Advertisement

ಮಂಗಳೂರು ನಗರಕ್ಕೂ ವಕ್ಕರಿಸಿದ ಕೋವಿಡ್ 19

01:17 AM Apr 28, 2020 | Sriram |

ಮಂಗಳೂರು: ಜಗತ್ತಿನಾದ್ಯಂತ ತಾಂಡವವಾಡುತ್ತಿರುವ ಮಹಾಮಾರಿ ಕೋವಿಡ್ 19 ಈಗ ಮಂಗಳೂರು ನಗರಕ್ಕೂ ವಕ್ಕರಿಸುವ ಮೂಲಕ, ನಗರ ವ್ಯಾಪ್ತಿಯ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸರಕಾರದ ಸೂಚನೆ ಧಿಕ್ಕರಿಸಿ ಲಾಕ್‌ಡೌನ್‌ ಉಲ್ಲಂಘಿಸಿ ಸುತ್ತಾಡುತ್ತಿದ್ದವರಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.

Advertisement

ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರ ನಿವಾಸಿ 80 ವರ್ಷದ ಮಹಿಳೆ ಹಾಗೂ ಅವರ 45 ವರ್ಷದ ಪುತ್ರನ ಗಂಟಲು ದ್ರವ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು, ಇವರಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ.

ಕೋವಿಡ್ 19 ದಲ್ಲಿ ಬಂಟ್ವಾಳ ಇತ್ತೀಚಿನವರೆಗೆ ಹಾಟ್‌ಸ್ಪಾಟ್‌ ಆಗಿತ್ತು. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕೋವಿಡ್ 19 ಸೋಂಕಿತರಿಬ್ಬರ ಸಾವು ಜಿಲ್ಲೆಯ ಪಾಲಿಗೆ ಸಾಕಷ್ಟು ಆತಂಕವನ್ನೇ ಸೃಷ್ಟಿಸಿತ್ತು. ಇದಕ್ಕೂ ಮೊದಲು ಮಂಗಳೂರು ಹೊರವಲಯದ ತೊಕ್ಕೊಟ್ಟಿನಲ್ಲೂ ಒಂದು ಪ್ರಕರಣ ಕಾಣಿಸಿಕೊಂಡಿತ್ತು.

(ಸದ್ಯ ಅವರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆ ಸೇರಿದ್ದಾರೆ). ಆದರೆ ಸೋಮವಾರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಕ್ತಿನಗರ ನಿವಾಸಿಗಳಿಬ್ಬರಲ್ಲಿ ಸೋಂಕು ದೃಢಪಡುವುದರೊಂದಿಗೆ ಮಂಗಳೂರು ನಗರಕ್ಕೂ ಸೋಂಕು ವ್ಯಾಪಿಸಿದಂತಾಗಿದೆ. ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶವನ್ನು ಕಂಟೈನ್‌ಮೆಂಟ್‌ ಝೋನ್‌ ಆಗಿ ಜಿಲ್ಲಾಡಳಿತ ನಿರ್ಬಂಧಿಸಿದೆ. ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ ಅವರು ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗಡಿ ಗುರುತು ಮಾಡಿದ್ದಾರೆ.

22 ಮನೆ ಪರಿಸರ ಸೀಲ್‌ಡೌನ್‌
ಶಕ್ತಿನಗರದ ಪದವು ಗ್ರಾಮದ ಕಕ್ಕೆಬೆಟ್ಟು ವ್ಯಾಪ್ತಿಯನ್ನು ಕಂಟೈನ್‌ಮೆಂಟ್‌ ಪ್ರದೇಶವಾಗಿ ಜಿಲ್ಲಾಡಳಿತ ಘೋಷಿಸಿದ್ದು, ಜನರ ಆಗಮನ-ನಿರ್ಗಮನವನ್ನು ನಿರ್ಬಂಧಿಸಿದೆ.

Advertisement

ಚಿತ್ತರಂಜನ್‌ ಮನೆಯಿಂದ ನೀಲಾಕ್ಷ ಮನೆ ವ್ಯಾಪ್ತಿಯವರೆಗೆ ಹಾಗೂ ತಿಪ್ಪೇಸಪ್ಪ ಮನೆಯಿಂದ ಗ್ರೌಂಡ್‌ವರೆಗಿನ ವ್ಯಾಪ್ತಿ ಕಂಟೈನ್‌ಮೆಂಟ್‌ ವ್ಯಾಪ್ತಿಯಾಗಿದ್ದು, ಇಲ್ಲಿ ಎಲ್ಲ ಚಟು ವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಈ ವ್ಯಾಪ್ತಿಯಲ್ಲಿ 22 ಮನೆಗಳಿದ್ದು, 5 ಅಂಗಡಿ, 1 ಕಚೇರಿ ಇದೆ. ಹಾಲು, ದಿನಸಿ ಸಹಿತ ಎಲ್ಲ ವಸ್ತುಗಳ ಮಾರಾಟ, ವಾಹನ, ಜನ ಸಂಚಾರಕ್ಕೆ ಇಲ್ಲಿ ನಿರ್ಬಂಧವಿದೆ. 120 ಜನರು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇಲ್ಲಿಂದ 5 ಕಿ.ಮೀ. ದೂರ (ವಾಮಂಜೂರು ಜಂಕ್ಷನ್‌, ಉರ್ವ ಮಾರ್ಕೆಟ್‌, ಪದವಿನಂಗಡಿ, ಬಂಟ್ಸ್‌ ಹಾಸ್ಟೆಲ್‌ ಜಂಕ್ಷನ್‌) ಬಫರ್‌ ಝೋನ್‌ ವ್ಯಾಪ್ತಿಯಾಗಿದೆ. ಮಂಗಳೂರು ಪಾಲಿಕೆ ಆಯುಕ್ತರನ್ನು ಇನ್ಸಿಡೆಂಟ್‌ ಕಮಾಂಡರ್‌ ಆಗಿ ಜಿಲ್ಲಾಧಿಕಾರಿ ನೇಮಿಸಿದ್ದು, ಕಂಟೈನ್‌ಮೆಂಟ್‌ ಪ್ರದೇಶದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಪಾಲಿಕೆಯಿಂದ ವ್ಯವಸ್ಥೆ
ಶಕ್ತಿನಗರದ ಪದವು ಗ್ರಾಮದ ಕಕ್ಕೆಬೆಟ್ಟು ವ್ಯಾಪ್ತಿಯನ್ನು ಕಂಟೈನ್‌ಮೆಂಟ್‌ ಪ್ರದೇಶವಾಗಿ ಘೋಷಿಸಲಾಗಿದೆ. ಇಲ್ಲಿನ ಸುಮಾರು 22 ಮನೆ ವ್ಯಾಪ್ತಿ ಪ್ರದೇಶಗಳಿಗೆ ನಿರ್ಬಂಧ ಅನ್ವಯವಾಗಲಿದೆ. ಅಲ್ಲಿನವರಿಗೆ ಹಾಲು, ದಿನಸಿ ಸಹಿತ ಅಗತ್ಯ ವಸ್ತುಗಳ ಪೂರೈಕೆಗೆ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಹೇಳಿದರು.

ಪುರಭವನದ ಆವರಣದಲ್ಲಿ ವಲಸೆ ಕಾರ್ಮಿಕರ ಉಚಿತ ಆರೋಗ್ಯ ಶಿಬಿರದಲ್ಲಿ ತಪಾಸಣೆಗೊಂಡ ಬಳಿಕ ಸೈಕಲ್‌ನಲ್ಲಿ ಸಂಬಂಧಿಯ ಸಹಾಯದಿಂದ ವಾಪಾಸಾಗುತ್ತಿರುವ ಹಿರಿಯ ಮಹಿಳೆ.

Advertisement

Udayavani is now on Telegram. Click here to join our channel and stay updated with the latest news.

Next