ಹರಿದ್ವಾರ: ಈ ಬಾರಿ ಸಂಪನ್ನಗೊಂಡ ಮಹಾಕುಂಭಮೇಳದಲ್ಲಿ ಕೋವಿಡ್ 19 ಪರೀಕ್ಷೆಯ ಹಗರಣಕ್ಕೆ ಸಂಬಂಧಿಸಿದಂತೆ ಹರಿದ್ವಾರ ಜಿಲ್ಲಾಡಳಿತ ಎಫ್ ಐಆರ್ ದಾಖಲಿಸಿಕೊಳ್ಳಬೇಕು ಎಂದು ಉತ್ತರಾಖಂಡ್ ಸರ್ಕಾರ ಗುರುವಾರ(ಜೂನ್ 17) ಆದೇಶ ಹೊರಡಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಯಾರೋ ಒಂದಿರಿಬ್ಬರು ಬಿಟ್ಟರೆ, ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡ್ತಿಲ್ಲ: ರೇಣುಕಾಚಾರ್ಯ
ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಐದು ಸ್ಥಳಗಳಲ್ಲಿ ಕೋವಿಡ್ 19 ಪರೀಕ್ಷೆ ನಡೆಸಿದ್ದ ದೆಹಲಿ ಮತ್ತು ಹರ್ಯಾಣ ಪ್ರಯೋಗಾಲಯದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಾಖಂಡ್ ಸರ್ಕಾರ ಆದೇಶ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾಕುಂಭ ಮೇಳದ ಸಮಯದಲ್ಲಿ ಐದು ಸ್ಥಳಗಳಲ್ಲಿ ನಕಲಿ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂಬ ವರದಿ ಹೊರಬಿದ್ದ ನಂತರ ಈ ಕ್ರಮಕ್ಕೆ ಮುಂದಾಗಿರುವುದಾಗಿ ಸರ್ಕಾರ ತಿಳಿಸಿದ್ದು, ಕುಂಭಮೇಳದ ಸಂದರ್ಭದಲ್ಲಿ ನಡೆಸಿದ್ದ ಸುಮಾರು ಒಂದು ಲಕ್ಷ ಕೋವಿಡ್ 19 ಪರೀಕ್ಷೆ ನಕಲಿ ಎಂದು ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
2021ನೇ ಸಾಲಿನ ಏಪ್ರಿಲ್ 1ರಿಂದ 30ರವರೆಗೆ ಹರಿದ್ವಾರದಲ್ಲಿ ಮಹಾಕುಂಭ ಮೇಳ ನಡೆದಿತ್ತು. ಈ ಸಂದರ್ಭದಲ್ಲಿ ಹರಿದ್ವಾರ ಜಿಲ್ಲೆ, ಋಷಿಕೇಷ ಪ್ರದೇಶ, ಡೆಹ್ರಾಡೂನ್ ಜಿಲ್ಲೆ, ಮುನಿ ಕಿ ರೇಟಿಯ ತೇಹ್ರಿ ಮತ್ತು ಪುರಿಯ ಸ್ವರ್ಗಾಶ್ರಮದಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು.
ಕುಂಭಮೇಳದ ಅವಧಿಯಲ್ಲಿ ನಡೆಸಲಾದ ಕೋವಿಡ್ 19 ಪರೀಕ್ಷೆಯ ಅಂಕಿಅಂಶಗಳನ್ನು ಮತ್ತು ಅದರ ಫಲಿತಾಂಶವನ್ನು ಪಬ್ಲಿಕ್ ಡೊಮೈನ್ ನಲ್ಲಿ ಹಂಚಿಕೊಂಡಿಲ್ಲವಾಗಿತ್ತು. ಅಲ್ಲದೇ ಕೋವಿಡ್ ನಿಂದ ಸಂಭವಿಸಿದ ಸಾವುಗಳು, ಚೇತರಿಸಿಕೊಂಡವರ ಮಾಹಿತಿಯನ್ನೂ ಕೂಡಾ ಹಂಚಿಕೊಂಡಿಲ್ಲ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಮುದಾಯ ಪ್ರತಿಷ್ಠಾನದ ಸಾಮಾಜಿಕ ಅಭಿವೃದ್ಧಿಯ ಅನ್ನೊಪ್ ನೌಟಿಯಾಲ್ ಎಎನ್ ಐಗೆ ತಿಳಿಸಿದ್ದರು.