Advertisement

ಕೋವಿಡ್ 19 ಭಯವಿಲ್ಲದೇ ಜನರ ಸಂಚಾರ!

02:59 PM Mar 25, 2020 | Team Udayavani |

ಮಂಡ್ಯ: ರಾಜ್ಯದಲ್ಲಿ ಕೋವಿಡ್ 19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ನಗರದೊಳಗೆ ಸಂಚಾರಕ್ಕಿಳಿದ ಜನರನ್ನು ಪೊಲೀಸರೇ ಮಧ್ಯಪ್ರವೇಶಿಸಿ ನಿಯಂತ್ರಿಸಿದರು.

Advertisement

ಯುಗಾದಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಜನರು ಬೆಳಗ್ಗೆಯೇ ಮುಗಿಬಿದ್ದಿದ್ದರು. ತರಕಾರಿ ಮಾರುಕಟ್ಟೆಯಲ್ಲಿ ನೂರಾರು ಜನರು ಜಮಾಯಿಸಿದ್ದರು. ಸಿಕ್ಕ ಸಿಕ್ಕ ಜಾಗದಲ್ಲೆಲ್ಲಾ ವಾಹನಗಳನ್ನು ನಿಲ್ಲಿಸಿ ಹಬ್ಬದ ಸಾಮಾನುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ರಸ್ತೆಗಿಳಿದ ಪೊಲೀಸರು: ನಗರದ ಪ್ರಮುಖ ರಸ್ತೆಗಳಲ್ಲಿ ಅನೇಕ ವರ್ತಕರು, ವ್ಯಾಪಾರಸ್ಥರು ಅಂಗಡಿ ಬಾಗಿಲುಗಳನ್ನು ತೆರೆದುಕೊಂಡು ವ್ಯಾಪಾರ ವಹಿವಾಟಿನಲ್ಲಿ ನಿರತರಾಗಿದ್ದರು. ಹಲವರು ರಸ್ತೆಗಳ ಬದಿಯಲ್ಲಿ ಅನಗತ್ಯವಾಗಿ ನಿಂತು ಚರ್ಚಿಸುತ್ತಿದ್ದರು. ನಗರದ ಸ್ಥಿತಿಯ ಪರಾಮರ್ಶೆ ನಡೆಸಿದ್ದರು.

ನಗರದೊಳಗೆ ಜನಸಂದಣಿ ಹೆಚ್ಚುತ್ತಿರುವುದನ್ನು ಕಂಡ ಪೊಲೀಸರು ವಾಹನಗಳ ಮೂಲಕ ರಸ್ತೆಗಿಳಿದರು. ಪ್ರಮುಖ ರಸ್ತೆಗಳಲ್ಲಿ ಸಂಚಾರ ನಡೆಸಿ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನೆಲ್ಲಾ ಮುಚ್ಚಿಸಲಾರಂಭಿಸಿದರು. ರಸ್ತೆಗಳು, ಉದ್ಯಾನವನಗಳಲ್ಲಿ ನಿಂತಿದ್ದ ಜನರನ್ನು ಗದರಿಸಿ ಅಲ್ಲಿಂದ ತೆರಳುವಂತೆ ಸೂಚನೆ ನೀಡಿದರು. ಬೇಕರಿಗಳು, ಔಷಧ ಅಂಗಡಿಗಳು, ಕ್ಲಿನಿಕ್‌ಗಳು, ದಿನಸಿ ಅಂಗಡಿಗಳು ಸೇರಿದಂತೆ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರಿರುವುದನ್ನು ಕಂಡ ಪೊಲೀಸರು ಆದಷ್ಟು ಬೇಗ ಜನರನ್ನು ಸ್ಥಳದಿಂದ ತೆರವುಗೊಳಿಸುವಂತೆ ಸೂಚಿಸಿದರಲ್ಲದೆ ಬೇಕರಿಗಳು, ದಿನಸಿ ಅಂಗಡಿಗಳನ್ನು ಬಂದ್‌ ಮಾಡಿಸಿದರು.

ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವಿರಳವಾಗಿದ್ದವು. ಬೆಳಗ್ಗೆ 11 ಗಂಟೆ ಸಮಯಕ್ಕೆ ರಸ್ತೆಗಳಲ್ಲಿ ಜನಸಂಚಾರವೂ ಕ್ಷೀಣಿಸಿತು. ಪೊಲೀಸರಿಗೆ ಹೆದರಿ ಹಲವಾರು ಜನರು ಮನೆ ಸೇರಿಕೊಂಡರು. ಇದರಿಂದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿ ಕಾಣಿಸುತ್ತಿದ್ದವು. ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದುದು ಕಂಡುಬಂದಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next