣಿಕ ಸಹಭಾಗಿತ್ವ ಬಯಸುತ್ತಿದ್ದು, ಸಮಯಕ್ಕೆ ಸರಿಯಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸರ್ಕಾರಿ ಆಸ್ಪತ್ರೆಯ ಬಾಗಿಲು ತಟ್ಟಿದವರಿಗೆ ಖಂಡಿತವಾಗಿಯೂ ಉಚಿತವಾಗಿ ಚಿಕಿತ್ಸೆ ಲಭ್ಯವಾಗಲಿದೆ. ವಿಳಂಬವಾಗಿ ತಾವೇ ಖಾಸಗಿ ಆಸ್ಪತ್ರೆ ಬಾಗಿಲು ಬಡಿದರೆ ಅದನ್ನು ಆಯಾ ವ್ಯಕ್ತಿಗಳು ಭರಿಸಬೇಕು ಎನ್ನುತ್ತಿದ್ದಾರೆ ಅಧಿಕಾರಿಗಳು.
ಮೊದಲು ನಮ್ಮನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದೀಗ ನೀವು ಬಿಪಿಎಲ್ ಕಾರ್ಡ್ ಹೊಂದಿದ್ದೀರಾ ಎಂದು ಕೇಳುತ್ತಿದ್ದಾರೆ. ನಮ್ಮ ಬಳಿ ಬಿಪಿಎಲ್ ಕಾರ್ಡ್ ಇಲ್ಲ. ಹಾಗಿದ್ದರೆ ನಾವು ಆಸ್ಪತ್ರೆಯ ವೆಚ್ಚವನ್ನು ಭರಿಸಬೇಕೆ? ಈ ಸಮಸ್ಯೆಯನ್ನು ಯಾರಿಗೆ ಹೇಳ್ಳೋದು
–ರಾಧಿಕಾ, ಕೋವಿಡ್ ಸೋಂಕಿತೆ (ಹೆಸರು ಬದಲಿಸಲಾಗಿದೆ)
ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 250ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಇನ್ನಷ್ಟು ಹಾಸಿಗೆಗಳು ಸಿದ್ಧಗೊಳ್ಳುತ್ತವೆ. ಸರ್ಕಾರದ ವ್ಯವಸ್ಥೆಯಡಿ ಚಿಕಿತ್ಸೆಗೆ ಬರುವ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
–ನಿತೇಶ ಪಾಟೀಲ, ಜಿಲ್ಲಾಧಿಕಾರಿ
–ಬಸವರಾಜ ಹೊಂಗಲ್