ತೆಕ್ಕಟ್ಟೆ : ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್ 19 ವೈರಸ್ ತಡೆಗಟ್ಟಲು ಇಡೀ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿದ್ದ ನಡುವೆಯೂ ಕೂಡಾ ಶಂಕಿತ ಕೊರೊನಾ ಪೀಡಿತರಿಗೆ ಆಶ್ರಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುವೆಂಪು ಶತಮಾನೋತ್ಸವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿವಿಧೋದ್ಧೇಶ ಚಂಡಮಾರುತ ಆಶ್ರಯತಾಣ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸುತ್ತಾರೆ ಎನ್ನುವ ವದಂತಿಯಿಂದಾಗಿ ಸ್ಥಳೀಯ ಹಲವು ಮಂದಿ ಸ್ಥಳಕ್ಕೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ರವಿವಾರದಂದು ಸಂಭವಿಸಿದೆ.
ರಾ.ಹೆ.66 ಉಡುಪಿ ಕಡೆಗೆ ವಾಹನದಲ್ಲಿ ತೆರಳುತ್ತಿರುವ ಕುಂದಾಪುರದ ಅಸಿಸ್ಟೆಂಟ್ ಕಮಿಷನರ್ ಕೆ.ರಾಜು ಅವರು ಜನರ ಗುಂಪು ಸೇರಿರುವುದನ್ನು ನೋಡಿ ವಾಹನ ನಿಲ್ಲಿಸಿದಾಗ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಕಾಂಚನ್, ಗ್ರಾ.ಪಂ. ಸದಸ್ಯ ವಿನೋದ ದೇವಾಡಿಗ, ರಾಮಚಂದ್ರ ಕಾಮತ್ ಹಾಗೂ ಕಾರ್ಮಿಕ ಮುಖಂಡ ಸತೀಶ್ ಕುಮಾರ್ ತೆಕ್ಕಟ್ಟೆ ಅವರ ಬಳಿ ವಿವರ ಪಡೆದು ನಂತರ ಸುಳ್ಳು ವದಂತಿಗೆ ತೆರೆಎಳೆದರು.
ನಡೆದುಕೊಂಡು ಸಾಗುತ್ತಿದ್ದ ವಲಸೆ ಕಾರ್ಮಿಕ ವಿವರ ಪಡೆದ ಎಸಿ : ಕುಂದಾಪುರದಿಂದ ಉಡುಪಿ ಕಡೆಗೆ ರಾ.ಹೆ.66 ರಲ್ಲಿ ಕುಂದಾಪುರದ ಅಸಿಸ್ಟೆಂಟ್ ಕಮಿಷನರ್ ಕೆ.ರಾಜು ಅವರು ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿಯ ಬದಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ನಡೆದು ಕುಂದಾಪುರ ಕಡೆಗೆ ಸಾಗುತ್ತಿರುವುದನ್ನು ನೋಡಿ ವಾಹನದಿಂದ ಇಳಿದು ಬಂತು ಕಾರ್ಮಿಕರ ಬಳಿ ತೆರಳಿ ವಿವರ ಪಡೆಯುವ ಜತೆಗೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಆಥವಾ ಬಟ್ಟೆಯನ್ನು ಮುಖಕ್ಕೆ ಅಡ್ಡಲಾಗಿಸಿಕೊಳ್ಳುವಂತೆ ಮಾಹಿತಿ ನೀಡಿದರು.
ಚಿತ್ರ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ .