ಧಾರವಾಡ: ದುಡಿಯಲು ಶಕ್ತಿ ಇದ್ದರೂ ಕೈಕಟ್ಟಿ ಕುಳಿತುಕೊಂಡಿದ್ದ ಕೂಲಿ ಕಾರ್ಮಿಕರ ಮುಖದಲ್ಲಿ ಇದೀಗ ಮಂದಹಾಸ ಮೂಡುತ್ತಿದೆ. ತಮ್ಮ ಹೊಲಗಳಲ್ಲಿಯೇ ಸಾಕಷ್ಟು ಕೆಲಸವಿದ್ದರೂ ಕೋವಿಡ್ 19 ಯಿಂದ 15 ದಿನಗಳ ಕಾಲ ಸ್ವಯಂ ಕ್ವಾರಂಟೈನ್‌ಗೆ ಒಳಗಾದ ರೈತ ಸಮೂಹ ಮುಂಗಾರು ಪೂರ್ವ ಮಳೆಗಾಗಿ ಕಾಯುತ್ತಿತ್ತು. ಈಗ ಮಳೆಯೂ ಬಿದ್ದಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಇದೀಗ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಸತತ ಬರಗಾಲ ಮತ್ತು ಬೆಳೆಹಾನಿಯಿಂದ ಸಂಕಷ್ಟಕ್ಕೊಳಗಾಗುವ ಹಳ್ಳಿಗರಿಗೆ ಸದಾ ಕಾಲ ತುತ್ತು ಅನ್ನ ನೀಡಿ ಕೈ ಹಿಡಿಯುವುದು ನರೇಗಾ ಯೋಜನೆ. ಕಳೆದ ತಿಂಗಳಿಂದ ಹೆಮ್ಮಾರಿ ಕೊರೊನಾ ರೈತ ಕೂಲಿ ಕಾರ್ಮಿಕರನ್ನು ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿಸಿತ್ತು. ಒಂದೆಡೆ ಊಟಕ್ಕೆ ತತ್ವಾರ, ಇನ್ನೊಂದೆಡೆ ಕೆಲಸವೂ ಇಲ್ಲ. ಇಂತಿಪ್ಪ ಸ್ಥಿತಿ ಅರಿತ ಸರಕಾರ ಕೊನೆಗೂ ಕೃಷಿ ಕೂಲಿ ಕಾರ್ಮಿಕರ ಬೆನ್ನಿಗೆ ನಿಂತು ನರೇಗಾ ಯೋಜನೆ ಅಡಿಯಲ್ಲಿ ಬರುವ ಎಲ್ಲಾ ಕಾಮಗಾರಿಗಳಿಗೂ ಮರು ಚಾಲನೆ ನೀಡಿದೆ. ಹೀಗಾಗಿ ಜಿಲ್ಲೆಯಾದ್ಯಂತ ನರೇಗಾ ಕೂಲಿ ಕಾಮಗಾರಿಗಳು ಮತ್ತೆ ಆರಂಭಗೊಂಡಿವೆ.
ಸುಸ್ಥಿರ ಕಾಮಗಾರಿಗಳಿಗೆ ಆದ್ಯತೆ: ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಕೃಷಿ ಸುಸ್ಥಿರ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನರೇಗಾ ಕೂಲಿ ಕಾರ್ಮಿಕರಿಂದ ಸುಸ್ಥಿರ ಕೃಷಿ, ಸುಸ್ಥಿರ ಮೀನುಗಾರಿಕೆ ಮತ್ತು ಸುಸ್ಥಿರ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚು ಒತ್ತು ನೀಡಲಾಗಿದೆ. ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಅರಣೀಕರಣಕ್ಕೆ ಗುಂಡಿಗಳನ್ನು ತೋಡುವುದು, ಕೃಷಿ ಹೊಂಡಗಳ ನಿರ್ಮಾಣ, ತೋಟಗಾರಿಕೆಗೆ ಅಗತ್ಯ ಗುಂಡಿ ತೋಡುವುದು, ಹಿಪ್ಪು ನೇರಳೆ ಬೆಳೆಗೆ ಗುಂಡಿಗಳ ನಿರ್ಮಾಣ, ಗ್ರಾಮಗಳ ರಸ್ತೆ ಬದಿ ಗಿಡ ನೆಡಲು ಗುಂಡಿ ತೋಡುವ ಕೂಲಿ ಕೆಲಸಗಳನ್ನು ಆರಂಭಿಸಲಾಗಿದೆ. ಇನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳು, ದನದ ಕೊಟ್ಟಿಗೆಗಳ ನಿರ್ಮಾಣ, ಮಳೆ ನೀರು ಕೊಯ್ಲುಗೆ ಸಂಬಂಧಿಸಿದ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಹೆಚ್ಚು ಒತ್ತು ನೀಡಿದೆ.
ಚಾಲ್ತಿಯಲ್ಲಿರುವ ಕಾಮಗಾರಿಗಳು: ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 1520 ಪ್ರಸ್ತಾವಿತ ಕಾಮಗಾರಿಗಳಿದ್ದು, ಅವುಗಳ ಎನ್‌ಎಂಆರ್ ಸಿದ್ಧಗೊಂಡಿದೆ. ಈ ಪೈಕಿ 1225 ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿವೆ. ತಾಲೂಕಾವಾರು ಕಲಘಟಗಿ ತಾಲೂಕಿನಲ್ಲಿ ಹೆಚ್ಚು ಕಾಮಗಾರಿಗಳು ಚಾಲ್ತಿಯಲ್ಲಿವೆ. ಧಾರವಾಡ-312, ಹುಬ್ಬಳ್ಳಿ-224, ಕಲಘಟಗಿ-319, ಕುಂದಗೋಳ-225, ನವಲಗುಂದ-135 ಕಾಮಗಾರಿಗಳು ಪ್ರಸ್ತುತ ಚಾಲನೆಯಲ್ಲಿವೆ.
ಉದ್ಯೋಗ ಒದಗಿಸಿದ ವಿವರ : ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ ಒಟ್ಟು 5051 ಕುಟುಂಬಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಒಟ್ಟು 29171 ಮಾನವ ದಿನಗಳ ಸೃಜನೆಯಾಗಿದ್ದು, 2166 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ನರೇಗಾ ಕೆಲಸದ ವೇಳೆ ಎಲ್ಲಾ ನಿಯಮಗಳನ್ನು ಕೂಲಿ ಕಾರ್ಮಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಕೂಲಿ ಕಾರ್ಮಿಕರಿಗೆ ಅಗತ್ಯವಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್- ಸ್ಯಾನಿಟೈಸರ್ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರಲ್ಲಿ ಕೋವಿಡ್ 19 ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ಕೊಟ್ಟು ಈ ಕುರಿತು ತಿಳಿವಳಿಕೆ ನೀಡಲಾಗಿದೆ. –
ಡಾ| ಸತೀಶ, ಸಿಇಒ, ಜಿಪಂ ಧಾರವಾಡ
-ಬಸವರಾಜ ಹೊಂಗಲ