ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್-19 ಅನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರಲು ಹೋಂ ಕೇರ್ ಸೆಂಟರ್ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಈ ಬಗ್ಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಸಚಿವ ಸಂಪುಟ ಉಪ ಸಮಿತಿ ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ ಎಂದು ಉಪ ಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ತಾಲೂಕಿನ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಗ್ರಾಮಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮತ್ತೂಮ್ಮೆ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಜಾರಿಗೊಳಿಸುವ ಸಂದರ್ಭ, ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ಕೋವಿಡ್ 19 ತಡೆಗೆ ಹೋಮ್ ಕೇರ್ ಸೆಂಟರ್ ತೆರೆಯಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೆಂಟರ್‌ಗಳನ್ನು ತೆರೆದು ಕಿಟ್‌ಗಳನ್ನು ವಿತರಿಸಲಿದೆ.
ಕಡಿಮೆ ವಯಸ್ಸಿನ, ಯಾವುದೇ ಕಾಯಿಲೆ ಇಲ್ಲದ, ಕೋವಿಡ್ 19 ಸೋಂಕು ಇಲ್ಲದವರಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿ ಜು.1ರಂದೇ ಮಾರ್ಗಸೂಚಿ ಪ್ರಕಟಿಸಿದೆ ಎಂದರು. ಹೋಮ್ ಕೇರ್‌ನಲ್ಲಿ ಟೆಲಿ ಮೆಡಿಸಿನ್, ವಿಡಿಯೋ ಹಾಗೂ ಐವಿಆರ್ ಮೂಲಕ ಎಲ್ಲಾ ವೈದ್ಯಕೀಯ ಸೇವೆಗಳನ್ನು ನೀಡುವ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದು ವಿವರಿಸಿದರು. ಜಿಪಂ ಅಧ್ಯಕ್ಷ ಚಿಕ್ಕನರಸಿಂ ಹಯ್ಯ, ಎಸಿ ಆರತಿ ಆನಂದ್, ತಹಶೀಲ್ದಾರ್ ನಾಗಪ್ರಶಾಂತ್, ಡಿವೈಎಸ್‌ಪಿ ರವಿಶಂಕರ್, ಸತ್ಯಸಾಯಿ ಗ್ರಾಮದ ಸಂಜೀವಕರಾಯಶೆಟ್ಟಿ, ಗೋವಿಂದರೆಡ್ಡಿ ಮತ್ತಿತರರು ಇದ್ದರು.
ದೇಶದ ಬಗ್ಗೆ ಸಿದ್ದುಗೆ ದುರಭಿಮಾನ ಬೇಡ: ಭಾರತ ಹಾಗೂ ಚೀನಾ ಸಂಘರ್ಷಕ್ಕೆ ಕಾರಣವಾಗಿರುವ ಲಡಾಕ್‌ಗೆ ಪ್ರಧಾನಿ ಮೋದಿ ಹೋಗಿ ಸುಳ್ಳು ಹೇಳಿ ಬಂದಿದ್ದಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ, ಒಂದು ಕಡೆ ಚೀನಾ, ಮತ್ತೂಂದು ಕಡೆ ಪಾಕಿಸ್ತಾನದಂತಹ ಆತಂಕವಾದಿಗಳು ಇರುವ ಸಂದರ್ಭದಲ್ಲಿ ದೇಶ ಯಾವುದಕ್ಕೂ ತಗ್ಗಲ್ಲ,
ಬಗ್ಗಲ್ಲ ಎಂಬುದನ್ನು ತೋರಿಸಲು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಲಡಾಕ್‌ಗೆ ಹೋಗಿ ಬಂದಿದ್ದಾರೆ. ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನದಿಂದ ಒಪ್ಪಿಕೊಳ್ಳಬೇಕು. ದುರಭಿ ಮಾನ ತೋರಿಸಬಾರದೆಂದು ಹೇಳಿದರು. ಬಿಜೆಪಿಗೆ ದೇಶದ ಜನರ ಹಿತ ಮುಖ್ಯವೇ ಹೊರತು, ರಾಜಕೀಯ ಮುಖ್ಯವಲ್ಲ. ಇಂತಹ ಸಂದರ್ಭದಲ್ಲಿ ದೇಶದ ಜನ ಒಗ್ಗಟ್ಟನಿಂದ ದೇಶದ ಸಮಸ್ಯೆಗಳ ವಿರುದ್ಧ ಹೋರಾಡಬೇಕು ಎಂದರು.