Advertisement
ಇಟಲಿಗಿತ್ತು ಅತಿಯಾದ ಐರೋಪ್ಯ ಮೋಹಇಟಲಿಯ ರೋಮ್‌ನಲ್ಲಿ ಜನ್ಮತಳೆದ ಐರೋಪ್ಯ ಒಕ್ಕೂಟವು, ಇಟಲಿಯನ್ನರ ಬದುಕಿನ ಭಾಗವಾಗಿತ್ತು. ಏಕ ಮಾರುಕಟ್ಟೆ ವ್ಯವಸ್ಥೆ ಹಾಗೂ ಯುರೋದಿಂದಾಗಿ, ಇಟಲಿಯನ್ನರು ಮೊದಲಿನಿಂದ ಆರ್ಥಿಕವಾಗಿ ಬಹಳ ಲಾಭಪಡೆಯುತ್ತಾ ಬಂದಿದ್ದಾರೆ. ಇದರ ಫಲವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ 27ಲಕ್ಷಕ್ಕೂ ಅಧಿಕ ಇಟಲಿಯನ್ನರು ವಾಸಿಸುತ್ತಿದ್ದಾರೆ. 2018ರ ಪಿವ್ ಸಂಶೋಧನಾ ಅಧ್ಯಯನದ ವರದಿಯ ಪ್ರಕಾರ ಯುರೋಪಿಯನ್ ಒಕ್ಕೂಟ ಬಗ್ಗೆ 58 ಪ್ರತಿಶತ ಇಟಾಲಿಯನ್ನರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಈ ಸಂಖ್ಯೆ ಗಣನೀಯವಾಗಿ ತಗ್ಗಿರಬಹುದಾದ ಸಾಧ್ಯತೆ ಇದೆ. ಅಪಾಯದ ಸಂದರ್ಭದಲ್ಲಿ ನೆರವಿಗೆ ಬರದೇ, ಈಗ ಸಹಾಯಹಸ್ತ ಚಾಚಲು ಮುಂದಾಗುತ್ತಿರುವ ಈ ಒಕ್ಕೂಟದ ಬಗ್ಗೆ ಇಟಾಲಿಯನ್ನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯಕ್ಕೆ ಬಹುತೇಕ ಐರೋಪ್ಯ ರಾಷ್ಟ್ರಗಳೂ ತಮ್ಮ ಜನರನ್ನು, ಉದ್ಯೋಗಗಳನ್ನು, ಆರ್ಥಿಕತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿವೆಯಾದರೂ, ಬಹುತೇಕ ರಾಷ್ಟ್ರಗಳು ಇಟಲಿ, ಸ್ಪೇನ್ ಮತ್ತು ಫ್ರಾನ್ಸ್‌ನಷ್ಟು ಹಾನಿ ಅನುಭವಿಸಿಲ್ಲ. ಅಲ್ಲದೇ, ನೆದರ್‌ಲೆಂಡ್ಸ್ ಮತ್ತು ಜರ್ಮನಿಯಂಥ ರಾಷ್ಟ್ರಗಳು ಆರ್ಥಿಕವಾಗಿಯೂ ಅತ್ಯಂತ ಸಶಕ್ತವಾಗಿದ್ದು ಸಂತ್ರಸ್ತ ಮಿತ್ರ ರಾಷ್ಟ್ರಗಳಿಗೆ ಅಧಿಕ ಸಹಾಯ ಮಾಡಬಹುದಿತ್ತೇನೋ. ಸ್ಲೊವಾಕಿಯಾ, ಬಲ್ಗೇರಿಯಾ, ಜೆಕ್ ಗಣರಾಜ್ಯ, ಹಂಗರಿ, ರೊಮೇನಿಯಾ, ಪೋಲೆಂಡ್‌ನಂಥ ರಾಷ್ಟ್ರಗಳು ಕೋವಿಡ್-19 ದಿಂದಾಗಿ ಹೆಚ್ಚು ಬಾಧಿತವಾಗಿಲ್ಲ. ಈ ರಾಷ್ಟ್ರಗಳು ಅನೇಕ ವರ್ಷಗಳಿಂದ ಐರೋಪ್ಯ ಒಕ್ಕೂಟದಿಂದ ಹೆಚ್ಚು ಲಾಭಪಡೆದಿವೆ. ಅತಿಕಡಿಮೆ ಹಣಕೊಟ್ಟು, ಅತಿಹೆಚ್ಚು ಸಹಾಯ ಪಡೆಯುವ ಫಲಾನುಭವಿ ರಾಷ್ಟ್ರಗಳಿವು. ಈಗ ಇವು ಸಂತ್ರಸ್ತರ ರಾಷ್ಟ್ರಗಳಿಗೆ ಕನಿಷ್ಠ ಫೇಸ್‌ಮಾಸ್ಕ್ಗಳಿಸುವುದಿರಲಿ, ತಮ್ಮ ಗಡಿಗಳನ್ನು ಲಾಕ್ ಮಾಡಿಕೊಂಡು, ಎಲ್ಲಾ ವೈದ್ಯಕೀಯ ಪರಿಕರಗಳನ್ನು ತಮ್ಮಲ್ಲೇ ಜಮೆಮಾಡಿಟ್ಟುಕೊಂಡಿವೆ ಎನ್ನುವುದು ಸ್ಪೇನ್ ವಾಸಿಗಳ ಅಸಮಾಧಾನ. ಆದಾಗ್ಯೂ, ಇಟಲಿ ಹಾಗೂ ಫ್ರಾನ್ಸ್‌ನಿಂದ ಆಕ್ರೋಶ ಹೆಚ್ಚಾದಾಗ ಜರ್ಮನಿ, ಕೆಲ ಇಟಲಿಯನ್ನರನ್ನು ಏರ್‌ಲಿಫ್ಟ್ ಮಾಡಿ ತನ್ನ ದೇಶದಲ್ಲಿ ಚಿಕಿತ್ಸೆ ಕೊಟ್ಟಿದೆಯಾದರೂ, ಯೂರೋಬಾಂಡ್ ಹಂಚಿಕೆಯ ವಿಚಾರದಲ್ಲಿ ಅದು ಅಡಚಣೆ ಮಾಡುತ್ತಿರುವುದರಿಂದಾಗಿ ಕೊರೊನಾ ಸಂತ್ರಸ್ತ ರಾಷ್ಟ್ರಗಳ ಅಸಮಾಧಾನ ಭುಗಿಲೆದ್ದಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡ ಚೀನಾ, ಎಲ್ಲರಿಗಿಂತ ಮೊದಲು ಇಟಲಿ, ಸ್ಪೇನ್, ಫ್ರಾನ್ಸ್‌ಗೆ ಮೆಡಿಕಲ್ ಕಿಟ್‌ಗಳನ್ನು ಕಳುಹಿಸಿಕೊಟ್ಟಿತು. ಈ ರಾಷ್ಟ್ರಗಳೀಗ ಚೀನಾದ ಸಕಾಲಿಕ ಸ್ಪಂದನೆಯನ್ನು ಕೊಂಡಾಡಲಾರಂಭಿಸಿವೆ. ಐರೋಪ್ಯ ಒಕ್ಕೂಟದ ಮಾದರಿ
ಐರೋಪ್ಯ ಒಕ್ಕೂಟವು 27 ರಾಷ್ಟ್ರಗಳ ಸದಸ್ಯತ್ವವಿರುವ ಒಂದು ರಾಜಕೀಯ ಹಾಗೂ ಆರ್ಥಿಕ ಸಹಭಾಗಿತ್ವದ ಒಕ್ಕೂಟವಾಗಿದ್ದು. ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಕೂಟ ಎಂದು ಖ್ಯಾತವಾಗಿದೆ. ಐರೋಪ್ಯ ಒಕ್ಕೂಟದಲ್ಲಿ ಬರುವ ಎಲ್ಲಾ ರಾಷ್ಟ್ರಗಳು ಸಮಾನವಾಗಿ ಅನ್ವಯವಾಗುವಂಥ ನಿಯಮಗಳ ಮೂಲಕ ಒಂದು ಏಕ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಿಕೊಂಡಿವೆ. ಈ ರಾಷ್ಟ್ರಗಳ ನಡುವೆ ಜನರ ಸಂಚಾರ, ಸರಕು, ಸೇವೆಗಳ ಹಾಗೂ ಹೂಡಿಕೆ ಸರಾಗವಾಗಿ ನಡೆಯುವಂಥ ಅದ್ಭುತ ವ್ಯವಸ್ಥೆಯನ್ನು ಐರೋಪ್ಯ ಒಕ್ಕೂಟ ರೂಪಿಸಿಕೊಂಡಿವೆ. ಯಾವುದಾದರೂ ಒಂದು ರಾಷ್ಟ್ರವು ವಿಪತ್ತಿಗೆ ಸಿಲುಕಿತೆಂದರೆ, ಸದಸ್ಯ ರಾಷ್ಟ್ರಗಳೆಲ್ಲ ಕೂಡಲೇ ಅದರ ಸಹಾಯಕ್ಕೆ ಮುಂದಾದ ಉದಾಹರಣೆಗಳು ಬಹಳಷ್ಟಿವೆ. ಆದರೆ, 2015ರಲ್ಲಿ ಮಧ್ಯಪ್ರಾಚ್ಯದಿಂದ ಮಹಾವಲಸೆ ಆರಂಭವಾದ ಸಮಯದಿಂದ ಹಾಗೂ ಬ್ರಿಟನ್‌ನಿಂದ ಬ್ರೆಕ್ಸಿಟ್ ಧ್ವನಿ ಮೊಳಗಿದಾಗಿನಿಂದಲೂ ಐರೋಪ್ಯ ಒಕ್ಕೂಟದಲ್ಲಿನ ಒಗ್ಗಟ್ಟಿನ ಬಗ್ಗೆ ಅಪಸ್ವರಗಳು ಏಳಲಾರಂಭಿಸಿವೆ.
Related Articles
ಕೋವಿಡ್-19 ಸಾಂಕ್ರಾಮಿಕವು, ಜಗತ್ತಿನ ಶಕ್ತಿ ಸಮತೋಲನವನ್ನೂ ಬದಲಿಸಲಾರಂಭಿಸಿದೆ. ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಸಾಂಕ್ರಾಮಿಕ ತಡೆಯಲಾರದೆ ಅಸಹಾಯಕವಾಗಿದೆ, ಅದರ ಅಸಹಾಯಕತೆಯು ಆಕ್ರೋಶದ ರೂಪದಲ್ಲಿ ವ್ಯಕ್ತವಾಗುತ್ತಿದೆ. ಹೀಗಾಗಿ, ಟ್ರಂಪ್ ತಮ್ಮ ದೇಶಕ್ಕೆ ಎದುರಾಗಿರುವ ಕಂಟಕಕ್ಕೆ ಚೀನಾವನ್ನು ದೂಷಿಸುವದರಲ್ಲಿ, ಅನ್ಯ ರಾಷ್ಟ್ರಗಳಿಗೆ ಸಹಾಯ ನಿಲ್ಲಿಸುವುದರಲ್ಲಿ ನಿರತರಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂಥ ಕ್ಲಿಷ್ಟ ಸಮಯದಲ್ಲಿ ವಿಶ್ವ ಆರೋಗ್ಯಸಂಸ್ಥೆಗೆ ಅವರು ಅನುದಾನ ನಿಲ್ಲಿಸಿರುವುದು, ಅಮೆರಿಕದ ನಾಯಕತ್ವಗುಣವನ್ನು ಪ್ರಶ್ನಿಸುವಂತೆ ಮಾಡಿದೆ. ಆದಾಗ್ಯೂ ವಿಶ್ವಾರೋಗ್ಯಸಂಸ್ಥೆ ಆರಂಭಿಕ ಸಮಯದಲ್ಲಿ ಚೀನಾ ಮಾತು ಕೇಳಿ ತಪ್ಪು ಮಾಡಿತು ಎನ್ನುವುದು ನಿಜವಾದರೂ ಈಗ ಅದು ಎಚ್ಚೆತ್ತು ಬಹಳ ಕೆಲಸ ಮಾಡುತ್ತಿದೆ. ಹೀಗಾಗಿ ಅಮೆರಿಕ ಈ ದುಡುಕು ನಿರ್ಧಾರಕ್ಕೆ ಬರಬಾರದಿತ್ತು ಎಂದು ಟೀಕೆ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ 2ನೇ ಸೂಪರ್ ಪವರ್ ಚೀನಾ, ಅಮೆರಿಕದ ವೈಫಲ್ಯದ ಲಾಭ ಪಡೆದು ಜಗತ್ತಿನ ವಿಶ್ವಾಸ ಗಳಿಸಿ ದೊಡ್ಡಣ್ಣನ ಪಾತ್ರ ಪಡೆಯಲು ಪ್ರಯತ್ನಿಸುತ್ತಿದೆಯಾದರೂ, ಕೋವಿಡ್-19 ವಿಷಯದಲ್ಲಿ ಅದರ ಮುಚ್ಚುಮರೆ ಗುಣದಿಂದಲೇ ಇಂದು ಜಗತ್ತು ನೊವನುಭವಿಸುವಂತಾಗಿದೆ ಎಂಬ ಅಸಮಾಧಾನ ವ್ಯಾಪಕವಾಗಿದೆ. ಏಷ್ಯಾದ ವಿಷಯಕ್ಕೆ ಬಂದರೆ, ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತ ನೆರೆ ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಿ ಮೆಚ್ಚುಗೆ ಗಳಿಸುತ್ತಿದೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮಲೇಷ್ಯಾಕ್ಕೆ ಭಾರತ ಅಗತ್ಯ ನೆರವು ನೀಡುತ್ತಿದೆ. ಇದಷ್ಟೇ ಅಲ್ಲದೇ ಹೈಡ್ರಾಕ್ಸಿಕ್ಲೊರೊಕ್ವಿನ್‌ನಂಥ ಪ್ರಮುಖ ಔಷಧವನ್ನು ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್ ಸೇರಿದಂತೆ 36ಕ್ಕೂ ಅಧಿಕ ರಾಷ್ಟ್ರಗಳಿಗೆ ಪೂರೈಸುತ್ತಾ, ಆಪತ್ಕಾಲದಲ್ಲಿ ತನ್ನ ಗುಣಾತ್ಮಕ ನಾಯಕತ್ವವನ್ನು ತೋರುತ್ತಿದ್ದು. ಮುಂಬರುವ ದಿನಗಳಲ್ಲಿ ಈ ರಾಷ್ಟ್ರಗಳು ಭಾರತಕ್ಕೆ ಮತ್ತಷ್ಟು ಆಪ್ತವಾಗಲಿವೆ ಎನ್ನುವುದು ನಿಶ್ಚಿತ.
Advertisement
ಸೈನ್ಯವೇಕೆ ಕಳುಹಿಸಬೇಕು?ವಿಶ್ವಸಂಸ್ಥೆಯ ನ್ಯಾಟೋ ಪಡೆಗಳಂತೆಯೇ, ಐರೋಪ್ಯ ಒಕ್ಕೂಟದಲ್ಲೂ ಶಾಂತಿಪಾಲನಾ ಪಡೆಯಿದ್ದು, ಇದರಲ್ಲಿ ಸದಸ್ಯ ರಾಷ್ಟ್ರಗಳ ಸೈನಿಕರೆಲ್ಲ ಇದ್ದಾರೆ. ಒಂದು ದೇಶ ವಿಪತ್ತಿಗೆ ಸಿಲುಕಿದಾಗ ತ್ವರಿತವಾಗಿ ಸ್ಪಂದಿಸುವುದಕ್ಕೆ, ಶಾಂತಿಪಾಲನೆಗೆ ಈ ಸೈನ್ಯವನ್ನು ಬಳಸಲಾಗುತ್ತದೆ. ಆದರೆ, ಈಗ ಐರೋಪ್ಯ ಒಕ್ಕೂಟದ ಮೇಲೆ ಮುನಿಸಿಕೊಂಡಿರುವ ಫ್ರಾನ್ಸ್, ಸ್ಪೇನ್ ಮತ್ತು ಇಟಲಿ, ತಮ್ಮ ಸೈನಿಕರನ್ನು ಹಿಂಪಡೆಯುವ ಧಮಕಿ ಹಾಕುತ್ತಿವೆ. “ಈ ಪಡೆಯಲ್ಲಿ ಇಟಲಿಯ 6 ಸಾವಿರಕ್ಕೂ ಅಧಿಕ ಯೋಧರಿದ್ದು, ಲೆಬನಾನ್‌ನಂಥ ದೇಶಗಳಲ್ಲಿ ಶಾಂತಿ ಸ್ಥಾಪನೆಗಾಗಿ ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಇತ್ತೀಚೆಗೆ ಅನೇಕ ಐರೋಪ್ಯ ರಾಷ್ಟ್ರಗಳಲ್ಲಿ ತೀವ್ರ ಕಾಡ್ಗಿಚ್ಚು ಕಾಣಿಸಿಕೊಂಡಾಗ ನಮ್ಮ ಯೋಧರು ಸಹಾಯಕ್ಕೆ ಹೋಗಿದ್ದಾರೆ. ಇದನ್ನೆಲ್ಲ ಅಂದು ಸಹಾಯಪಡೆದವರು ಮರೆತಿದ್ದಾರೆ” ಎನ್ನುತ್ತಾರೆ ಇಟಲಿಯ ಆಡಳಿತ ಪಕ್ಷದ ನಾಯಕಿ ನಿಕಿ ಕಾಂಟೆ.