Advertisement

ಕೋವಿಡ್‌ 19 ಅಟ್ಟಹಾಸಕ್ಕೆ 7 ಸೋಂಕಿತರು ಬಲಿ

06:06 AM Jun 20, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ತನ್ನ ಅಟ್ಟಹಾಸ ಮುಂದುವರಿಸಿದ್ದು, ಶುಕ್ರವಾರ ದಾಖಲೆಯ 138 ಮಂದಿಗೆ ಸೋಂಕು ದೃಢಪಪಟ್ಟಿದ್ದು 7 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ 19 ಸೋಂಕಿತರ ಹಾಗೂ ಮೃತರ ಪ್ರಮಾಣ ದರ ಹೆಚ್ಚಾಗುತ್ತಿದ್ದು, ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ. ಪೀಣ್ಯ 2ನೇ ಹಂತದ 1 ವರ್ಷದ ಮಗು, 63 ವರ್ಷದ  ವ್ಯಕ್ತಿ, ವೀರಸಂದ್ರದ 49 ವರ್ಷದ ವ್ಯಕ್ತಿ, ಮಾರತಹಳ್ಳಿಯ 37 ವ್ಯಕ್ತಿ, ಬೊಮ್ಮನಹಳ್ಳಿಯ 39 ವರ್ಷದ ವ್ಯಕ್ತಿ,

Advertisement

ಕೆಂಗೇರಿಯ ನೇತಾಜಿ ಲೇಔಟ್‌ನ 39 ವರ್ಷದ ವ್ಯಕ್ತಿ ಹಾಗೂ 15 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರಿಗೆ  ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 982 ಸೋಂಕಿತರು ಪತ್ತೆಯಾಗಿದ್ದು, 531 ಜನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 8 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 36 ಜನರಿಗೆ ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ , ಕೋಲ್ಕತ್ತಾದಿಂದ ಬಂದವರಿಗೂ ಸೋಂಕು ಪತ್ತೆಯಾಗಿದ್ದು, ಮಂಡ್ಯ, ಮೈಸೂರು, ಹೊಸದುರ್ಗ, ವಿಜಯಪುರ  ಹಾಗೂ ಬೀದರ್‌ನಿಂದ  ಬೆಂಗಳೂರಿಗೆ ಪ್ರಯಾಣ ಮಾಡಿರುವವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬೆಸ್ಕಾಂ ಸಿಬ್ಬಂದಿಗೆ ಕೋವಿಡ್‌ 19: ಪ್ರಕಾಶ ನಗರದ ಬೆಸ್ಕಾಂ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಕ್ಯಾನ್ಸರ್‌ ರೋಗಿಗಳಿಗೆ ಕೋವಿಡ್‌ 19  ದೃಢಪಟ್ಟಿರುವ ಹಿನ್ನೆಲೆಯಲ್ಲಿ 7 ಮಂದಿ ವೈದ್ಯರು ಹಾಗೂ ನಸ್‌ ìಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. 28 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಈ  ವೇಳೆ ಕೋವಿಡ್‌ 19 ಪರೀಕ್ಷೆ ಮಾಡಲಾಗಿತ್ತು. ಶುಕ್ರವಾರ ಕೋವಿಡ್‌ 19 ಇರುವುದು ದೃಢಪಟ್ಟಿದೆ.

238 ಕಂಟೈನ್ಮೆಂಟ್‌ ವಲಯ: ಪ್ರತಿನಿತ್ಯ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದು, ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಶುಕ್ರವಾರ ಅಂತ್ಯಕ್ಕೆ 238 ಪ್ರದೇಶಗಳಲ್ಲಿ  ಕಂಟೈನ್ಮೆಂಟ್‌ ಜಾರಿಯಲ್ಲಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 902 ಮಂದಿ, ದ್ವಿತೀಯ ಸಂಪರ್ಕದಲ್ಲಿದ್ದ 1273 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ವಾರದಲ್ಲಿ ಮೃತರು ದ್ವಿಗುಣ: ಶಾಮಣ್ಣ ಗಾರ್ಡನ್‌, ಕತ್ರಿಗುಪ್ಪೆ, ವಿದ್ಯಾಪೀಠದಲ್ಲಿ ತಲಾ ಒಬ್ಬರು ಹಾಗೂ ವಿಜಯಪುರ ಮತ್ತು ಬೀದರ್‌ನಿಂದ ಬಂದಿದ್ದ ಇಬ್ಬರು ಕೋವಿಡ್‌ 19ಗೆ ಬಲಿಯಾಗುವ ಮೂಲಕ ಬೆಂಗಳೂರಿನಲ್ಲಿ 7 ಮಂದಿ  ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿನ ಸಾವಿನ ಸಂಖ್ಯೆಗೆ ಹೋಲಿಸಿದರೆ ಬೆಂಗಳೂರು ಅಗ್ರಸ್ಥಾನದಲ್ಲಿರುವುದು ಆತಂಕದ ಸಂಗತಿ. ವಾರದ ಹಿಂದೆ ನಗರದಲ್ಲಿ ಕೇವಲ 29 ಮಂದಿ ಸಾವನ್ನಪ್ಪಿದ್ದರು.  ವಾರದಲ್ಲಿ ಈ ಸಂಖ್ಯೆ ದ್ವಿಗುಣವಾಗಿರುವುದು ಆತಂಕಕಾರಿ ಬೆಳವಣಿಗೆ. ನಗರದ ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳು ಕೋವಿಡ್‌ 19 ಹಾಟ್‌ಸ್ಪಾರ್ಟ್‌ಗಳಾಗಿ ಮಾರ್ಪಟ್ಟಿದ್ದು, ಈ 3 ವಲಯಗಳಲ್ಲಿ ಸೋಂಕಿತರು, ಸೋಂಕಿನಿಂದ  ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದೆ.

Advertisement

58 ಮಂದಿ 35 ವರ್ಷದೊಳಗಿನವರು: ಯುವ ಜನತೆಗೂ ಕೋವಿಡ್‌ 19 ಹರಡುತ್ತಿದ್ದು, 138 ಸೋಂಕಿತರಲ್ಲಿ 58 ಮಂದಿ 35 ವರ್ಷದೊಳಗಿನವರು ಇದ್ದಾರೆ. ಅಚ್ಚರಿ ಎಂಬಂತೆ 1 ವರ್ಷದ 3 ಹೆಣ್ಣು ಮಕ್ಕಳಿಗೆ ಕೋವಿಡ್‌ 19 ಸೋಂಕು  ಹರಡಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ತೀವ್ರ ಉಸಿರಾಟ ತೊಂದರೆಗೆ ಒಳಗಾದ 29 ಮಂದಿ, ವಿಷಮ ಶೀತ ಜ್ವರ ಲಕ್ಷಣ ಇರುವ 34, ಕಂಟೈನ್ಮೆಂಟ್‌ ವಲಯದ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಬಿಎಂಟಿಸಿ: ಸೋಂಕಿತರು ಹೆಚ್ಚಳ: ಬಿಎಂಟಿಸಿ ಬಸ್‌ಗಳಲ್ಲಿ ಒಂದೆಡೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಸಿಬ್ಬಂದಿಯಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಶುಕ್ರವಾರ ಒಂದೇ ದಿನ ಐದು ಪ್ರಕರಣ ದೃಢಪಟ್ಟಿವೆ. ಇದು ಆತಂಕದ ಜತೆಗೆ ಅಧಿಕಾರಿಗಳಿಗೆ ತಲೆನೋವಾಗಿ  ಪರಿಣಮಿಸಿದೆ. ಇಂದಿರಾನಗರದಲ್ಲಿ ಇಬ್ಬರು ಸಂಚಾರ ನಿಯಂತ್ರಕರು ಹಾಗೂ ಇಬ್ಬರು ಸಹಾಯಕ ಸಂಚಾರ ನಿಯಂತ್ರಕರು ಮತ್ತು ಅಂಜನಾಪುರದಲ್ಲಿ ಒಬ್ಬ  ಚಾಲಕನಲ್ಲಿ ಕೋವಿಡ್‌ 19 ವೈರಸ್‌ ಕಾಣಿಸಿಕೊಂಡಿದೆ. ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು  ತಿಳಿಸಿವೆ.

ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೋವಿಡ್‌ 19?: ಕೋವಿಡ್‌ 19 ಶಂಕಿತ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವುದರಿಂದ ಪರೀಕ್ಷಾ ಕೇಂದ್ರದಲ್ಲಿದ್ದ ಬೇರೆ ವಿದ್ಯಾರ್ಥಿಗಳಲ್ಲೂ ಈಗ ಆತಂಕ ಸೃಷ್ಟಿಯಾಗಿದೆ ಮತ್ತು ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೇಲೂ ಇದರ ಕರಿನೆರಳು ಬಿದ್ದಿದೆ. ರಾಜಧಾನಿ ಪರೀಕ್ಷಾ ಕೇಂದ್ರವೊಂದರಲ್ಲಿ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿ ಕೋವಿಡ್‌ 19 ಶಂಕಿತರಾಗಿದ್ದರು. ಅವರ ಮನೆಯಲ್ಲಿ  ಕೋವಿಡ್‌ 19 ಸೋಂಕಿತರಿದ್ದರೂ, ನಿಖರವಾದ ಮಾಹಿತಿ ನೀಡಿದೇ ಕ್ವಾರಂಟೈನ್‌ ಸೀಲ್‌ ಅಳಿಸಿಕೊಂಡು ಬಂದು ಪರೀಕ್ಷೆ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next