ಬಂಟ್ವಾಳ, ಸೆ. 27: ದ.ಕ. ಜಿಲ್ಲೆಯಲ್ಲಿ ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣದ ದೃಷ್ಟಿಯಿಂದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ತಪಾಸಣೆ ನಡೆಸುವುದಕ್ಕೆ ನಿರ್ಧರಿಸಲಾಗಿದ್ದು, ಸೆ. 28ರಿಂದ ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ನಡೆಯಲಿದೆ.
ಕೊರೊನಾ ಪರೀಕ್ಷೆ ನಡೆಸುವ ದೃಷ್ಟಿಯಿಂದ ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ.ಗಳು ಸಿದ್ಧತೆ ಮಾಡಿಕೊಂಡಿದ್ದು, ಆಯಾಯ ಪಿಡಿಒ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಉಸ್ತುವಾರಿಯಲ್ಲಿ ತಪಾಸಣೆ ನಡೆಯಲಿದೆ. ಪ್ರಸ್ತುತ ಈ ತಪಾಸಣೆ ಕಡ್ಡಾಯವಿಲ್ಲವಾಗಿದ್ದು, ಜನತೆ ಸ್ವಇಚ್ಛೆಯಿಂದ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಆರೋಗ್ಯ ತೊಂದರೆ (ಹೈರಿಸ್ಕ್) ಇರುವವರು ತಪಾಸಣೆ ನಡೆಸುವುದು ಉತ್ತಮವಾಗಿದೆ. ಇಲ್ಲಿ ಪಾಸಿಟಿವ್ ಬಂದಲ್ಲಿ ಮುಂದಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಪರೀಕ್ಷೆಗೆ ಮುನ್ನ ಒಟಿಪಿ : ಪ್ರತಿಯೊಬ್ಬರ ಪರೀಕ್ಷೆ ನಡೆಸುವ ಮುನ್ನ ಅವರಿಗೆ ಒಂದು ಗುರುತು ಸಂಖ್ಯೆ (ಐಡಿ)ಯನ್ನು ಮಾಡಲಾಗುತ್ತಿದ್ದು, ಅದಕ್ಕೆ ಒಂದು ಒಟಿಪಿ ಇರುತ್ತದೆ. ಹೀಗಾಗಿ ಪರೀಕ್ಷೆಗೆ ತೆರಳುವವರ ಬಳಿ ಮೊಬೈಲ್ ಇರಬೇಕಾಗುತ್ತದೆ. ಒಂದು ಮನೆಯಿಂದ ಒಂದಕ್ಕಿಂತ ಹೆಚ್ಚಿನ ಮಂದಿ ತೆರಳುವುದಾದರೆ ಒಂದೇ ಮೊಬೈಲ್ ಸಾಕಾಗುತ್ತದೆ. ಪ್ರತಿಯೊಬ್ಬರ ಪರೀಕ್ಷೆಯು ಗುಪ್ತ ಕಾರ್ಯಾಚರಣೆ (ಕಾನ್ಫಿಡೆನ್ಶಿಯಲ್)ಯಾಗಿದ್ದು, ಪರೀಕ್ಷೆಗೆ ಕಳುಹಿಸುವ ವೇಳೆಗೆ ಐಡಿ ಸಂಖ್ಯೆ ಮಾತ್ರ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಂಟ್ವಾಳ ತಾ|ನ 58 ಗ್ರಾ.ಪಂ.ಗಳು, 2 ನಗರ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲೂ ತಪಾಸಣೆ ನಡೆಯಲಿದೆ. ತಾ|ನ ಅಡ್ಯನಡ್ಕ ಪ್ರಾ. ಆ.ಕೇಂದ್ರ ವ್ಯಾಪ್ತಿಯಲ್ಲಿ 2 ಗ್ರಾ.ಪಂ., ಅಳಿಕೆಯಲ್ಲಿ 1, ಬೆಂಜನಪದವು 3, ದೈವಸ್ಥಳ 3, ಕಲ್ಲಡ್ಕ ಬಾಳ್ತಿಲ 3, ಕನ್ಯಾನ 2, ಕುರ್ನಾಡು 5, ಮಾಣಿ 9, ಮಂಚಿ 4, ನಾವೂರು 1, ಪಂಜಿಕಲ್ಲು 2, ಪೆರುವಾಯಿ 2, ಪುದು 4, ಪುಂಜಾಲಕಟ್ಟೆ, ರಾಯಿ 5, ಸಜೀಪನಡು 3, ವಾಮದಪದವು 2 ಗ್ರಾ.ಪಂ.ಗಳು, ವಿಟ್ಲ ಪ.ಪಂ. ಸಹಿತ 5, ಜತೆಗೆ ನಗರ ಭಾಗದಲ್ಲಿಯೂ ತಪಾಸಣೆ ನಡೆಯಲಿದ್ದು, ಬಂಟ್ವಾಳ ನಗರ ಆರೋಗ್ಯ ಕೇಂದ್ರದಲ್ಲಿ 4 ಗ್ರಾಮಗಳ ನಿವಾಸಿಗಳಿಗೆ ತಪಾಸಣೆ ನಡೆಯಲಿದೆ.
ಪ್ರತಿಯೊಂದು ಕಡೆಯೂ ಸ್ಥಳೀಯ ಗ್ರಾ.ಪಂ. ಪಿಡಿಒಗಳು ಹಾಗೂ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ನಿಗದಿತ ಸ್ಥಳದಲ್ಲಿ ಕೋವಿಡ್-19 ತಪಾಸಣೆ ನಡೆಯುತ್ತದೆ. ತಪಾಸಣೆ ಮೊದಲು ಒಟಿಪಿ ಬರುವುದರಿಂದ ಮೊಬೈಲ್ ಬೇಕಾಗುತ್ತದೆ. ಸ್ವಇಚ್ಛೆಯಿಂದ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ತಿಳಿಸಲಾಗಿದೆ.
-ಡಾ| ದೀಪಾ ಪ್ರಭು ತಾಲೂಕು ಆರೋಗ್ಯಾಧಿಕಾರಿ, ಬಂಟ್ವಾಳ
ಜಿಲ್ಲಾಡಳಿತದ ಸೂಚನೆಯಂತೆ ಸೆ. 28ರಂದು ನಿಗದಿಪಡಿಸಲಾದ ಗ್ರಾ.ಪಂ. ಮತ್ತು ಪುತ್ತೂರು ನಗರಸಭೆಯಲ್ಲಿ ಕೋವಿಡ್ ಪರೀಕ್ಷೆ ನಡೆಯಲಿದೆ. ಸಾರ್ವಜನಿಕರು ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಬಂದ್ ಪರಿಣಾಮ ಭೇಟಿ ನೀಡಿದವರ ಸಂಖ್ಯೆ ಕಡಿಮೆಇದ್ದಲ್ಲಿ ಇನ್ನೊಂದು ದಿನ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಗುವುದು.
-ಅಶೋಕ್ ಕುಮಾರ್ ರೈ ತಾಲೂಕು ಆರೋಗ್ಯಾಧಿಕಾರಿ, ಪುತ್ತೂರು
ಪರೀಕ್ಷೆ ಕಡ್ಡಾಯವಿಲ್ಲದಿದ್ದರೂ 60 ವರ್ಷ ಪ್ರಾಯ ಮೇಲ್ಪಟ್ಟವರು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಅಸೌಖ್ಯದಿಂದ ಬಳಲುತ್ತಿರುವವರು, ಬಿಪಿ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಆಸ್ಪತ್ರೆಯಲ್ಲಿರುವ ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿರುವವರು ಹಾಗೂ 10 ವರ್ಷ ಪ್ರಾಯದೊಳಗಿನ ಮಕ್ಕಳು ಪರೀಕ್ಷೆಗೊಳಪಡಿಸುವುದು ಉತ್ತಮ. ಇದರಿಂದ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.
-ಡಾ| ಕಲಾಮಧು ತಾಲೂಕು ಆರೋಗ್ಯಾಧಿಕಾರಿ, ಬೆಳ್ತಂಗಡಿ