Advertisement

ಕೋವಿಡ್‌ ಮೂರನೇ ಅಲೆ ಭೀತಿ ಶುರು; ತಗ್ಗಿದ ಸೋಂಕಿನ ಸಂಖ್ಯೆ-ನಿಲ್ಲದ ಸಾವಿನ ಪ್ರಮಾಣ

07:37 PM Aug 04, 2021 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಸದ್ಯ ಕೋವಿಡ್‌ ಎರಡನೇ ಅಲೆ ಸೋಂಕಿನ ಪ್ರಮಾಣ ತಗ್ಗಿದ್ದರೂ ಜನತೆ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದ ಪರಿಣಾಮ ಕೋವಿಡ್‌ 3ನೇ ಅಲೆ ಭೀತಿ ಶುರುವಾಗಿದೆ. ಜಿಲ್ಲಾಡಳಿತ ಈಗಿನಿಂದಲೇ ಎಚ್ಚೆತ್ತುಕೊಂಡು ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಜಿಲ್ಲೆಯಲ್ಲಿ ಕೋವಿಡ್‌ 3ನೇ ಅಲೆ ತಡೆಗಟ್ಟಬಹುದಾಗಿದೆ.

Advertisement

ರಾಜ್ಯದೆಲ್ಲೆಡೆ ಕೋವಿಡ್‌ ಎರಡನೇ ಅಲೆ ಅಬ್ಬರ ಜೋರಾಗಿದ್ದಾಗ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆ ಇದ್ದವು. ಆಗ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಪರಿಣಾಮ ಎರಡನೇ ಅಲೆಯ ಮಧ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಜನ ಸೋಂಕಿಗೊಳಗಾದರು. ಇದರ ಪರಿಣಾಮ ಬೆಡ್‌, ಔಷಧೋಪಚಾರಕ್ಕೆ ಪರದಾಡುವಂತಾಗಿತ್ತು. ಬಳಿಕ ಸರಿಯಾದ ಚಿಕಿತ್ಸೆ ಸಿಗದೇ ನೂರಾರು ಜನ ಪ್ರಾಣ ಕಳೆದುಕೊಂಡರು. ಆಸ್ಪತ್ರೆಗೆ ಬರಲಾಗದೇ ಹಲವರು ಮನೆಗಳಲ್ಲೇ ಜೀವ ಕಳೆದುಕೊಂಡರು. ಇಷ್ಟು ಕರಾಳ ದಿನಗಳನ್ನು ಅನುಭವಿಸಿರುವ ಜನತೆ ಈಗೀಗ ಕೊರೊನಾ ಮಾರ್ಗಸೂಚಿಗಳನ್ನೇ ಮರೆತು ಬಿಟ್ಟಿದ್ದು, ಇದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸುವ ಭೀತಿ ಶುರುವಾಗಿದೆ.

ತಗ್ಗದ ಸಾವಿನ ಪ್ರಮಾಣ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ. ನಿತ್ಯವೂ ಎರಡಂಕಿ ಒಳಗೆ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ವಾರದಲ್ಲಿ ಐದಾರು ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ತಗ್ಗಿದರೂ ಸಾವು ಮಾತ್ರ ತಪ್ಪದಿರುವುದು ಮತ್ತಷ್ಟು ಚಿಂತೆಗೀಡು ಮಾಡಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸಾವಿನ ಪ್ರಕರಣಗಳು ಜಿಲ್ಲೆಯಿಂದ ದಾಖಲಾಗಿದ್ದವು. ಹೀಗಾಗಿ ರಾಜ್ಯದ ವಿಶೇಷ ತಜ್ಞ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ವರದಿಯಲ್ಲಿ ಏನಿದೆಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

ಕೋವಿಡ್‌ ಮಾರ್ಗಸೂಚಿ ಕಣ್ಮರೆ: ಕೋವಿಡ್‌ ಕರಾಳ ದಿನಗಳನ್ನು ಕಣ್ಣಾರೆ ಕಂಡು ಅನುಭವಿಸಿರುವ ಕೆಲ ಜನರನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಬಹುತೇಕರು ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಆರಂಭದಲ್ಲಿ ಅನುಸರಿಸಿದ್ದ ನಿಯಮಗಳೆಲ್ಲ ಈಗ ಮಾಯವಾಗಿವೆ. ಸಾಮಾಜಿಕ ಅಂತರವಂತೂ ಎಲ್ಲೂ ಕಾಣಿಸುತ್ತಿಲ್ಲ. ನಗರದ ಪ್ರಮುಖ ಸರ್ಕಲ್‌ಗ‌ಳಲ್ಲಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಡೆಸುವ ಸಂತೆಗಳಲ್ಲಿ ಜನಜಂಗುಳಿ ಕಂಡು ಬರುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವುದು ಕಂಡು ಬರುತ್ತಿದೆ.

ಲಸಿಕಾಕರಣ ಹೆಚ್ಚಾಗಲಿ: ಮಂದಗತಿಯಲ್ಲಿ ಸಾಗುತ್ತಿದ್ದ ಕೋವಿಡ್‌ ಲಸಿಕಾಕರಣ ಪ್ರಕ್ರಿಯೆಗೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ, ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಚುರುಕು ಮುಟ್ಟಿಸಿದ್ದರು. ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದ ಅವರು, ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ಹೆಚ್ಚು ಹಾನಿ ಮಾಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್‌ ವ್ಯಾಕ್ಸಿನ್‌ ನೀಡಿಕೆ ಪ್ರಮಾಣ ಹೆಚ್ಚಳವಾಗಬೇಕು. ನಿತ್ಯ ಕನಿಷ್ಠ 10 ಸಾವಿರ ಜನರಿಗೆ ವ್ಯಾಕ್ಸಿನ್‌ ನೀಡಲೇಬೇಕೆಂದು ತಾಕೀತು ಮಾಡಿದ್ದರು. ಆಗಿನಿಂದ ಈಗ ನಿತ್ಯವೂ 10 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದ್ದು, ಲಸಿಕಾಕರಣ ಚುರುಕುಗೊಂಡಿದೆ. ಈವರೆಗೆ 4,09,844 ಜನರಿಗೆ ಮೊದಲ ಡೋಸ್‌ ನೀಡಲಾಗಿದ್ದರೆ, 98,134 ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. ಈವರೆಗೆ 5,07,978 ಡೋಸ್‌ ಲಸಿಕೆ ಹಾಕಲಾಗಿದೆ. ಆದರೂ ಲಸಿಕಾಕರಣವನ್ನು ಮತ್ತಷ್ಟು ಚುರುಕುಗೊಳಿಸಿ 3ನೇ ಅಲೆಯ ಅಪಾಯದಿಂದ ಪಾರಾಗಬೇಕಿದೆ.

Advertisement

ಸಂಭವನೀಯ ಕೋವಿಡ್‌ 3ನೇ ಅಲೆಯ ಆತಂಕ ಎದುರಾಗುವ ಹಿನ್ನೆಲೆಯಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳ ಚಿಕಿತ್ಸೆಗಾಗಿ ವಿಶೇಷ ವಾರ್ಡ್‌, ಹೆಚ್ಚುವರಿ ಬೆಡ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನತೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಈಗಿನಿಂದಲೇ ಜನರು ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾಗಬೇಕು.
-ಎಚ್‌.ಎಸ್‌.ರಾಘವೇಂದ್ರಸ್ವಾಮಿ, ಡಿಎಚ್‌ಒ

ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next