Advertisement

ಗ್ರಾಮೀಣ ಭಾಗದಲ್ಲಿ ಹೆಚ್ಚಲಿ ಪರೀಕ್ಷೆ

02:05 AM Sep 30, 2020 | Hari Prasad |

ದೇಶಾದ್ಯಂತ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಜನ ಸಾಮಾನ್ಯರು, ಜನ ನಾಯಕರು ಒಟ್ಟಲ್ಲಿ ಎಲ್ಲರೂ ಈ ರೋಗದಿಂದ ತತ್ತರಿಸಿದ್ದಾರೆ.

ಇತ್ತೀಚೆಗಷ್ಟೇ ಈ ವಿಚಾರವಾಗಿ ಪ್ರಧಾನಿ ಮೋದಿ ಅವರು, ಯಾವುದೇ ಕಾರಣಕ್ಕೂ ಈ ಸಾಂಕ್ರಾಮಿಕವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಏಳು ರಾಜ್ಯಗಳಿಗೆ ತಿಳಿಸಿದ್ದರು.

ದೇಶದ ಒಟ್ಟು ಪ್ರಕರಣಗಳಲ್ಲಿ 63 ಪ್ರತಿಶತ ಪಾಲು ಹೊಂದಿರುವ ಈ ರಾಜ್ಯಗಳು ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಮತ್ತು ಚಿಕಿತ್ಸೆಯ ವಿಚಾರಕ್ಕೆ ಮತ್ತಷ್ಟು ವೇಗ ನೀಡಬೇಕಿದೆ.

ಮುಖ್ಯವಾಗಿ, ಕೆಲವು ತಿಂಗಳುಗಳಿಂದ ಕೋವಿಡ್‌-19 ನಗರ ಪ್ರದೇಶಗಳಷ್ಟೇ ಅಲ್ಲದೇ ಗ್ರಾಮೀಣ ಭಾಗಗಳಲ್ಲೂ ತನ್ನ ಬಾಹುಗಳನ್ನು ಚಾಚಿಬಿಟ್ಟಿದೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ವ್ಯವಸ್ಥೆ ದುರ್ಬಲವಾಗಿರುವುದರಿಂದಾಗಿ ಇದು ನಿಜಕ್ಕೂ ಆತಂಕದ ಸಂಗತಿಯೇ ಸರಿ.

Advertisement

ಹಳ್ಳಿಗಳ ಜನರು ಅನಾರೋಗ್ಯಕ್ಕೆ ಈಡಾದರೆ, ಅವರು ಚಿಕಿತ್ಸೆಗಾಗಿ ನಗರಗಳಿಗೆ ಅಥವಾ ಪಟ್ಟಣಗಳಿಗೆ ಬರುವಂಥ ಸ್ಥಿತಿಯಿದೆ. ಇದರಿಂದಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಬೀಳಲಾರಂಭಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕವನ್ನು ತಡೆಯುವುದು ದೊಡ್ಡ ಸವಾಲೇ ಸರಿ. ಈಗಲೂ ಪರೀಕ್ಷೆಗಳು ನಗರ ಪ್ರದೇಶಗಳಿಗೇ ಹೆಚ್ಚು ಸೀಮಿತವಾಗಿವೆ. ಪರೀಕ್ಷೆಯ ಪ್ರಮಾಣದಲ್ಲಿ ದೇಶದ ಗ್ರಾಮೀಣ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತಲೂ ಬಹಳ ಹಿಂದಿವೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಪತ್ತೆಯಾಗದ, ಲಕ್ಷಣ ರಹಿತ ಯುವಕರು ಸಾಂಕ್ರಾಮಿಕವನ್ನು ಹೆಚ್ಚು ಹರಡುವ ಅಪಾಯ ಹೆಚ್ಚಾಗಿದೆ. ಹೀಗಾಗಿ ದೇಶದ ಆರೋಗ್ಯ ವ್ಯವಸ್ಥೆಯ ಗಮನ ಗ್ರಾಮೀಣ ಭಾಗಗಳತ್ತ ಹೆಚ್ಚಾಗಿ ಹರಿಯುವ ಅಗತ್ಯವಿದೆ.

ಇನ್ನು ಈ ವೇಳೆಯಲ್ಲೇ ದೇಶಾದ್ಯಂತ ಹಲವು ಆಸ್ಪತ್ರೆಗಳಿಂದ ಆಮ್ಲಜನಕದ ಕೊರತೆಯ ದೂರುಗಳು ಕೇಳಿಬರಲಾರಂಭಿಸಿವೆ. ಕೇಂದ್ರ ಸರಕಾರವಂತೂ ದೇಶದಲ್ಲಿ ಆಕ್ಸಿಜನ್‌ನ ಸರ್‌ಪ್ಲಸ್‌ ಉತ್ಪಾದನೆಯಿದ್ದು, ಕೊರತೆಯಂತೂ ಖಂಡಿತ ಇಲ್ಲ ಎಂದು ಸ್ಪಷ್ಟಪಡಿಸಿದೆ‌.

ಸಾಗಣೆ ಪ್ರಕ್ರಿಯೆಯಲ್ಲಿ ಸಮಸ್ಯೆ ಇದೆ ಎನ್ನುವ ದೂರು ಅಲ್ಲಿಲ್ಲಿ ಕೇಳಿ ಬರುತ್ತಿದೆಯಾದರೂ ಈ ವಿಚಾರದಲ್ಲಿ ಅಂತಾರಾಜ್ಯಗಳ ನಡುವೆ ಹಸುರು ಮಾರ್ಗವನ್ನು ಸೃಷ್ಟಿಸಲಾಗಿರುವುದರಿಂದ ಸಾಗಣೆ ಪ್ರಕ್ರಿಯೆಗೆ ಯಾವುದೇ ಅಡಚಣೆ ಇಲ್ಲ ಎನ್ನುವುದು ಅಧಿಕಾರ ವರ್ಗದ ವಾದ.

ಕೆಲವು ಆಸ್ಪತ್ರೆಗಳು ಆಮ್ಲಜನಕವನ್ನು ಪೋಲು ಮಾಡುತ್ತಿರುವುದೇ ಈ ಸಮಸ್ಯೆ ಎದುರಿಸುತ್ತಿರುವುದಕ್ಕೆ ಕಾರಣ ಎಂದು ಸರಕಾರದ ಪರಿಶೀಲನೆ ಹೇಳುತ್ತದೆ. ಸರಿಯಾದ ಸಮಯದಲ್ಲಿ ರೋಗಿಗಳಿಗೆ ಆಮ್ಲಜನಕದ ಪೂರೈಕೆ ಮಾಡಿದರೆ ಕೋವಿಡ್‌ ಮರಣ ಪ್ರಮಾಣ ಸಾಕಷ್ಟು ತಗ್ಗುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಈ ಕಾರಣಕ್ಕಾಗಿಯೇ, ರಾಜ್ಯಗಳ ಆರೋಗ್ಯ ವ್ಯವಸ್ಥೆಗಳು ಆಕ್ಸಿಜನ್‌ ಪೂರೈಕೆಯ ಮಹತ್ವವನ್ನು ಅರಿತು, ಅಂತಾರಾಜ್ಯ ಸಹಕಾರದಲ್ಲಿ ಈ ವಿಷಯಕ್ಕೆ ಆದ್ಯತೆ ನೀಡಬೇಕು. ಆಗಲೇ ಹೇಳಿದಂತೆ, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ 19 ಸಾಂಕ್ರಾಮಿಕ ವೇಗವಾಗಿ ಹರಡುತ್ತಿದ್ದು ಸ್ಥಳೀಯ ಪಟ್ಟಣಗಳು ಹಾಗೂ ನಗರಗಳ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತಿದೆ. ಹೀಗಾಗಿ ದೇಶದ ಯಾವುದೇ ಭಾಗದಲ್ಲೂ ಆಕ್ಸಿಜನ್‌ ಕೊರತೆ ಉಂಟಾಗದಿರಲಿ.

Advertisement

Udayavani is now on Telegram. Click here to join our channel and stay updated with the latest news.

Next